ಶನಿವಾರ, ಏಪ್ರಿಲ್ 17, 2021
30 °C

ಶಂಕರ್ ಎಂಬ ಮಹಾಗೋಡೆ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆರು ಹಾಕಿ ಫೈನಲ್‌ಗಳಲ್ಲಿ (ತಲಾ ಮೂರು ಒಲಿಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟ) ಅವರು ಆಡಿದರು. ಅವುಗಳ ಪೈಕಿ ನಾಲ್ಕರಲ್ಲಿ ಒಂದೇ ಒಂದು ಗೋಲನ್ನೂ ಈ ಆಟಗಾರ ಎದುರಾಳಿಗೆ ಬಿಟ್ಟು ಕೊಡಲಿಲ್ಲ.`ರಾಕ್ ಆಫ್ ದ ಜಿಬ್ರಾಲ್ಟರ್~ ಎಂಬ ಖ್ಯಾತಿಗೆ ಒಳಗಾದ ಭಾರತದ ಹೆಸರಾಂತ ಗೋಲ್ ಕೀಪರ್ ಶಂಕರ್ ಲಕ್ಷ್ಮಣ ಅವರ ಆಟದ ಸಣ್ಣದೊಂದು ಝಲಕ್ ಇದು. 1956ರಲ್ಲಿ ನಡೆದ ಮೆಲ್ಬರ್ನ್ ಒಲಿಂಪಿಕ್ ಕೂಟದಲ್ಲಿ ಭಾರತ ಫೈನಲ್ ಸೇರಿದಂತೆ ತಾನಾಡಿದ ಐದು ಪಂದ್ಯಗಳಲ್ಲಿ 38 ಗೋಲುಗಳನ್ನು ಬಾರಿಸಿತು.ಪ್ರತಿಯಾಗಿ ಎದುರಾಳಿ ತಂಡದ ಯಾವುದೇ ಸ್ಟ್ರೈಕರ್‌ಗಳಿಂದ ಒಂದು ಸಲವೂ ಚೆಂಡನ್ನು ಗೋಲು ಪೆಟ್ಟಿಗೆಗೆ ಕಳಿಸಲು ಸಾಧ್ಯವಾಗಲಿಲ್ಲ. ಸಾರಾಸಗಟಾಗಿ ಎಲ್ಲ ತಂಡಗಳಿಗೂ ಶೂನ್ಯ ಸುತ್ತುವಂತೆ ಮಾಡಿದ್ದರು ಶಂಕರ್.`ಶಂಕರ್, ಕಾಲಿಗೆ ಕಟ್ಟಿದ್ದು ಪ್ಯಾಡುಗಳನ್ನಲ್ಲ; ಕಲ್ಲಿನ ಗೋಡೆಗಳನ್ನು~ ಎಂದು ಜಗತ್ತಿನ ಮುಂಚೂಣಿ ಪತ್ರಿಕೆಗಳು ಆಗ ಬರೆದಿದ್ದವು. ಆಸ್ಟ್ರೇಲಿಯಾದ ಹಾಕಿ ಮ್ಯಾಗಜಿನ್, `ಈ ಗೋಲ್ ಕೀಪರ್ ಪಾಲಿಗೆ ಹಾಕಿ ಚೆಂಡು ಕೂಡ ಫುಟ್‌ಬಾಲ್ ಚೆಂಡಿನಂತೆಯೇ ಕಾಣುತ್ತದೆ~ ಎಂದು ಹಾಡಿ ಹೊಗಳಿತ್ತು.1956 (ಮೆಲ್ಬರ್ನ್), 1960 (ರೋಮ್) ಹಾಗೂ 1964 (ಟೋಕಿಯೊ)ರ ಒಲಿಂಪಿಕ್ ಕೂಟಗಳಲ್ಲಿ ಅವರು ಭಾರತ ಹಾಕಿ ತಂಡದಲ್ಲಿ ಆಡಿದ್ದರು. 1956 ಹಾಗೂ 1964ರಲ್ಲಿ ತಂಡ ಬಂಗಾರದ ಬೆಳೆ ತೆಗೆದರೆ, 1960ರಲ್ಲಿ ರಜತದ ಪದಕಕ್ಕೆ ತೃಪ್ತಿಪಟ್ಟಿತ್ತು.

ಮಧ್ಯ ಪ್ರದೇಶದ ಮಿಲಟರಿ ನೆಲೆಯಾದ ಮಾವ್ ಪಟ್ಟಣಕ್ಕೆ ಹೊಂದಿಕೊಂಡ ಕೊಡಾರಿಯಾ ಎಂಬ ಪುಟ್ಟ ಹಳ್ಳಿಗೆ ಸೇರಿದವರು ಶಂಕರ್.ಮರಾಠಾ ಲೈಟ್ ಇನ್‌ಫೆಂಟ್ರಿ (ಎಂಎಲ್‌ಐಆರ್‌ಸಿ)ಗೆ ಸೇನಾನಿಯಾಗಿ ಸೇರಿದ ಮೇಲೆ ಅವರು, ಕಾರ್ಯ ನಿರ್ವಹಿಸಿದ್ದು ಬೆಳಗಾವಿಯಲ್ಲಿ. ಹೀಗಾಗಿ ಜಗತ್ತಿನ ಮೆಚ್ಚುಗೆಗೆ ಪಾತ್ರವಾದ ಈ ಗೋಲ್ ಕೀಪರ್ ನಮ್ಮವರೆಂಬ ಅಭಿಮಾನ ರಾಜ್ಯದ ಹಳೆಯ ತಲೆಮಾರಿನ ಹಾಕಿಪ್ರಿಯರದಾಗಿದೆ.ತಮ್ಮ 14ನೇ ವಯಸ್ಸಿನಲ್ಲಿ (1947) ಬ್ಯಾಂಡ್ಸ್‌ಮ್ಯಾನ್ ಆಗಿ ಸೈನ್ಯಕ್ಕೆ ಸೇರಿದ ಅವರು, ಎಂಎಲ್‌ಐಆರ್‌ಸಿ ಐದನೇ ಬೆಟಾಲಿಯನ್‌ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಿವೃತ್ತರಾಗುವಾಗ ಅವರು ಸುಬೇದಾರ್ ಮೇಜರ್ ಆಗಿದ್ದರು. ಬೆಳಗಾವಿಯಲ್ಲಿ ಬಿಡಾರ ಹೂಡಿದ್ದಾಗ `ಗ್ಲೋಬ್ ಥಿಯೇಟರ್ ಗ್ರೌಂಡ್~ ಎಂದೇ ಹೆಸರಾದ ಮಿಲಿಟರಿ ಮೈದಾನದಲ್ಲಿ ಅವರು ಪ್ರತಿನಿತ್ಯ ಅಭ್ಯಾಸ ನಡೆಸುತ್ತಿದ್ದರು.ಹೆಮ್ಮೆಯ ಸೇನಾನಿಗಳ ಈ ನಿತ್ಯದ ಸಮರವನ್ನು ನೋಡಲು ಹಾಕಿಪ್ರಿಯರು ಕ್ರೀಡಾಂಗಣಕ್ಕೆ ಲಗ್ಗೆ ಇಡುತ್ತಿದ್ದರು.ಬೆಳಗಾವಿ ಆ ದಿನಗಳಲ್ಲಿ ಹಾಕಿ ಕ್ರೀಡೆಯ ಬೀಡಾಗಿತ್ತು. ಹಲವು ಚಾಂಪಿಯನ್‌ಷಿಪ್‌ಗಳು ನಡೆಯುತ್ತಿದ್ದವು. ಎಲ್ಲ ಟೂರ್ನಿಗಳಲ್ಲಿ ಸ್ಪರ್ಧಿಸುತ್ತಿದ್ದ ಎಂಎಲ್‌ಐಆರ್‌ಸಿ ಬಹುತೇಕ ಟ್ರೋಫಿಗಳನ್ನು ತಾನೇ ಹೊತ್ತೊಯ್ಯುತ್ತಿತ್ತು. `ಚೀನಾದ ಮಹಾಗೋಡೆಯಂತೆ ಚೆಂಡು ಮತ್ತು ಗೋಲು ಪೆಟ್ಟಿಗೆ ಮುಂದೆ ಶಂಕರ್ ನಿಂತಿರುತ್ತಿದ್ದರು~ ಎಂದು ಆಗಿನ ದಿನಗಳ ಮೆಲುಕು ಹಾಕುತ್ತಾರೆ ಅವರ ವಿರುದ್ಧದ ತಂಡದಲ್ಲಿ ಆಡಿದ್ದ ಶ್ಯಾಮ್ ದಮುನೆ.ಬೆಳಗಾವಿಯವರೇ ಆದ ಬಂಡು ಪಾಟೀಲ, ಶಾಂತಾರಾಮ್ ಜಾಧವ್ ಹಾಗೂ ಶಂಕರ್ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ಅವರು ಹೇಳುತ್ತಾರೆ. ಈ ಗೋಲ್ ಕೀಪರ್ ತಮ್ಮ ಕ್ರೀಡಾ ಜೀವನವನ್ನು ಶುರುಮಾಡಿದ್ದು ಫುಟ್‌ಬಾಲ್ ಕ್ರೀಡೆಯ ಮೂಲಕ ಎನ್ನುವ ಕುತೂಹಲದ ಅಂಶವನ್ನೂ ಅವರು ತೆರೆದಿಡುತ್ತಾರೆ.ಕಾಲಿಗೆ ಕಟ್ಟಿದ ಪ್ಯಾಡ್ ಬಿಟ್ಟರೆ ದೇಹವನ್ನು ಗಾರ್ಡ್ ಮಾಡಲಿಕ್ಕೆ ಆಗ ಯಾವುದೇ ಸಾಧನಗಳು ಇರಲಿಲ್ಲ. ತೋಪಿನಿಂದ ಸಿಡಿದು ಬರುವ ಮದ್ದಿನಂತೆ ತೂರಿ ಬರುತ್ತಿದ್ದ ಚೆಂಡಿಗೆ ಅಡ್ಡಗಟ್ಟುತ್ತಿದ್ದರು ಶಂಕರ್.1956ರ ಒಲಿಂಪಿಕ್ ಕೂಟದ ಹಾಕಿ ಫೈನಲ್‌ನಲ್ಲಿ ಪ್ರಶಸ್ತಿ ಹಸಿವಿನಿಂದ ಬೇಟೆಗಿಳಿದಿದ್ದ ಪಾಕಿಸ್ತಾನ ಡಜನ್‌ಗಟ್ಟಲೆ ಪೆನಾಲ್ಟಿ ಕಾರ್ನರ್ ಅವಕಾಶ ಗಿಟ್ಟಿಸಿತ್ತು. ಚೆಂಡು ಭಾರತದ ಅಂಗಳದತ್ತಲೇ ಹೆಚ್ಚಾಗಿ ಸುಳಿದಾಡಿತ್ತು. ಆದರೆ, ಶಂಕರ್ ಆ ಪ್ರವಾಹಕ್ಕೆ ಎದೆಯೊಡ್ಡಿ ನಿಂತರು.1960ರ ಒಲಿಂಪಿಕ್ ಕೂಟದಲ್ಲಿ ಮಾತ್ರ ಎದುರಾಳಿಯಿಂದ ಪಾಕ್ ಗೋಲು ಗಳಿಸದಂತೆ ತಡೆಯುವಲ್ಲಿ ಅವರು ವಿಫಲವಾಗಿದ್ದರು. ಅವರ ಕೈಯಿಂದ ಜಾರಿದ ಚೆಂಡು ಬಂಗಾರದ ಪದಕವನ್ನೂ ಎಳೆದುಕೊಂಡು ಹೋಯಿತು. ಈ ನೋವನ್ನು ಮುಂದಿನ ನಾಲ್ಕು ವರ್ಷಗಳವರೆಗೆ ಶಂಕರ್ ಮರೆಯಲಿಲ್ಲ.1964ರ ಕೂಟದ ಫೈನಲ್‌ನಲ್ಲಿ ಎಂತಹ ದಾಳಿಯೇ ಎದುರಾದರೂ ಗೋಲು ಬಿಟ್ಟುಕೊಡದೆ ಗೆಲುವಿನ ರೂವಾರಿ ಎನಿಸಿದರು. ಪಂದ್ಯ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿ ಇದ್ದಾಗ ಪಾಕಿಸ್ತಾನಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತು. ಆಗಿನ ಕಾಲದ ಭಯಾನಕ ಫಾರ್ವರ್ಡ್ ಆಟಗಾರ ಮುನೀರ್ ದರ್ ಎದುರಿಗೆ ನಿಂತ ಸ್ಟ್ರೈಕರ್ ಆಗಿದ್ದರು. ಗೋಲು ಪೆಟ್ಟಿಗೆಯತ್ತ ನುಗ್ಗಿ ಬರುತ್ತಿದ್ದ ಚೆಂಡಿಗೆ ಶಂಕರ್ ಹಾರಿಬಿದ್ದು ಚೆಂಡನ್ನು ತಡೆದರು. ಆಮೇಲೆ ಗೆದ್ದ ಖುಷಿಯಲ್ಲಿ ಹೃದಯ ತುಂಬಿ ಅತ್ತರು.ಹೆಕ್ಕಿದಷ್ಟೂ ಸಿಗುವ ಇಂತಹ ಅವರ ನೆನಪುಗಳು ಮೈನವಿರೇಳಿಸುವಂತೆ ಮಾಡುತ್ತವೆ. ರಾಷ್ಟ್ರೀಯ ತಂಡದ ನಾಯಕನ ಹುದ್ದೆಗೇರಿದ ಜಗತ್ತಿನ ಮೊಟ್ಟಮೊದಲ ಗೋಲ್ ಕೀಪರ್ ಎಂಬ ದಾಖಲೆಗೆ ಯಾವಾಗಲೂ ಇವರೇ ವಾರಸುದಾರ. `ತಾಂತ್ರಿಕವಾಗಿ ಇವರಷ್ಟು ಪಳಗಿದ ಆಟಗಾರನನ್ನು ನಾನು ಮತ್ತೆ ಕಂಡಿಲ್ಲ~ ಎನ್ನುತ್ತಾರೆ ದಮುನೆ.ಈ ಸಾಧಕನಿಗೆ ಅರ್ಜುನ ಹಾಗೂ ಪದ್ಮಶ್ರೀ ಪ್ರಶಸ್ತಿಗಳೂ ಸಂದಿವೆ. ಬೆಳಗಾವಿಯಲ್ಲಿ ಆಡುತ್ತಿದ್ದಾಗ ಶಂಕರ್ ಬಳಸುತ್ತಿದ್ದ ಹಾಕಿ ಸಲಕರಣೆಗಳನ್ನು ಎಂಎಲ್‌ಐಆರ್‌ಸಿ ವಸ್ತು ಸಂಗ್ರಹಾಲಯದಲ್ಲಿ ಜತನದಿಂದ ಎತ್ತಿಡಲಾಗಿದೆ. ನಿವೃತ್ತಿ ನಂತರದ ಜೀವನವನ್ನು ಅವರು ತಮ್ಮ ಹುಟ್ಟೂರಿನಲ್ಲೇ ಕಳೆದರು.ಕೊನೆಯ ದಿನಗಳಲ್ಲಿ ಗ್ಯಾಂಗ್ರಿನ್‌ನಿಂದ ಬಳಲಿದ ಅವರು, 2006ರ ಏಪ್ರಿಲ್ 29ರಂದು ಕೊನೆಯುಸಿರು ಎಳೆದರು. ಸೈನ್ಯದ ಗೌರವ ಕ್ಯಾಪ್ಟನ್ ಹುದ್ದೆಗೂ ಪಾತ್ರರಾಗಿದ್ದ ಶಂಕರ್‌ಗೆ ಮಿಲಿಟರಿ ಗೌರವದ ವಿದಾಯ ಹೇಳಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.