ಗುರುವಾರ , ಮೇ 6, 2021
26 °C

ಶತಮಾನ ಕಂಡ ಕನ್ನಂಬಾಡಿ ಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಂಬಾಡಿ ಕಟ್ಟೆ ಎಂದೇ ಹೆಸರಾದ ಕೃಷ್ಣರಾಜ ಸಾಗರಕ್ಕೆ ಈಗ ನೂರು ವರ್ಷಗಳು ತುಂಬಿವೆ. ಮೈಸೂರು ಭಾಗದ ಗ್ರಾಮೀಣ ಜನರ ನಾಲಿಗೆಯ ಮೇಲೆ ಇಂದಿಗೂ ಕನ್ನಂಬಾಡಿ ಕಟ್ಟೆ ಎಂದೇ ಕರೆಸಿಕೊಳ್ಳುವ ಈ ಜಲಾಶಯದ ಕಾಮಗಾರಿ ಪ್ರಾರಂಭವಾದದ್ದು 1911ರಲ್ಲಿ.

 

ಸುಮಾರು ನೂರು ವರ್ಷಗಳಿಂದ ಕಾವೇರಿ ಇಲ್ಲಿ ನೆಲೆ ನಿಂತು ಲಕ್ಷಾಂತರ ಎಕರೆ ಭೂಮಿಯನ್ನು ಹಸಿರಾಗಿಸಿದ್ದಾಳೆ. ಕನ್ನಂಬಾಡಿ ಕಟ್ಟೆಯ ನಿರ್ಮಾಣದ ಹಿಂದೆ ದೊಡ್ಡ ಇತಿಹಾಸವಿದೆ. ಕಟ್ಟೆ ನಿರ್ಮಾಣಕ್ಕೆ ದುಡಿದ ಸಾವಿರಾರು ಕಾರ್ಮಿಕರ ಪರಿಶ್ರಮವಿದೆ. ನೂರು ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಅವರೆಲ್ಲರನ್ನೂ ಸ್ಮರಿಸುವುದು ಫಲಾನುಭವಿ ರೈತರ ಕರ್ತವ್ಯ.ಕನ್ನಂಬಾಡಿ ಕಾವೇರಿ ತೀರದ ಒಂದು ಸಾಮಾನ್ಯ ಹಳ್ಳಿ. ಈ ಹಳ್ಳಿ ದೊಡ್ಡಯ್ಯ ಪ್ರಭು ಎಂಬ ಹೆಸರಿನ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಶ. 1600 ರಲ್ಲಿ ಮೈಸೂರಿನ ರಾಜ ಒಡೆಯರು ಈ ಹಳ್ಳಿಯನ್ನು ಗೆದ್ದುಕೊಂಡರೆಂದು ಕನ್ನಂಬಾಡಿಯಲ್ಲಿ ದೊರೆತಿರುವ ಶಾಸನದಲ್ಲಿ ಹೇಳಲಾಗಿದೆ.ಕಣ್ವಪುರಿ-ಕಣ್ಣಂಬಾಡಿ: ಪುರಾಣ ಕಾಲದ ಕಣ್ವ ಮುನಿಗಳು ಬಲಮುರಿ ಸಮೀಪದಲ್ಲಿ ಇದ್ದ ನೇರಳೆ ಮರದ ಕೆಳಗೆ ಕುಳಿತು ತಪಸ್ಸು ಮಾಡಿದ್ದರು ಎಂಬ ಪ್ರತೀತಿಯಿದೆ. ಅವರ ತಪಸ್ಸು ಎಷ್ಟು ತೀವ್ರವಾಗಿತ್ತೆಂದರೆ ಕಾವೇರಿ ಉಕ್ಕಿ ಭಯಂಕರವಾಗಿ ಆರ್ಭಟಿಸಿ ಆಳೆತ್ತರದ ಅಲೆಗಳು ಅಪ್ಪಳಿಸಿದರೂ ಕಣ್ವಮುನಿಗೆ ಎಚ್ಚರವೇ ಆಗುತ್ತಿರಲಿಲ್ಲವಂತೆ. ಕಣ್ವಮುನಿಗಳಿಂದಾಗಿ ಈ ಪ್ರದೇಶಕ್ಕೆ ಕಣ್ವಪುರಿ ಎಂಬ ಹೆಸರು ಬಂತು. ಅದು ಜನರ ಬಾಯಲ್ಲಿ ಕಣ್ಣಂಬಾಡಿ, ಕನ್ನಂಬಾಡಿ ಆಯಿತು.ಮೈಸೂರಿಗೆ ಸಂಬಂಧಿಸಿದ ಶಾಸನಗಳಲ್ಲಿ ಕನ್ನಂಬಾಡಿ ಗ್ರಾಮದ ಹೆಸರು ಹಲವು ಸಲ ಪ್ರಸ್ತಾಪವಾಗಿದೆ. ಕ್ರಿ.ಶ. 1579 ರಲ್ಲಿ ಇದು ದೊಡ್ಡ ಅಗ್ರಹಾರವಾಗಿತ್ತು. ಕಾವೇರಿಗೆ `ಕನ್ನಂಬಾಡಿ~ ಬಳಿ ಅಣೆಕಟ್ಟು ಕಟ್ಟಬೇಕೆಂದು ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ತೀರ್ಮಾನಿಸಿದರು. ಕನ್ನಂಬಾಡಿ ಮುಳುಗಡೆಯಾಗುವ ಸಾಧ್ಯತೆ ಇತ್ತು. ರಾಜರ ಸೂಚನೆ ಮೇರೆಗೆ ಗ್ರಾಮದ ಜನರು ಬೇರೆಡೆಗೆ ಸ್ಥಳಾಂತರಗೊಂಡರು.ಕನ್ನಂಬಾಡಿಯಿಂದ ಚದುರಿದ ಜನರು ಅನೇಕ ಊರುಗಳನ್ನು ಕಟ್ಟಿಕೊಂಡರು. ಅವುಗಳಲ್ಲಿ ಹೊಸಕನ್ನಂಬಾಡಿ, ಮಜ್ಜಿಗೆಪುರ, ಬಸ್ತಿಪುರ, ಹಳೇಉಂಡವಾಡಿ, ಹೊಸಉಂಡವಾಡಿ, ಹಳೇ ಆನಂದೂರು, ಹೊಸ ಆನಂದೂರು ಪ್ರಮುಖವು.ಮುಳುಗಡೆಯಾದ ಪ್ರದೇಶದಲ್ಲಿ ಕಣ್ವೇಶ್ವರ, ಲಕ್ಷ್ಮೀದೇವಿ, ವೇಣುಗೋಪಾಲಸ್ವಾಮಿ ದೇವಸ್ಥಾನಗಳಿದ್ದವು. ಇವುಗಳಲ್ಲಿ ಕಣ್ವೇಶ್ವರ ದೇವಸ್ಥಾನ ತುಂಬಾ ಪ್ರಾಚೀನವಾದುದು. ರಾಷ್ಟ್ರಕೂಟರ ಅರಸು ಮೊದಲನೇ ಕೃಷ್ಣ ಇದನ್ನು ಕ್ರಿ.ಶ. 8ನೇ ಶತಮಾನದಲ್ಲಿ ನಿರ್ಮಿಸಿದ್ದ.ವೇಣುಗೋಪಾಲಸ್ವಾಮಿ ದೇವಸ್ಥಾನ ಗಂಗರ ಕಾಲದಲ್ಲಿ (ಕ್ರಿ.ಶ.1300ಕ್ಕೂ ಹಿಂದೆ) ನಿರ್ಮಾಣವಾಯಿತು ಎಂದು  ತಿಳಿದು ಬರುತ್ತದೆ. ವಿಜಯನಗರ ಮತ್ತು ಮೈಸೂರು ಅರಸರು ದೇವಸ್ಥಾನವನ್ನು ದುರಸ್ತಿ ಮಾಡಿಸಿದ್ದರು. ಅಣೆಕಟ್ಟೆ ನಿರ್ಮಾಣವಾದ ನಂತರ ಈ ದೇವಸ್ಥಾನ ಹಿನ್ನೀರಿನಲ್ಲಿ ಮುಳುಗಿತು. ಆದರೆ ಜಲಾಶಯದಲ್ಲಿ ನೀರು ಇಳಿಮುಖವಾದಾಗ ಈ ದೇವಸ್ಥಾನ ಜನರಿಗೆ ಕಾಣಿಸುತ್ತಿತ್ತು.

 

1958ರಲ್ಲಿ, ಆನಂತರ 2001 ರಿಂದ 2004ರಲ್ಲಿ ದೇವಸ್ಥಾನ ಕಾಣಿಸಿತ್ತು. ಮುಳುಗಡೆಯಾಗಿದ್ದ ಈ ದೇವಸ್ಥಾನವನ್ನು ಬೆಂಗಳೂರಿನ ಉದ್ಯಮಿ ಹರಿ ಖೋಡೆ ಅವರ ನೆರವಿನಿಂದ ಜಲಾಶಯದಿಂದ ಹೊರಕ್ಕೆ ಸ್ಥಳಾಂತರಿಸಿ ಸಮೀಪದಲ್ಲೇ ಪುನರ್ ನಿರ್ಮಿಸಲಾಗಿದೆ.ಕನ್ನಂಬಾಡಿ ಕಟ್ಟೆಯ ನಿರ್ಮಾಣದ ಪೂರ್ವಭಾವಿ ಕಾರ್ಯ 1909ರಲ್ಲಿ ಪ್ರಾರಂಭವಾಯಿತು. ಆಗಿನ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಆಗಿದ್ದವರು ಕ್ಯಾಪ್ಟನ್ ಬರ್ನಾಡ್ ಡಾವಸ್. ಅಣೆಕಟ್ಟೆ ಈಗಿರುವ ಸ್ಥಳದಿಂದ ಮೇಲ್ಭಾಗಕ್ಕೆ `ಎಡಹಳ್ಳಿ~ ಎಂಬ ಗ್ರಾಮದ ಬಳಿ ಕಟ್ಟೆ ನಿರ್ಮಾಣವಾಗುತ್ತಿತ್ತು.ಡಾವಸ್ ಕಾರ್ಯನಿರತರಾಗಿದ್ದರು. ಹಿಂದಿನ ದಿನ ನದಿಯಲ್ಲಿ ಅನಿರೀಕ್ಷಿತವಾಗಿ ನೆರೆ ಬಂದು ಹಾಕಿದ್ದ ಒಡ್ಡು ಕೊಚ್ಚಿಹೋಯಿತು.  ರೈತರಿಗೆ ನೀರು ಹರಿಸುವ ವ್ಯವಸ್ಥೆ ಕುಂಠಿತವಾಯಿತು. ನೆರೆಯ ಹಾವಳಿ ಭೀತಿ ತಪ್ಪಿರಲಿಲ್ಲ.ಇದನ್ನು ಲೆಕ್ಕಿಸದೆ ಜಖಂಗೊಂಡಿದ್ದ ಒಡ್ಡಿನ ರಿಪೇರಿ ನಡೆಯುತ್ತಿತ್ತು. ಏಳು ಜನ ಕೂಲಿಕಾರರು ದೋಣಿಯಲ್ಲಿ ಮರಳಿನ ಚೀಲಗಳನ್ನು ಒಯ್ದು ಒಡ್ಡು ಕೊಚ್ಚಿ ಹೋದ ಸ್ಥಳದಲ್ಲಿ ಇರಿಸಿ ನೀರಿನ ರಭಸವನ್ನು ನಿಯಂತ್ರಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಆಗ ಅನಿರೀಕ್ಷಿತವಾಗಿ ನೆರೆ ಬಂದು  ದೋಣಿ ಮಗುಚಿಕೊಂಡಿತು.ಏಳು ಜನರ ಪೈಕಿ ಆರು ಜನ ಈಜಿ ದಡ ಸೇರಿದರು. ಒಬ್ಬ ನೀರಲ್ಲಿ ಹೊಯ್ದಾಡುತ್ತಿದ್ದ. ಅದನ್ನು ಗಮನಿಸಿದ ಡಾವಸ್ ಪ್ರವಾಹದ ನೀರಿಗೆ ಧುಮುಕಿ ಅವನನ್ನು ರಕ್ಷಿಸಿದರು. ಆದರೆ ಡಾವಸ್ ಸುಳಿಗೆ ಸಿಕ್ಕಿ ಸಾವನ್ನಪ್ಪಿದರು. ನಾಲ್ಕು ದಿನಗಳ ನಂತರ ಅವರ ಶವ ಸಿಕ್ಕಿತು.ಮೊದಲ ಅಣೆಕಟ್ಟೆ:  ಕಾವೇರಿ ನದಿಗೆ ಮೊದಲು ಅಣೆಕಟ್ಟೆ ಕಟ್ಟಿದ್ದು ಕರಿಕಾಲ ಚೋಳ ಎಂಬ ಅರಸು. ಕ್ರಿ.ಶ. 1068ರ ಸುಮಾರಿಗೆ ತಮಿಳುನಾಡಿನ  ಪ್ರಾಂತ್ಯದಲ್ಲಿ ಅಣೆಕಟ್ಟೆ ನಿರ್ಮಾಣವಾಯಿತು. ಕನ್ನಡನಾಡಿನಲ್ಲಿ ಅಣೆಕಟ್ಟೆ ನಿರ್ಮಾಣ ಕಾರ್ಯ ಅಧಿಕೃತವಾಗಿ ಪ್ರಾರಂಭವಾದುದು 1911 ಅಕ್ಟೋಬರ್‌ನಲ್ಲಿ. ಮುಗಿದಿದ್ದು 1932 ರಲ್ಲಿ.

 

ನಿರ್ಮಾಣ ಕಾಮಗಾರಿಯಲ್ಲಿ ದುಡಿದ ಕಾರ್ಮಿಕರ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚು. ಅಣೆಕಟ್ಟೆಯ ಆಡಳಿತಾತ್ಮಕ ಮೇಲ್ವಿಚಾರಣೆ ನೋಡಿಕೊಂಡವರು ದಿವಾನರಾದ ಸರ್.ಎಂ. ವಿಶ್ವೇಶ್ವರಯ್ಯ, ಸರ್ದಾರ್ ಎಂ. ಕಾಂತರಾಜು ಅರಸು, ಅಲ್ಬಿಯನ್ ರಾಜಕುಮಾರ್ ಬ್ಯಾನರ್ಜಿ ಮತ್ತು ಮಿರ್ಜಾ ಇಸ್ಮಾಯಿಲ್ ಅವರು.ಕನ್ನಂಬಾಡಿ ಕಟ್ಟೆ ನಿರ್ಮಾಣದಲ್ಲಿ ಬ್ರಿಟಿಷರ ಆಸಕ್ತಿಗೆ ಕಾರಣ ಅವರು ಗುತ್ತಿಗೆ ಹಿಡಿದಿದ್ದ ಕೋಲಾರದ ಚಿನ್ನದ ಗಣಿಗೆ ವಿದ್ಯುತ್ ಸೌಲಭ್ಯ ಒದಗಿಸುವುದೇ ಆಗಿತ್ತು. ಕೃಷ್ಣರಾಜ ಒಡೆಯರು ಈ ಯೋಜನೆಯನ್ನು ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲು ಆದ್ಯತೆ ನೀಡಿದರು.ಮದ್ರಾಸ್‌ನ ಬ್ರಿಟಿಷ್ ಪ್ರಾಂತೀಯ ಸರ್ಕಾರ ಒಪ್ಪಿಗೆ ನೀಡಿದ್ದು 80 ಅಡಿ ಎತ್ತರದ ಅಣೆಕಟ್ಟೆಗೆ. ಆದರೆ ಮಹಾರಾಜರು 124 ಅಡಿ ಎತ್ತರದ ಅಣೆಕಟ್ಟೆ ನಿರ್ಮಿಸುವ ಯೋಜನೆ ರೂಪಿಸಿದರು. ಪ್ರಾರಂಭಿಕ ಅಂದಾಜು ವೆಚ್ಚ 2 ಕೋಟಿ 35 ಲಕ್ಷ ರೂ. ರಾಜ್ಯದ ಆದಾಯವನ್ನೆಲ್ಲ ಇದೊಂದಕ್ಕೇ ಬಳಸುವುದು ಸಾಧ್ಯವಿರಲಿಲ್ಲ.

 

ಆಗ ಕೃಷ್ಣರಾಜ ಒಡೆಯರ್ ಮತ್ತು ರಾಜಮಾತೆಯವರು ತೆಗೆದುಕೊಂಡ ತೀರ್ಮಾನ ಅಪೂರ್ವವಾದದ್ದು. ಅರಮನೆಯ ಖಾಸಗಿ ಭಂಡಾರದಲ್ಲಿದ್ದ ನಾಲ್ಕು ಮೂಟೆಗಳಷ್ಟು ವಜ್ರ, ವೈಢೂರ್ಯ, ಚಿನ್ನಾಭರಣಗಳು ಮತ್ತು ಬೆಳ್ಳಿ ನಾಣ್ಯಗಳನ್ನು ಮುಂಬಯಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಹಣವನ್ನು ಕನ್ನಂಬಾಡಿಯ ಕಟ್ಟೆ ನಿರ್ಮಾಣಕ್ಕೆ ವಿನಿಯೋಗಿಸಿದರು.ಅಣೆಕಟ್ಟೆಯ ಉದ್ದ (ಪ್ರಾರಂಭಿಕ ಅನುಪಯುಕ್ತ ಭಾಗ ಸೇರಿ) ಒಂದು ಮೈಲಿ ಆರು ಫರ್ಲಾಂಗ್ ಇದೆ. ಇದು ಕೊಂಚ ವೃತ್ತಾಕಾರದ ಕಟ್ಟೆ. ನೀರಿನ ಒಳ ಮತ್ತು ಹೊರ ಹರಿವನ್ನು ನಿಯಂತ್ರಿಸಲು 37 ತೂಬು ಜಾರುಗಳಿವೆ.  ಜಲಾನಯನ ಪ್ರದೇಶದ ವಿಸ್ತೀರ್ಣ 4,100 ಚದರ ಮೈಲಿಗಳು.ಕಟ್ಟೆಯನ್ನು ಸುರ್ಕಿ ಗಾರೆಯಿಂದ ನಿರ್ಮಿಸಲಾಗಿದೆ. ಅದು ಸಿಮೆಂಟಿಗಿಂತ ಭದ್ರ. ಅಣೆಕಟ್ಟೆಗೆ ಬಳಸಲಾದ ಸ್ವಯಂಚಾಲಿತ ಉಕ್ಕಿನ ಗೇಟುಗಳನ್ನು ಕೃಷ್ಣರಾಜ ಒಡೆಯರು ಸ್ಥಾಪಿಸಿದ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ.ಅಣೆಕಟ್ಟೆ 48.33 ಟಿ.ಎಂ.ಸಿ. ನೀರು ಶೇಖರಣಾ ಸಾಮರ್ಥ್ಯ ಹೊಂದಿದೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಸುಮಾರು ಮೂರು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.ಕನ್ನಂಬಾಡಿ ಕಟ್ಟೆ ಎಂದೊಡನೆ  ಕೃಷ್ಣರಾಜ ಒಡೆಯರ್ ನೆನಪಾಗುತ್ತಾರೆ. ಅವರು ಆಧುನಿಕ ಮೈಸೂರಿನ ಮಹಾಶಿಲ್ಪಿ ಎಂದೇ ಅವರ ಹೆಸರು ಇತಿಹಾಸದಲ್ಲಿ ದಾಖಲಾಗಿದೆ.  ಮೈಸೂರು ಸೀಮೆಯ ಜನರಿಗೆ ಅವರು ಇಂದಿಗೂ ಪ್ರಾತಃಸ್ಮರಣೀಯರು. ಹಿಂದುಳಿದ ಜನಾಂಗಗಳು, ದಲಿತರು, ಬಡಬಗ್ಗರ ಬಗ್ಗೆ ಅಪಾರ ಕಾಳಜಿ ಇದ್ದ ಅವರ ಬಗ್ಗೆ ಮೈಸೂರು ಪ್ರಾಂತ್ಯದ ಜನರಿಗೆ ಈಗಲೂ ಅಪಾರ ಗೌರವ. ರೈತರ ಪಾಲಿಗೆ ಅವರು ಅನ್ನದಾತ.ಕೃಷ್ಣರಾಜ ಒಡೆಯರು  ಕ್ರಿ.ಶ. 1902 ಆಗಸ್ಟ್ 8 ರಿಂದ 1940 ಜುಲೈ 31ರವರೆಗೆ ಮೈಸೂರಿನ ಮಹಾರಾಜರಾಗಿದ್ದರು. ಭಾರತದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಜನರಿಗೆ ವಿಶೇಷ ಮೀಸಲಾತಿ ಕಲ್ಪಿಸಿದರು. ಅವರ ಕಾರ್ಯವೈಖರಿಯನ್ನು ಮೆಚ್ಚಿದ್ದ ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು  ಗಾಂಧೀಜಿ ಅವರು `ಎಲ್ಲಾ ರಾಜರೂ ಕೃಷ್ಣರಾಜ ಒಡೆಯರ್ ಅವರಂತೆ ಇದ್ದಿದ್ದರೆ ಭಾರತ ದೇಶಕ್ಕೆ ಸ್ವಾತಂತ್ರ್ಯವೇ ಬೇಕಾಗಿರಲಿಲ್ಲ~ ಎಂದಿದ್ದರು ಎಂಬ ಮಾತುಗಳು ಅವರ ಜನಪರ ಕಾಳಜಿಯ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತವೆ.ಕನ್ನಂಬಾಡಿ ಕಟ್ಟೆಗೆ `ಕೃಷ್ಣರಾಜ ಸಾಗರ~ ಎಂಬ ಹೆಸರು ಇಡುವ ಮೂಲಕ ಅವರ ಹೆಸರನ್ನು ಸ್ಮರಿಸಲಾಗಿದೆ. ಆದರೆ  ಕೃಷ್ಣರಾಜ ಒಡೆಯರ್ ಹಾಗೂ ಅಣೆಕಟ್ಟೆ ನಿರ್ಮಾಣಕ್ಕೆ ಶ್ರಮಿಸಿದ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಕೆ.ಆರ್.ಎಸ್. ಹೃದಯ ಭಾಗಗಳಲ್ಲಿ ಅನಾವರಣಗೊಳಿಸಬೇಕು ಎಂಬ ಜನರ ಬೇಡಿಕೆ ಈಡೇರಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.