ಸೋಮವಾರ, ಜನವರಿ 20, 2020
25 °C

ವ್ಯಾಪಾರ ಒಪ್ಪಂದ ವಿಳಂಬ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಭಾರತ ಮತ್ತು ಐರೋಪ್ಯ ಒಕ್ಕೂಟಗಳು ಫೆಬ್ರುವರಿ ಎರಡನೆಯ ವಾರದಲ್ಲಿ ನಡೆಯಲಿರುವ ಶೃಂಗಸಭೆಗೂ ಮುನ್ನವೇ ಸಹಿ ಮಾಡುವ ಸಾಧ್ಯತೆ ಇಲ್ಲ ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯ ಅಧಿಕಾರಿ ಬ್ಯಾರೊನೆಸ್ ಕ್ಯಾಥರಿನ್ ಆಷ್ಟನ್ ಹೇಳಿದರು.ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ 12ನೆಯ ಶೃಂಗಸಭೆಗೆ ಪೂರ್ವಭಾವಿಯಾಗಿ ಸೋಮವಾರ ಇಲ್ಲಿ ಆಯೋಜಿಸಲಾಗಿದ್ದ ಸಚಿವರ ಮಟ್ಟದ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡ ನಂತರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರೊಂದಿಗೆ ಆಷ್ಟನ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.`ಭಾರತ ಮತ್ತು ಐರೋಪ್ಯ ಒಕ್ಕೂಟ ಸಹಿ ಮಾಡಲಿರುವ `ಎಫ್‌ಟಿಎ~ ಒಪ್ಪಂದಕ್ಕೆ ಬಹಳಷ್ಟು ಮಹತ್ವ ಇದೆ. ಆದರೆ, ಇದಕ್ಕೆ ರಾಜಕೀಯ ವಲಯದಿಂದ ಒಪ್ಪಿಗೆ ದೊರೆಯಲು ಸ್ವಲ್ಪ ಸಮಯ ಬೇಕು. ಈ ಒಪ್ಪಂದ ಅನುಷ್ಠಾನಗೊಂಡ ನಂತರ ಭಾರತ ಮತ್ತು ಐರೋಪ್ಯ ರಾಷ್ಟ್ರಗಳ ಕಂಪೆನಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ~ ಎಂದು ಅವರು ಹೇಳಿದರು.ಎರಡೂ ಕಡೆಯ ಅಧಿಕಾರಿಗಳು ಈ ಒಪ್ಪಂದದ ಕುರಿತು ಕೆಲವು ಸಭೆಗಳನ್ನು ನಡೆಸಿದ್ದಾರೆ. ಒಪ್ಪಂದದ ತಾಂತ್ರಿಕ ಸಮಸ್ಯೆಗಳು ಪರಿಹಾರವಾದ ತಕ್ಷಣ, ಐರೋಪ್ಯ ರಾಷ್ಟ್ರಗಳ ರಾಜಕೀಯ ವಲಯ ಈ ಕುರಿತು ಗಮನ ಹರಿಸಲಿದೆ ಎಂದು ಹೇಳಿದರು. ಭಾರತ ಮತ್ತು ಐರೋಪ್ಯ ರಾಷ್ಟ್ರಗಳ ನಡುವೆ `ಎಫ್‌ಟಿಎ~ ಅನುಷ್ಠಾನಕ್ಕೆ ತರುವ  ಕುರಿತು 2007ರಿಂದ ಇಲ್ಲಿಯವರೆಗೆ ಸುಮಾರು 13 ಬಾರಿ ಮಾತುಕತೆಗಳು ನಡೆದಿವೆ.ಕಡಲ್ಗಳ್ಳರ ಹಾವಳಿ: ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಕಡಲ್ಗಳ್ಳರ ಹಾವಳಿ ನಿಯಂತ್ರಿಸುವಲ್ಲಿ ಐರೋಪ್ಯ ರಾಷ್ಟ್ರಗಳು ಭಾರತಕ್ಕೆ ಸಂಪೂರ್ಣ ಸಹಕಾರ ನೀಡಲಿವೆ ಎಂದೂ ಆಷ್ಟನ್ ಭರವಸೆ ನೀಡಿದರು.`ಸೊಮಾಲಿಯಾದಲ್ಲಿ ಕಡಲ್ಗಳ್ಳರು ಭಾರತೀಯರನ್ನು ಒತ್ತೆಯಿರಿಸಿಕೊಂಡಿದ್ದ ಘಟನೆಯ ಅರಿವು ನಮಗಿದೆ. ಕಡಲ್ಗಳ್ಳತನ ಮತ್ತು ಭಾರತದ ಪ್ರಜೆಗಳನ್ನು ಒತ್ತೆಇರಿಸಿಕೊಳ್ಳುವ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ~ ಎಂದರು. ಹೆಚ್ಚಿನ ಬಾಂಧವ್ಯ : ವ್ಯಾಪಾರ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಜೊತೆ ಹೆಚ್ಚಿನ ಬಾಂಧವ್ಯ ಹೊಂದುವ ಕುರಿತೂ ಐರೋಪ್ಯ ರಾಷ್ಟ್ರಗಳು ಆಸಕ್ತಿ ತೋರಿಸಿವೆ. ಸಾಂಸ್ಕೃತಿಕ ವಿನಿಮಯ ಮತ್ತು ಇಂಧನ ಹಂಚಿಕೆ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕೃಷ್ಣ ತಿಳಿಸಿದರು.

ಪ್ರತಿಕ್ರಿಯಿಸಿ (+)