ಶುಕ್ರವಾರ, ಜೂಲೈ 3, 2020
24 °C

ಶಾಲೆಗಳಲ್ಲಿ ನೀತಿ ಶಿಕ್ಷಣಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಗಳಲ್ಲಿ ನೀತಿ ಶಿಕ್ಷಣಕ್ಕೆ ಸಲಹೆ

ಹುಬ್ಬಳ್ಳಿ: ‘ಸಮಾಜದಲ್ಲಿ ದಿನದಿಂದ ದಿನಕ್ಕೆ ನೈತಿಕ ಅಧಃಪತನ ಹೆಚ್ಚುತ್ತಿದ್ದು, ಶಾಲೆಗಳು ಮಕ್ಕಳಲ್ಲಿ ನೀತಿ ಶಿಕ್ಷಣ ನೀಡುವುದನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಸಲಹೆ ನೀಡಿದರು.ಚೇತನ ಪಬ್ಲಿಕ್ ಶಾಲೆ ಮತ್ತು ಸಚೇತನ ಪಿಯು ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ‘ಮಠಗಳು ಹಾಗೂ ಸಿರಿವಂತರು ಶಿಕ್ಷಣ ಸಂಸ್ಥೆ ಕಟ್ಟಿದ್ದನ್ನು ನಾವು ನೋಡಿದ್ದೇವೆ. ಶಿಕ್ಷಕರೇ ಕೂಡಿಕೊಂಡು ವಿದ್ಯಾಸಂಸ್ಥೆ ಕಟ್ಟಿದ ಉದಾಹರಣೆ ಪ್ರಾಯಶಃ ದ್ಯಾವಪ್ಪನವರ ವಳಸಂಗ ಅಕಾಡೆಮಿಯೇ ಮೊದಲನೆಯದು’ ಎಂದು ಅವರು ಹೇಳಿದರು.‘ಅಮೆರಿಕಾದ ಶಿಕ್ಷಣ ತಜ್ಞರೂ ಬಂದು ಬೆರಗಿನಿಂದ ನೋಡುವಂತಹ ಶಿಕ್ಷಣ ಸಂಸ್ಥೆಯನ್ನು ನಮ್ಮವರು ಕಟ್ಟಬೇಕು’ ಎಂದ ಅವರು, ‘ಚೇತನಾ ಶಾಲೆಯನ್ನು ನೋಡಿದರೆ ಮತ್ತೆ ಮಗುವಾಗಿ ಈ ಶಾಲೆಯಲ್ಲಿ ಕಲಿಯಬೇಕು ಎಂಬ ಆಸೆಯಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.‘ಇಂದಿನ ಶಿಕ್ಷಣ ವ್ಯಾಪಾರೀಕರಣವಾಗಿದ್ದು, ಶಿಕ್ಷಣವನ್ನು ಪೂರ್ಣ ವ್ಯಾಪಾರಿ ಸರಕು ಎಂದು ಪರಿಗಣಿಸಿದವರು ಬೆಳದಷ್ಟೇ ವೇಗದಲ್ಲಿ ಬೀಳುತ್ತಾರೆ. ಸಾರ್ವಜನಿಕ ಬದುಕಿಗೆ ಸ್ಪಂದಿಸುವುದೇ ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು. ಅಲ್ಪಪ್ರಮಾಣದ ಸ್ವಾರ್ಥ ತಪ್ಪಲ್ಲ’ ಎಂದು ಮತ್ತೊಬ್ಬ ಅತಿಥಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.‘ಶಿಕ್ಷಣದ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ಶಿಕ್ಷಕರಿಗೂ ಮುಜುಗರ ಉಂಟು ಮಾಡುವಷ್ಟು ವಿದ್ಯಾರ್ಥಿಗಳು ಬುದ್ಧಿವಂತರಿದ್ದಾರೆ. ಎಷ್ಟೇ ಬುದ್ಧಿವಂತರಾದರೂ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಕಡಿಮೆ ಆಗುತ್ತಿದೆ. ಅದನ್ನು ಬೆಳೆಸುವ ಕಡೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಆರ್.ಆರ್. ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ ದ್ಯಾವಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಜಿ.ವಿ.ವಳಸಂಗ ವಂದಿಸಿದರು. ಶೈಕ್ಷಣಿಕ ಸಲಹೆಗಾರ ಡಾ.ಎಂ.ವಿ. ಕುಂದಗೋಳ, ಆಡಳಿತಾಧಿಕಾರಿ ಎನ್.ಎಚ್.ಹಿರೇಗೌಡರ, ಪ್ರಾಚಾರ್ಯರಾದ ಎಂ.ಎಂ.ಕರೇಗೌಡರ, ಸುಜಾತಾ ಧಡೂತಿ ವೇದಿಕೆ ಮೇಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.