ಸೋಮವಾರ, ಜನವರಿ 20, 2020
24 °C

ಶಾಸಕ ಓಲೇಕಾರ ವಿರುದ್ಧ ರಾಜ್ಯಪಾಲರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಆಯೋಗದ ಅಧ್ಯಕ್ಷರೂ ಆದ ಹಾವೇರಿ ಶಾಸಕ ನೆಹರೂ ಓಲೇಕಾರ ಅವರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸುವಂತೆ ಒತ್ತಾ ಯಿಸಿ ತಾಲ್ಲೂಕಿನ ಗುತ್ತಲದ ಈರಪ್ಪ ಲಮಾಣಿ ಬುಧವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.ಓಲೇಕಾರ ಅವರು ಶಾಸಕರಾದ ನಂತರ ತಮ್ಮ ಕುಟುಂಬದಲ್ಲಿಯೇ ಇರುವ ಇಬ್ಬರು ಪುತ್ರರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರಲ್ಲದೇ, ಶಾಸಕರು ತಮ್ಮ ಅನುದಾನದ ಮೂಲಕ ನಡೆಯುವ ಕಾಮಗಾರಿಗಳನ್ನು ತಮ್ಮ ಮಕ್ಕಳಿಗೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಶಿವಮೊಗ್ಗದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿರುವ ನೆಹರೂ ಓಲೇಕಾರ ಮಂಡಳಿಯ ಹಾಗೂ ಶಾಸಕರ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಸಹ ಗುತ್ತಿಗೆ ದಾರರಾದ ತಮ್ಮ ಮಕ್ಕಳಿಗೆ ನೀಡಿದ್ದಾರಲ್ಲದೇ, ಶಾಸಕರ ನಿಧಿಯ 50 ಲಕ್ಷ ರೂ. ಅನುದಾನದಲ್ಲಿ 20 ಲಕ್ಷ ರೂ.ಅನುದಾನವನ್ನು ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ 8 ಲಕ್ಷ ರೂ.ಗಳನ್ನು ತಮ್ಮ ಮಕ್ಕಳಾದ ಮಂಜುನಾಥ ಓಲೇಕಾರ ಹಾಗೂ ದೇವರಾಜ ಓಲೇಕಾರ ಅವರಿಗೆ ನೀಡಿದ್ದಾರೆ. ಕೇವಲ ಕಾಮಗಾರಿ ನೀಡುವುದಲ್ಲದೇ ಬೇರೆಯವರು ಟೆಂಡರ್ ಹಾಕದಂತೆ ಪ್ರಭಾವ ಸಹ ಬೀರಿದ್ದಾರೆ ಎಂದು ಆರೋಪಿಸಿದ್ದಾರೆ.ಶಾಸಕ ಓಲೇಕಾರ ಅವರು ಲೋಕಾಯುಕ್ತರಿಗೆ 2009 ರಲ್ಲಿ ಸಲ್ಲಿಸಿದ ಸ್ವಆಸ್ತಿ ವಿವರದಲ್ಲಿ ತಮ್ಮ ಮಕ್ಕಳು ಗುತ್ತಿಗೆದಾರರು ಇದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. 2010ರ ಆಸ್ತಿ ವಿವರದಲ್ಲಿ ಮಕ್ಕಳು ಗುತ್ತಿಗೆದಾರರು ಇರುವುದಾಗಿ ತಿಳಿಸುವ ಮೂಲಕ ಲೋಕಾಯುಕ್ತರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.ಈ ಎಲ್ಲ ಪ್ರಕರಣಗಳಿಂದ ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ತಕ್ಷಣವೇ ಓಲೇಕಾರ ಅವರು ವಿಧಾನಸಭೆ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.ಇದೇ ಈರಪ್ಪ ಲಮಾಣಿಯವರು ಶಾಸಕ ನೆಹರೂ ಓಲೇಕಾರ ಅವರು ವಿರುದ್ಧ ಭೂಕಬಳಿಕೆ ಆರೋಪದ ಮೇಲೆ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈಗಾಗಲೇ ನ್ಯಾಯಾಲಯವು ಅವರ ವಿರುದ್ಧ ಆರೋಪದ ತನಿಖೆಗೆ ನಡೆಸುವಂತೆ ಲೋಕಾಯುಕ್ತ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)