ಮಂಗಳವಾರ, ಜೂನ್ 15, 2021
21 °C

ಶಕ್ತಿ ದೇವತೆಗೂ ನೀತಿಸಂಹಿತೆ ಬಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಹಾಸನದ ಶಕ್ತಿದೇವತೆ ಎನಿಸಿರುವ ಪುರದಮ್ಮನಿಗೂ ಲೋಕಸಭಾ ಚುನಾವಣೆಯ ನೀತಿಸಂಹಿತೆಯ ಬಿಸಿ ತಟ್ಟಿದೆ.

ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಬಂದು ಪ್ರಾಣಿಬಲಿ ಕೊಟ್ಟು ಹರಕೆ ತೀರಿಸುವುದರ ಜತೆಗೆ ಅಲ್ಲಿಯೇ ಮಾಂಸದಡುಗೆ ತಯಾರಿಸಿ ಊಟ ಮಾಡುವುದು ಸಂಪ್ರದಾಯ. ಮಾಡಿದ ಅಡುಗೆಯಲ್ಲಿ ಸ್ವಲ್ಪ ಭಾಗವನ್ನು ಮೊದಲು ದೇವಿಗೆ ಎಡೆಯಾಗಿ ಕೊಟ್ಟು ನಂತರ ಊಟ ಮಾಡಲಾಗುತ್ತದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.ರಾಜಕೀಯಕ್ಕೆ ಆಶ್ರಯ: ಬಲಿ ಕೊಡುವ ಈ ಸಂಪ್ರದಾಯವನ್ನೇ ಹಲವು ವರ್ಷಗಳಿಂದ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಬಳಸಿಕೊಂಡು ಬಂದಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಇಲ್ಲಿ ಪ್ರಾಣಿಬಲಿ ಮತ್ತು ಬಾಡೂಟ ಜೋರಾಗಿ ನಡೆಯುತ್ತಿದ್ದವು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಣ್ಣಪುಟ್ಟ ಕಾರಣಗಳಿಗೆ ತಮ್ಮ ಕಾರ್ಯ­ಕರ್ತರು ಹಾಗೂ ಮತದಾರರನ್ನು ಕರೆದು ಇಲ್ಲಿ ಬಾಡೂಟ ಹಾಕುವುದು ಸಾಮಾನ್ಯವಾಗಿತ್ತು. ಈ ದೇವಸ್ಥಾನದಲ್ಲಿ ಅದೇ ಸಂಪ್ರದಾಯ ಇರುವುದರಿಂದ ಚುನಾವಣಾ ಆಯೋಗವೂ ಇದನ್ನು ತಡೆಯಲು ಹಿಂದೇಟು ಹಾಕುತ್ತಿತ್ತು. ಆದರೆ, ಸುಮಾರು ಆರು ತಿಂಗಳ ಹಿಂದೆಯಷ್ಟೇ ಇದನ್ನು ಪುನಃ ಮುಜರಾಯಿ ಇಲಾಖೆಯ ಸ್ವಾಧೀನಕ್ಕೆ ಪಡೆದಿದ್ದ ತಹಶೀಲ್ದಾರ್ ಮಂಜುನಾಥ್‌, ಈ ಬಾರಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ದೇವಸ್ಥಾನದ ಅಕ್ಕಪಕ್ಕದ ಕೆಲವು ಸಮುದಾಯ ಭವನಗಳಿಗೆ ಬೀಗ ಜಡಿದಿದ್ದಾರೆ.ಜತೆಗೆ ದೇವಾಲಯದ ಸಮೀಪ ಇರುವ ವಿವಿಧ ಮಳಿಗೆಗಳನ್ನೂ ಮುಚ್ಚಲಾಗಿದೆ. 10ಕ್ಕಿಂತ ಹೆಚ್ಚು ಜನರು ಈ ಭಾಗದಲ್ಲಿ ಸೇರಬಾರದು ಎಂಬ ಆದೇಶವನ್ನೂ ಜಾರಿ ಮಾಡಿದ್ದಾರೆ. ತಹಶೀಲ್ದಾರರ ಕ್ರಮದಿಂದಾಗಿ ರಾಜಕೀಯ ನಾಯಕರು ಹೊಸ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಮುಜರಾಯಿ ಇಲಾಖೆಗೆ ಸೇರಿದ್ದ ಈ ದೇವಾಲಯವನ್ನು ಇಲಾಖೆ ನಿರ್ಲಕ್ಷಿಸಿದ ಪರಿಣಾಮ, ಕಳೆದ ಕೆಲವು ದಶಕಗಳಿಂದ ಸ್ಥಳೀಯ ವ್ಯಕ್ತಿಯೊಬ್ಬರು ತನ್ನ ಸುಪರ್ದಿಗೆ ಪಡೆದು ನಡೆಸುತ್ತಿದ್ದರು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇಲ್ಲಿನ ಆದಾಯವೂ ಹೆಚ್ಚಾಗಿ ಪ್ರತಿ ತಿಂಗಳೂ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಣ ಹುಂಡಿಯಲ್ಲಿ ಬರುವಂತಾಗಿತ್ತು. ಕ್ರಮೇಣ ದೇವಸ್ಥಾನದ ಮುತ್ತ ಸಮುದಾಯ­ ಭವನಗಳೂ ನಿರ್ಮಾಣವಾದವು. ಅದನ್ನೂ ಬಾಡಿಗೆಗೆ ನೀಡಲಾಗುತ್ತಿತ್ತು. ಸ್ಥಳೀಯರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ದೇವಸ್ಥಾನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ತಹಶೀಲ್ದಾರರು ದೇವಸ್ಥಾನವನ್ನು ಮತ್ತೆ ಮುಜರಾಯಿ ಇಲಾಖೆ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು.‘ಸಮುದಾಯ ಭವನಗಳನ್ನು ಸರ್ಕಾರಿ ಅನುದಾನದಲ್ಲಿ ಕಟ್ಟಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಅಲ್ಲಿ ಇಂಥ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಸ್ವಲ್ಪ ದೂರದಲ್ಲಿ ಖಾಸಗಿ ಛತ್ರಗಳಿವೆ. ಅಲ್ಲಿ ಅನುಮತಿ ಪಡೆದು ಸಭೆ ಸಮಾರಂಭ ಮಾಡಲು ಅಡ್ಡಿ ಇಲ್ಲ. ದೇವಸ್ಥಾನದ ಸಂಪ್ರದಾಯದಲ್ಲಿ ಬದಲಾವಣೆ ಮಾಡುವುದಿಲ್ಲ. ಎಡೆ ಕೊಟ್ಟು ಹರಕೆ ತೀರಿಸುವವರು ಮಾಡಬಹುದು. ಆದರೆ, ಸುತ್ತಮುತ್ತಲಿನ ಸಮುದಾಯ ಭವನದಲ್ಲಿ ಅವಕಾಶ ಕೊಡುವುದಿಲ್ಲ. ಮದುವೆ ಹಾಗೂ ಇತರೆ ಸಮಾರಂಭ ಆಯೋಜಿಸಲು ಸಂಬಂಧಪಟ್ಟವರಿಂದ ಮುಂಚಿತವಾಗಿ ಪರವಾನಗಿ ಪಡೆಯಬೇಕು. ಆದರೆ, ರಾಜಕೀಯದ ಲೇಪ ಇರಬಾರದು’ ಎಂದು ತಹಶೀಲ್ದಾರ್ ಮಂಜುನಾಥ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.