ಗುರುವಾರ , ಫೆಬ್ರವರಿ 25, 2021
27 °C

ಶಹಾಪುರ: ಮಳಿಗೆ ಬಾಡಿಗೆ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಮಳಿಗೆ ಬಾಡಿಗೆ ಇಲ್ಲ!

ಶಹಾಪುರ: ಎರಡು ದಶಕಗಳ ಹಿಂದೆ ರಾಜ್ಯದಲ್ಲಿಯೇ ಅತ್ಯುತ್ತಮ ಪುರಸಭೆ ಎಂಬ ಪ್ರಶಸ್ತಿಗೆ ಭಾಜನವಾಗಿದ್ದ ಪಟ್ಟಣದ ಪುರಸಭೆಗೆ ಸದ್ಯ ಪಾರ್ಶ್ವವಾಯು ಬಡಿದಂತಾಗಿದೆ. ಸ್ವಜನಪಕ್ಷಪಾತ ಹಾಗೂ ಮುಂದಾಲೋಚನೆಯ ಕೊರತೆಯಿಂದ ಬಳಲುತ್ತಿದೆ ಎಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಮಳಿಗೆಗಳ ಬಾಡಿಗೆ ಸಂದಾಯಕ್ಕೂ ಕತ್ತರಿ ಹಾಕಿದ್ದಾರೆ. ಕೊನೆಗೆ ಎಚ್ಚೆತ್ತ ಜಿಲ್ಲಾಧಿಕಾರಿ ಗುರುನೀತ ತೇಜ್ ಮೆನೆನ್ ಹಲವು ವರ್ಷಗಳಿಂದ ಖಾಯಂ ಆಗಿ ಠಿಕಾಣಿ ಹೂಡಿದ್ದ ಬಾಡಿಗೆದಾರರನ್ನು ಹೊರ ಹಾಕಲು  ಪುರಸಭೆ ಮುಖ್ಯಾಧಿಕಾರಿ ಮೂಲಕ ಹೈಕೋರ್ಟ್ ಹಾಗೂ ಇನ್ನಿತರ ಕೋರ್ಟ್‌ಗೆ ಕೆವಿಯಟ್ ಅರ್ಜಿ ಸಲ್ಲಿಸಿ ಅಂದಾಜು 60 ಮಳಿಗೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಇಂತಿಷ್ಟು ದಿನಗಳಲ್ಲಿ ಮಳಿಗೆ ಖಾಲಿ ಮಾಡುವಂತೆ ತಿಳಿಸಿದ್ದಾರೆ.  ಬಾಡಿಗೆದಾರರು ಕೂಡಾ ಕಾನೂನು ಸಮರಕ್ಕೆ ಸಜ್ಜಾಗಿ ನಿಂತಿರುವುದು ಗುಟ್ಟಾಗಿ ಉಳಿದಿಲ್ಲ.ರಾಜಕೀಯ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಪುರಸಭೆಯು ಹಲವು ವರ್ಷಗಳ ಹಿಂದೆ ಐಡಿಎಸ್‌ಎಂಟಿ ಯೋಜನೆ ಹಾಗೂ ಇನ್ನಿತರ ಯೋಜನೆ ಅಡಿಯಲ್ಲಿ ಮಹಾತ್ಮಗಾಂಧಿ ಸಂಕೀರ್ಣ, ಲಾಲ್‌ಬಹುದ್ದೂರ್ ಶಾಸ್ತ್ರಿ ಮಳಿಗೆಗಳು, ಹಳೆ ತರಕಾರಿ ಮಾರುಕಟ್ಟೆಯ ಮಳಿಗೆಗಳು, ಪುರಸಭೆಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಳಿಗೆ ಹೀಗೆ 90ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ  ಪ್ರತಿ ಐದು ವರ್ಷಗಳಿಗೊಮ್ಮೆ ಹರಾಜು ಮಾಡಿ ಹೆಚ್ಚಿನ ಬೆಲೆ ಬಾಡಿಗೆ ನೀಡಿದ ವ್ಯಾಪರಸ್ಥರಿಗೆ ಷರತ್ತು ಬದ್ಧವಾಗಿ ಮಳಿಗೆಯನ್ನು ಹಂಚಿಕೆ ಮಾಡಿತ್ತು.ಪುರಸಭೆ ತಾನು ವಿಧಿಸಿದ ಷರತ್ತುಗಳನ್ನು ಪಾಲಿಸದೆ ಹಲವು ವರ್ಷಗಳ ಹಿಂದೆ ಬಾಡಿಗೆ ಪಡೆದ ವ್ಯಾಪಾರಸ್ಥರನ್ನು ಮುಂದುವರೆಸುತ್ತಾ ಬಂದಿದೆ ಎನ್ನುತ್ತಾರೆ ಎಸ್‌ಡಿಪಿಐ ಕಾರ್ಯದರ್ಶಿ ಮಹಮ್ಮದ ಇಸಾಕ ಕಾಲಿದ.15 ವರ್ಷಗಳ ಹಿಂದಿನಿಂದ ಕೇವಲ ರೂ. 500ರಿಂದ 1,000 ವರೆಗೆ ಮಾತ್ರ ಬಾಡಿಗೆ ನಿಗದಿಪಡಿಸಿದ ಸಮಯದಲ್ಲಿ ಪಡೆದುಕೊಂಡ ವ್ಯಾಪಾರಸ್ಥರು ಮತ್ತೊಬ್ಬರಿಗೆ ಸಾವಿರಾರು ರೂಪಾಯಿಗೆ ಬಾಡಿ ನೀಡಿ ಸಾರ್ವಜನಿಕ ಆಸ್ತಿಯ ಹಣದ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಮೂಲ ಬಾಡಿಗೆದಾರ ಇಲ್ಲವಾಗಿದ್ದು ಸಬ್ ಲೀಜ್ ಪಡೆದವರ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕೆಲ ವ್ಯಕ್ತಿಗಳು ಮಾರಾಟ ಮಾಡಿದ್ದು ಕೂಡಾ ಗುಟ್ಟಾಗಿ ಉಳಿದಿಲ್ಲ ಎನ್ನುತ್ತಾರೆ ರೈತ ಮುಖಂಡ ಸಿದ್ದಯ್ಯ ಹಿರೇಮಠ.ಪುರಸಭೆ ಮಳಿಗೆಯಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಸಂಗ್ರಹಿಸಲು ಅವಕಾಶವಿದ್ದರು ಕೂಡ ಪುರಸಭೆಯ ಕೆಲ ಹಾಲಿ ಹಾಗೂ ಮಾಜಿ ಸದಸ್ಯರು ಗುಟ್ಟಾಗಿ ಮಳಿಗೆಯನ್ನು ಗಿಟ್ಟಿಸಿಕೊಂಡು ಸಾವಿರಾರು ರೂಪಾಯಿಗೆ ಬಾಡಿಗೆ ನೀಡಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಲಿವೆ.ರಾಜಕೀಯ ಒತ್ತಡದಿಂದ ವರ್ಗಾವಣೆಗೊಂಡ ಅಂದಿನ ಪುರಸಭೆ ಮುಖ್ಯಾಧಿಕಾರಿ ಎನ್. ಮಾಧವಿಯವರು ಪುರಸಭೆ ವ್ಯಾಪ್ತಿಯ ಪ್ರತಿ ಮಳಿಗೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕಲೆ ಹಾಕಿ ಷರತ್ತು ಬದ್ಧವಾಗಿ ಮಂಜೂರು ಮಾಡಿದ್ದ ಮಳಿಗೆ ಬಾಡಿಗೆ ಅವಧಿ ಮುಗಿದು ಹಲವು ವರ್ಷಗಳು ಆಗಿವೆ. ಇದರಿಂದ ಪುರಸಭೆಯ ಆದಾಯ ಸೋರಿಕೆಯಾಗುತ್ತಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸಿ ಮರು ಹರಾಜು ಹಾಕಬೇಕೆಂಬ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.ಪುರಸಭೆ ಆಡಳಿತದ ನಿರ್ವಹಣೆ ವೈಫಲ್ಯದಿಂದ ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿ ಅನ್ಯರ ಪಾಲಾಗಿದೆ. ರಾಜಕೀಯ ಮುಖಂಡರೊಬ್ಬರು ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡು ಶಾಲೆಯ ಹೆಸರಿನಲ್ಲಿ ಜಾಗವನ್ನು ಪಡೆದುಕೊಂಡು ಮಾರಾಟ ಮಾಡಿದ್ದಾರೆ. ಸರ್ಕಾರ ತನ್ನ ವಶಕ್ಕೆ ತೆಗೆದು ಕೊಳ್ಳಬೇಕೆಂಬ ವರದಿಯನ್ನು ಸಹ ಕಡೆಗಣಿಸಲಾಗಿದೆ ಎಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಪ್ರಗತಿಪರ ಸಂಘಟನೆಗಳು ಹಲವಾರು ಬಾರಿ ಜಿಲ್ಲಾಧಿಕಾರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ 31 ಉದ್ಯಾನ ಜಾಗವನ್ನು ರಕ್ಷಿಸಲು ಮನವಿ ಮಾಡಿದ್ದರು ಸಹ ಕ್ಯಾರೆ ಅನ್ನುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಜಿಲ್ಲಾಧಿಕಾರಿಯವರು ಹಿಂಜರಿಕೆ ಮಾಡದೆ ಅವಧಿ ಮುಗಿದ ಮಳಿಗೆಯನ್ನು ವಶಕ್ಕೆ ತೆಗೆದುಕೊಂಡು ಮರು ಹರಾಜು ಮಾಡಬೇಕು. ಉದ್ಯಾನ ಜಾಗದ ರಕ್ಷಣೆಗೆ ಮುಂದಾಗಲಿ. ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.