ಶನಿವಾರ, ಮೇ 21, 2022
27 °C

ಶಕ್ತಿ ಕಳೆದುಕೊಂಡ ಕನ್ನಡ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕನ್ನಡ ಅನ್ನ ಕೊಡುವ ಶಕ್ತಿ ಕಳೆದುಕೊಂಡಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

ಹಿಂದೆ ಸಾಹಿತಿಗಳು ಕನ್ನಡದ ಬಗ್ಗೆ ಮಾತನಾಡಿದಾಗ ಮಿಂಚಿನ ಸಂಚಾರ ಇತ್ತು. ಇಂದು ನಮ್ಮ ಸಂಭ್ರಮವೆಲ್ಲಾ ಮಾತಿಗಷ್ಟೇ ಸೀಮಿತವಾಗಿದೆ. ಇಂಗ್ಲಿಷ್ ದಾಳಿ ಅವ್ಯಾಹತವಾಗಿದೆ. ವಿಜ್ಞಾನ ತಂತ್ರಜ್ಞಾನ ಸಂಬಂಧಿತ ಮಾಹಿತಿ ಇಂಗ್ಲಿಷ್‌ನಲ್ಲಿಯೇ ಇರುವುದರಿಂದ ಅದು ಎಲ್ಲರಿಗೂ ಸಿಗುತ್ತಿಲ್ಲ ಎಂದರು.

ಸರ್ಕಾರ ಶಿಕ್ಷಣ ನೀತಿಯನ್ನು ಕನ್ನಡದ ನೀತಿಯನ್ನಾಗಿ ಹೊರತರಬೇಕು. ಕನಿಷ್ಠ 7ನೇ ತರಗತಿವರೆಗೆ ಅತ್ಯುತ್ತಮವಾದ ಕನ್ನಡವನ್ನು ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ.ಚಂದ್ರಶೇಖರ ತಾಳ್ಯ ಮಾತನಾಡಿ, ಕನ್ನಡಿಗರೇ ಭಾಷೆಯನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಕನ್ನಡ ಕಟ್ಟಿ ಬೆಳೆಸುವುದು ಒಡಲಾಳದಿಂದ ಬರಬೇಕು ಎಂದರು.

ನೀರಾ ಬರದಿರಲಿ

ನಿಕಟಪೂರ್ವ ಅಧ್ಯಕ್ಷ ಸದಾಶಿವಪ್ಪ ಶಾಗಲೆ ಅವರು ಮಾತನಾಡಿ, 40 ವರ್ಷಗಳಿಂದ ಆಗದ ಕೆಲಸವನ್ನು ತಮ್ಮ ಅಧ್ಯಕ್ಷ ಅವಧಿಯಲ್ಲಿ ಮಾಡಲಾಗಿದೆ. ಕುವೆಂಪು ಕನ್ನಡ ಭವನ, 160 ದತ್ತಿಗಳು ಸೇರಿದಂತೆ ಹಲವು ಕೆಲಸಗಳು ಆಗಿವೆ. ಪರಿಷತ್‌ನ ಕಟ್ಟಡದ ಒಳಗೆ ಪಾವಿತ್ರ್ಯತೆ ಕಾಪಾಡಬೇಕು. ಇದು ನಮ್ಮ ನಾಡಗುಡಿ. ಇಲ್ಲಿಗೆ ನೀರು ಮಾತ್ರ ಬರಲಿ. ನೀರಾ ಬಾರದಿರಲಿ ಎಂದು ಸೂಚ್ಯವಾಗಿ ಹೇಳಿದರು.

ನೂತನ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಮಾತನಾಡಿ, ಒಂದು ವರ್ಷದ ಒಳಗೆ ಕನ್ನಡ ಭವನದ ನಿರ್ಮಾಣ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಭವನವನ್ನು ಸತ್ಕಾರ್ಯಗಳಿಗೆ ಮಾತ್ರ ಬಳಸಲಾಗುವುದು. ತಾಲ್ಲೂಕುಮಟ್ಟದ ಸಮ್ಮೇಳನ ನಡೆಸುವುದು, ಗ್ರಾಮಮಟ್ಟಕ್ಕೆ ಪರಿಷತ್ತನ್ನು ಕೊಂಡೊಯ್ಯಲು ಪ್ರಯತ್ನಿಸಲಾಗುವುದು ಎಂದರು.

ಡಾ.ಟಿ. ತಿಪ್ಪೇಸ್ವಾಮಿ, ಪ್ರೊ.ಭಿಕ್ಷಾವರ್ತಿ ಮಠ ಮಾತನಾಡಿದರು. ಎಚ್. ಮಲ್ಲಿಕಾರ್ಜುನ ಸ್ವಾಗತಿಸಿದರು. ಬಾ.ಮ. ಬಸವರಾಜಯ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಹ್ಲಾದ ಭಟ್ ಮತ್ತು ಸಂಗಡಿಗರು ಕುವೆಂಪು ಗೀತೆಗಳನ್ನು ಹಾಡಿದರು. ಎಂ.ಪಿ. ಚಂದ್ರಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.