ಭಾನುವಾರ, ಮಾರ್ಚ್ 7, 2021
28 °C

ವ್ಯಾಪ್ತಿ ಪ್ರದೇಶದ ಒಳಗೆ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾಪ್ತಿ ಪ್ರದೇಶದ ಒಳಗೆ..

ನೀನು ಮಾಡಿದ ಮೆಸೇಜಿನಲ್ಲಿ `ಐ ಲವ್   ಯೂ....~ ಅಂತ ಬರೆದಿತ್ತು. `ನಿಜವಾಗ್ಲೂ?~ ಅಂತ ರಿಪ್ಲೈ ಮಾಡಿದೆ. ನೀನು, ನಿಜವಾಗ್ಲೂ ಅಂದೆಯಾದರೂ ಮನಸ್ಸು ಒಪ್ಪಲು ಹಿಂದೇಟು ಹಾಕಿತು. ಈ ನಿನ್ನ ನಡೆ ನನ್ನಲ್ಲಿ ಅಚ್ಚರಿ ಜೊತೆಗೆ ಸಂಶಯವನ್ನೂ ಮೂಡಿಸಿತ್ತು.ಹಿಂದೊಮ್ಮೆ ಆ ದಿನ, ದಿನಾಂಕ ನನಗೆ ಇವತ್ತಿಗೂ ನೆನಪಿದೆ. 14ನೇ ಫೆಬ್ರುವರಿ, ಮಂಗಳವಾರ. ನಾನು ನಿನಗೆ ಪ್ರೀತಿಸುತ್ತೇನೆ ಅನ್ನೋದು ಹೇಳಬೇಕೆಂದು ಹಿಂದಿನ ಇಡೀ ರಾತ್ರಿ ಪೂರ್ತಿ ಕವನದಂಥದೊಂದು ಏನೋ ಗೀಚಿಕೊಂಡು ನಿನ್ನ ಮುಂದೆ ಹಾಜರಾಗಿದ್ದೆ.ಈ ಪ್ರೀತಿ ಗ್ರೀತಿ ಅಂದರೇನೆ ನನಗೆ ಆಗಲ್ಲ. ನನಗೆ ಓದು ಮುಖ್ಯ ನಾನು ಇಲ್ಲಿ ಬಂದಿರೋದು ಓದೋಕೆ. ನೀನೂ ಇಂತಹ ಹುಚ್ಚುತನಗಳನ್ನೆಲ್ಲ ಬಿಟ್ಟು ಸರಿಯಾಗಿ ಓದು, ಪರೀಕ್ಷೆ ಇನ್ನೇನು ದೂರವಿಲ್ಲ. ನಿನ್ನ ತಂದೆ ತಾಯಿಗಳೆಲ್ಲ ಮೊದಲೇ ಕಷ್ಟದಲ್ಲಿದ್ದಾರೆ. ಸರಿಯಾಗಿ ಓದಿ ಅವರಿಗೆ ಆಸರೆ ಆಗುವಂತಹ ಯಾವುದಾದರೂ ಕೆಲಸ ಪಡೆದಿಕೋ~ ಎಂಬ ನಿರ್ಭಾವುಕವಾದ ಭಾಷಣವೇ ಒಪ್ಪಿಸಿದ್ದೆ.ಆ ನಿನ್ನ ನಿರ್ಭಾವುಕತನದ ಮಾತುಗಳು ನನ್ನ ಮನಸ್ಸು ಕೇಳಿದ ಪ್ರಶ್ನೆಗಳಿಗೆ ಉತ್ತರಗಳೇ ಅಲ್ಲ. ಬರೀ ನಿನ್ನದೆ ಪ್ರತಿಬಿಂಬ ಇದ್ದ ಮನಸ್ಸಿನ ಕನ್ನಡಿ, ಇನ್ನೆಂದೂ ಜೋಡಣೆಯೇ ಆಗದಂತೆ ಒಡೆದು ಜೋರಾಗಿ ಹೋಗಿತ್ತು. ಕೈಯೊಳಗಿನ ಕವನದ ಕಾಗದ ಮುದ್ದೆಯಾಗಿ, ಅಕ್ಷರಗಳೆಲ್ಲ ಚದುರಿಹೋದ ಅನುಭವ.ಆರ್ದ್ರಗೊಂಡ ಹೃದಯದ ತುಂಬ ನಿನ್ನನ್ನು ಕಳೆದುಕೊಂಡ ವಿಷಾದ. ಪ್ರೀತಿ ಓದಲು ಬಿಡುವುದಿಲ್ಲ ಅನ್ನೋದು ನನಗೆ ಅವತ್ತೆ ಗೊತ್ತಾದದ್ದು. ನನ್ನ ಮುಂದೆ ನೀನು ಹೇಳಿದ `ಓದು~ ಅನ್ನೋ ಶಬ್ದವೇ ಗೋಚರವಾಗತೊಡಗಿತು.ಮುಂದೆ, ನಿನಗೆ ನಮ್ಮ ಕಾಲೇಜಿನ ಕ್ಲಾಥ್‌ಕಿಂಗ್, ಬೈಕ್ ಸರದಾರ ಇಷ್ಟವಾದ ಸುದ್ದಿ ಗೊತ್ತಾಗದೆ ಇರಲಿಲ್ಲ. ಅವನು ನನ್ನ ಸ್ನೇಹಿತನೆ ಆದ್ದರಿಂದ `ನೀನೇ ಅದೃಷ್ಟವಂತಲೇ~ ಎಂದು ಸುಮ್ಮನಾದೆ. ಸುಮ್ಮನಿರಲು ಆಗದೆ ಅಬ್ಬೇಪಾರಿಯಾಗಿ ಅಲೆದೆ. ಏಕಾಂಗಿಯಾಗಿ ಶೂನ್ಯವನ್ನೆ ತಡಕಾಡಿದೆ.ಇವತ್ತು ಇಂತಹ ಸಮಯದಲ್ಲಿ ನಿನ್ನ ಮೆಸೇಜು ಬಂದಿದೆ. ನಾನು ಏನೆಂದು ತಿಳಿದುಕೊಳ್ಳಲಿ ಹೇಳು? ಎಲ್ಲಿ ನನ್ನ ಜೀವನವೇ ಪೋಲು ಆಗಿ ಹೋಗಬಾರದೆಂಬ ದುಗುಡವಿದೆ ನನಗೆ, ನೀನು ಇಷ್ಟಪಟ್ಟ ಹುಡುಗನಿಂದಲೇ ಮೋಸ ಹೋದದ್ದಕ್ಕಾಗಿ ನನಗೂ ಬೇಜಾರಿದೆ.ಹೋಗಲಿ ಹಿಂದಿನದೆಲ್ಲವನ್ನು ಮರೆತುಬಿಡು. ಇವತ್ತಿಗೂ ನನಗೆ ನಿನ್ನ ಮೇಲೆ ಕಿಂಚಿತ್ತು ಪ್ರೀತಿ ಕಡಿಮೆ ಆಗಿಲ್ಲ. ಬಹುಶಃ ಆಗಲಾರದು. ನೋವು ಕೊಡುವ ಸಂಗತಿಗಳನ್ನು ತುಂಬಾ ಬೇಗ ಮರೆತುಬಿಡಬೇಕು. ನನಗೆ ಅಂಥಹ ಮರೆವಿನ ವರ ಕೊಟ್ಟ ಭಗವಂತನಿಗೊಂದು ಸಲಾಮು.ದಿನಕ್ಕೊಂದು ಸಿಮ್ ಬದಲಾಯಿಸೋ ಸ್ನೇಹಿತರ ಮಧ್ಯೆದಲ್ಲಿ ಇವತ್ತಿಗೂ ಅದೇ ನಂಬರಿದೆ.ಅದಕ್ಕೆ ಕಾರಣ, ಆ ನಂಬರ್ ನಿನಗೆ ಗೊತ್ತು ಅನ್ನೋದು. ಒಂದಲ್ಲ ಒಂದು ದಿನ ಆ ದಿನ ಬಂದೆ ಬರುತ್ತೇ ಅಂದುಕೊಂಡು ಕಾಯುತ್ತಲೇ ಇದ್ದೆ. ಯಾವತ್ತು `ವ್ಯಾಪ್ತಿ ಪ್ರದೇಶದ ಹೊರಹೋಗದಂತೆ~ ನೋಡಿಕೊಂಡ ನಂಬರ್ ಅದು ನೀನಿದ್ದಂತೆ ನನ್ನ ಹೃದಯದ ಪರಿಧಿಯ ವ್ಯಾಪ್ತಿಯೊಳಗೆ ಇಂದು, ಎಂದು, ಎಂದೆಂದಿಗೂ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.