ಭಾನುವಾರ, ಜೂಲೈ 5, 2020
22 °C

ಶಾಲಾ ಮಕ್ಕಳ ಆಟೊ ಪ್ರಯಾಣ ಕಷ್ಟಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಮಕ್ಕಳು ಉತ್ತಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಭವಿಷ್ಯವಿದೆ. ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಭಾವನೆಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುತ್ತಾರೆ. ಆದರೆ ಮಕ್ಕಳು ಶಾಲೆಗೆ ಹೇಗೆ ಹೋಗುತ್ತಾರೆ? ಅವರು ಪ್ರಯಾಣಿಸುವ ವೇಳೆ ಪಡುವ ಕಷ್ಟಗಳೇನು ಎಂಬುದು ಬಹುತೇಕ ಪೋಷಕರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಆಟೋರಿಕ್ಷಾಗಳಲ್ಲಿ ಶಾಲಾ ಮಕ್ಕಳ ಪ್ರಯಾಣ.ಆಟೊರಿಕ್ಷಾಗಳಲ್ಲಿ ಮೂರು ಜನ ಮಾತ್ರ ಪಯಣಿಸಬೇಕು ಎಂಬ ಕಾನೂನಿದ್ದರೂ ಹತ್ತಕ್ಕೂ ಹೆಚ್ಚು ಮಕ್ಕಳು ಅವುಗಳಲ್ಲಿ ಕೂರುತ್ತಾರೆ. ಅವರೊಂದಿಗೆ ಅವರ ಭಾರದ ಬ್ಯಾಗುಗಳು ಮತ್ತು ಊಟದ ಚೀಲಗಳು ಹಿಂಬದಿ ವಾಹನ ನೋಡಲೆಂದಿರುವ ಕನ್ನಡಿಗೆ ಜೋತು ಬಿದ್ದಿರುತ್ತವೆ. ವಾಹನ ಚಾಲಕನ ಎರಡೂ ಬದಿಗಳಲ್ಲಿ ಮಕ್ಕಳು ಕೂತಿರುತ್ತಾರೆ. ಸ್ವಲ್ಪ ಅವಘಡ ಸಂಭವಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ.‘ಅಪರಾಧ ಮಾಸಾಚರಣೆ, ಕಾನೂನು ಅರಿವು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಚಿಕ್ಕಬಳ್ಳಾಪುರದ ಮರಸನಹಳ್ಳಿ ಬಳಿ ಸೋಮವಾರ ಸಂಭವಿಸಿದ ಶಾಲಾ ವಾಹನ ಅಪಘಾತ ಪ್ರಕರಣದಿಂದ ಎಚ್ಚೆತ್ತುಕೊಳ್ಳಬೇಕು. ವಾಹನದಲ್ಲಿ ಹೆಚ್ಚು ಮಕ್ಕಳನ್ನು ಕರೆದೊಯ್ಯದಂತೆ ನಿಯಮಗಳನ್ನು ಜಾರಿಗೊಳಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ. ಮೂರು ಚಕ್ರದ ವಾಹನವಾದ ಆಟೊಗಳಿಗೆ ಸಮತೋಲನ ಮೊದಲೇ ಕಡಿಮೆಯಿರುತ್ತದೆ. ಅಂಥದ್ದರಲ್ಲಿ ಮಕ್ಕಳ ಭಾರವಾದ ಬ್ಯಾಗುಗಳನ್ನು ಹಾಕುವುದರಿಂದ ಇನ್ನಷ್ಟು ಅಸಮತೋಲನಗೊಳ್ಳುತ್ತದೆ. ಚಾಲಕರೊಂದಿಗೆ ಮಕ್ಕಳೂ ಕುಳಿತುಕೊಂಡಾಗ ಮತ್ತಷ್ಟು ಅಪಾಯಕಾರಿ. ಈ ಬಗ್ಗೆ ಪೋಷಕರು, ಶಾಲೆಗಳು ಮತ್ತು ಆಟೋದವರಿಗೆ ಎಚ್ಚರಿಕೆ ನೀಡುವುದು ಅತ್ಯಗತ್ಯ. ವಾಹನ ನಿಲುಗಡೆಗೆ ನೀಡುವುದಕ್ಕಿಂತ ಇದರ ಬಗ್ಗೆ ಪೋಲಿಸರು ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಅವರು ಕೋರಿದ್ದಾರೆ.‘ನಮಗೆ ಈ ರೀತಿ ಮಕ್ಕಳನ್ನು ಕಳುಹಿಸುವುದು ಅಪಾಯಕಾರಿ ಎಂಬ ಅರಿವಿದೆ. ಆದರೆ ಏನು ಮಾಡುವುದು ಶಾಲೆಯವರು ಉತ್ತಮ ಚಾಲಕರಿರುವ ವಾಹನಗಳನ್ನು ಇಟ್ಟುಕೊಂಡಿಲ್ಲ. ವಾಹನಗಳಿದ್ದರೂ ಅದು ಹಳ್ಳಿಗಳಿಂದ ಬರುವ ಮಕ್ಕಳಿಗೆ ಮೀಸಲಿರುತ್ತವೆ. ಕಾನೂನು ಬಿಗಿ ಮಾಡಿದರೆ ಮಾತ್ರ ಈ ಪದ್ಧತಿ ಸರಿಹೋಗಬಹುದು’ ಎನ್ನುತ್ತಾರೆ ಪೋಷಕರು.‘ತುಂಬ ಇಕ್ಕಟ್ಟಾಗಿರುತ್ತದೆ. ಒಬ್ಬರ ಮೇಲೆ ಒಬ್ಬರು ಕುಳಿತುಕೊಳ್ಳಬೇಕು. ನಮ್ಮ ಬಟ್ಟೆಯೆಲ್ಲಾ ನಲುಗಿಹೋಗುತ್ತವೆ. ಪುಸ್ತಕಗಳು ಹಾಳಾಗುತ್ತವೆ. ಊಟ ಕೂಡ ಕೆಲವೊಮ್ಮೆ ಚೆಲ್ಲಿಹೋಗಿರುತ್ತದೆ. ಮೈಕೈ ನೋವು ಬರುತ್ತದೆ’ ಎಂದು ಪುಟಾಣಿ ರಮ್ಯ ತನ್ನ ದಿನನಿತ್ಯದ ಆಟೊ ಸಂಚಾರದ ಕಷ್ಟವನ್ನು ತಿಳಿಸಿದಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.