ಭಾನುವಾರ, ಮೇ 22, 2022
27 °C

ಶಾಶ್ವತ ನೀರಾವರಿ ಯೋಜನೆಗೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಜಿಲ್ಲೆಯಲ್ಲಿ ನಿಧಾನವಾಗಿ ಸಂಚಲನ ಮೂಡತೊಡಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಲ್ಲಲ್ಲಿ ಸಭೆಗಳನ್ನು ನಡೆಸುವ ಮೂಲಕ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಸಲಹೆ- ಸೂಚನೆಗಳನ್ನು ನೀಡುತ್ತಿದ್ದಾರೆ. ಕೆಲವರು ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗುತ್ತಿದ್ದಾರೆ, ಇನ್ನೂ ಕೆಲವರು ಜನರನ್ನು ಕರೆ ತರುವ ಮೂಲಕ ಬಂದ್ ಯಶಸ್ವಿಗೊಳಿಸುವ ಬಗ್ಗೆ ಭರವಸೆ ನೀಡುತ್ತಿದ್ದಾರೆ. ಆಯಾ ತಾಲ್ಲೂಕುಗಳಲ್ಲಿ ಶಾಸಕರು ಬಂದ್‌ಗೆ ಸಂಬಂಧಿಸದಂತೆ ಜನರನ್ನು ಸಂಘಟಿಸುವ ಬಗ್ಗೆ ವಾಗ್ದಾನ ನೀಡುತ್ತಿದ್ದಾರೆ.ಈ ಎಲ್ಲದರ ನಡುವೆ ಶಾಶ್ವತ ನೀರಾವರಿ ಹೋರಾಟ ಸಮಿತಿಯು ತನ್ನ ಹೋರಾಟದ ತಿರುಳು ಮತ್ತು ಉದ್ದೇಶವನ್ನು ನಿಧಾನವಾಗಿ ಬೇರೆ ಸ್ವರೂಪದಲ್ಲಿ ವಿಸ್ತರಿಸುತ್ತಿದೆ. ನೀರಾವರಿ ತಜ್ಞ ಡಾ. ಪರಮಶಿವಯ್ಯ ಅವರ ವರದಿಯನ್ನು ಅನುಷ್ಠಾನ ಗೊಳಿಸವಂತೆ ಆಗ್ರಹಿಸುತ್ತಿದ್ದ ಸಮಿತಿಯು ಈಗ ಯಾವುದಾದರೂ ಮೂಲದಿಂದ ಜಿಲ್ಲೆಗಳಿಗೆ ನೀರು ತಂದುಕೊಡುವಂತೆ ಒತ್ತಾಯಿಸುತ್ತಿದೆ. ಪಶ್ಚಿಮ ಘಟ್ಟದಲ್ಲಿ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಇಲ್ಲವೇ ಬೇರೆ ಮೂಲದಿಂದ ನೀರನ್ನು ಜಿಲ್ಲೆಗಳಿಗೆ ಹರಿಸುವಂತೆ ಸಮಿತಿಯ ಸದಸ್ಯರು ಒತ್ತಡ ಹೇರಲು ನಿರ್ಧರಿಸಿದ್ದಾರೆ. ಆದರೆ ಈವರೆಗಿನ ಹೋರಾಟದ ಕೇಂದ್ರಬಿಂದುವಾಗಿದ್ದ ಮತ್ತು ಈಗಲೂ ಪ್ರಮುಖ ವಿಷಯವಾಗಿರುವ ಡಾ. ಪರಮಶಿವಯ್ಯ ಅವರ ವರದಿ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಅಂಶ ಬೆಳಕಿಗೆ ಬರುತ್ತಿಲ್ಲ.ಪರಮಶಿವಯ್ಯ ಅವರು ಸರ್ಕಾರದೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದರೂ ವರದಿ ಬಗ್ಗೆ ಪೂರಕವಾದ ಪ್ರತಿಕ್ರಿಯೆ ಸಿಗಲಿಲ್ಲ. ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಹೋರಾಟ-ಪ್ರತಿಭಟನೆಗಳು ನಡೆದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ.ಶಾಶ್ವತ ನೀರಾವರಿಗಾಗಿ ನಡೆಯುತ್ತಿರುವ ಹೋರಾಟ ನಿನ್ನೆ- ಮೊನ್ನೆಯದ್ದಲ್ಲ. ದಶಕಗಳಿಂದ ಮುಂದುವರೆದಿದೆ. ಕೋಲಾರ ಅವಿಭಜಿತ ಜಿಲ್ಲೆಯಾಗಿದ್ದ ಸಂದರ್ಭದಲ್ಲಿ ಆರಂಭಗೊಂಡ ಹೋರಾಟ ಈಗ ಎರಡು ಜಿಲ್ಲೆಗಳಾದರೂ ಹೋರಾಟಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ. ಪ್ರತಿ ಬಾರಿ ಮುಖ್ಯಮಂತ್ರಿ ಅಥವಾ ಪ್ರಭಾವಿ ವ್ಯಕ್ತಿಯ ಭರವಸೆಯೊಂದಿಗೆ ನಿಸ್ತೇಜಗೊಳ್ಳುವ ಹೋರಾಟ ಆಗಾಗ್ಗೆ ಜೀವ ಪಡೆದುಕೊಂಡು ಮತ್ತೆ ಮುಂದುವರೆಯುತ್ತದೆ.ಶಾಶ್ವತ ನೀರಾವರಿ ಯೋಜನೆಗಾಗಿ 2003ರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಿಂದ ಸಿಪಿಎಂ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಅವರ ನೇತೃತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ವಿಧಾನಸೌಧದವರೆಗೆ ಪಾದಯಾತ್ರೆ ಕೈಗೊಂಡಿದ್ದರು. 2004ರಲ್ಲಿ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಆಸಕ್ತಿ ತೋರಿದ ಧರ್ಮಸಿಂಗ್ ನೇತೃತ್ವದ ಸರ್ಕಾರ ಪರಮಶಿವಯ್ಯ ಅವರ ವರದಿಯನ್ನು ಆಧರಿಸಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಸಮೀಕ್ಷೆ ನಡೆಸಲು ಇಸ್ರೊ ಸಂಸ್ಥೆಗೆ ಸೂಚಿಸಿತ್ತು. ಪಶ್ಚಿಮ ಘಟ್ಟದಿಂದ ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಪೂರೈಸುವಿಕೆಗೆ ಸಂಬಂಧಿಸಿದಂತೆ ಇಸ್ರೊ ಸಂಸ್ಥೆ ಸಮೀಕ್ಷೆ ಕೂಡ ನಡೆಸಿತ್ತು. ಆದರೆ ಆಗಿನ ಸರ್ಕಾರ ಕೇವಲ ನಾಲ್ಕು ಕೋಟಿ ಬಿಡುಗಡೆ ಮಾಡಿದ ಕಾರಣ ಇಸ್ರೊ ಸಂಸ್ಥೆಯು ಸರ್ಕಾರಕ್ಕೆ ಸಮೀಕ್ಷೆಯ ವರದಿಯನ್ನು ನೀಡಲಿಲ್ಲ.ಸಮೀಕ್ಷೆಗೆ ತಗುಲಿದ ವೆಚ್ಚ 8 ಕೋಟಿ ರೂಪಾಯಿ ಪಾವತಿಸುವವರೆಗೆ ಇಸ್ರೊ ಸಂಸ್ಥೆಯು ಸರ್ಕಾರಕ್ಕೆ ವರದಿಯನ್ನು ನೀಡುವುದಿಲ್ಲ. ಸಮೀಕ್ಷೆ ವರದಿ ನೀಡುವವರೆಗೆ ಸರ್ಕಾರಕ್ಕೆ ಪರಮಶಿವಯ್ಯ ವರದಿಯ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ವರದಿಯಂತೆ ಪಶ್ಚಿಮ ಘಟ್ಟದಿಂದ ನೀರು ಜಿಲ್ಲೆಗಳಿಗೆ ಹರಿಸಲು ಸಾಧ್ಯವಾಗುವುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಚರ್ಚೆ ಕೂಡ ನಡೆಸಲು ಆಗುವುದಿಲ್ಲ.ಈ ಬಾರಿ ಬಂದ್ ಯಶಸ್ವಿಗೊಳಿಸಲೇಬೇಕು, ನೀರಾವರಿ ಯೋಜನೆಯನ್ನು ಜಾರಿಗೆ ಬರುವಂತೆ ಮಾಡಲೇಬೇಕು ಎಂದು ಪಣತೊಟ್ಟಿರುವ ಹೋರಾಟಗಾರರು ಅಗತ್ಯ ಸಿದ್ಧತೆಯೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವನ್ನು ರೂಪಿಸುತ್ತಿದ್ದಾರೆ. ಈ ಬಾರಿಯ ಹೋರಾಟ ಫಲಪ್ರದವಾಗಲಿದೆ ಎಂಬ ನಿರೀಕ್ಷೆಯಲ್ಲಿ ಸಂಘಟನಾತ್ಮಕ ಪ್ರಯತ್ನ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.