ಭಾನುವಾರ, ಜೂನ್ 20, 2021
29 °C

ಶಾಸಕ ಮುನಿರಾಜು ಭೂಕಬಳಿಕೆ ಮಾಡಿದ್ದು ನಿಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಯಶವಂತಪುರ ಹೋಬಳಿಯ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ಭೂಕಬಳಿಕೆ ನಡೆಸಿರುವುದು ಮತ್ತು ಸುಳ್ಳು ಮಾಹಿತಿ ನೀಡಿ ಸರ್ಕಾರವನ್ನು ವಂಚಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಲೋಕಾಯುಕ್ತ ಪೊಲೀಸರು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.ಕಳೆದ ಅಕ್ಟೋಬರ್ 31ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ, ಮುನಿರಾಜು ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.

 

ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಮಾರ್ಗದರ್ಶನದಲ್ಲಿ ತನಿಖೆ ಪೂರ್ಣಗೊಳಿಸಿದ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ಅವರು 70 ಪುಟಗಳ ತನಿಖಾ ವರದಿ ಸಲ್ಲಿಸಿದರು.

ಮುನಿರಾಜು, ರಾಮನಗರದ ಹಾಲಿ ಚುನಾವಣಾ ತಹಶೀಲ್ದಾರ್ ಕೆ.ರಂಗನಾಥಯ್ಯ, ಯಶವಂತಪುರ ಹೋಬಳಿ ಕಂದಾಯ ನಿರೀಕ್ಷಕ ಸುರೇಶ್ ಅಕ್ರಮ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಶಾಸಕ ಮುನಿರಾಜು ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ತನಿಖಾಧಿಕಾರಿ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದೇ ರೀತಿ ರಂಗನಾಥಯ್ಯ ಮತ್ತು ಸುರೇಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.ವರದಿಯಲ್ಲಿ ಏನಿದೆ?

`1995ರಲ್ಲಿ ಮುನಿರಾಜು ಅವರು ಕೇಶವಮೂರ್ತಿ ಎಂಬುವರಿಂದ 30 ಗುಂಟೆ ಭೂಮಿ ಖರೀದಿಸುತ್ತಾರೆ. ಆದರೆ, ಆಗ ಕೇಶವಮೂರ್ತಿ ಬಳಿ ಇದ್ದುದು ನಾಲ್ಕು ಗುಂಟೆ ಭೂಮಿ ಮಾತ್ರ ಇತ್ತು. ಉಳಿದ 26 ಗುಂಟೆ ಅಸ್ತಿತ್ವದಲ್ಲೇ ಇರಲಿಲ್ಲ. ನಂತರ ಅದರಲ್ಲಿ ಒಂಬತ್ತು ಗುಂಟೆಯನ್ನು ಪುಷ್ಪಾ ಹಾಲಾಡಿ ಎಂಬುವರಿಗೆ ಮುನಿರಾಜು ಮಾರುತ್ತಾರೆ. ಉಳಿದ 21 ಗುಂಟೆಗೆ ಇನ್ನೂ 14 ಗುಂಟೆ ಸೇರಿಸಿ 35 ಗುಂಟೆ ವಿಸ್ತೀಣದಲ್ಲಿ 38 ನಿವೇಶನ ರಚಿಸುತ್ತಾರೆ. ಎಲ್ಲವನ್ನೂ 1996ರಲ್ಲೇ ಮಾರಿದ್ದಾರೆ~ ಎಂಬ ವಿವರ ವರದಿಯಲ್ಲಿದೆ.ನಿವೇಶನ ಖರೀದಿಸಿದವರ ಹೆಸರಿಗೆ ಖಾತೆ ವರ್ಗಾವಣೆ ಆಗಿರುವುದಿಲ್ಲ. ಇದನ್ನು ಅರಿತ ಮುನಿರಾಜು, 2008ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ 21 ಗುಂಟೆ ಭೂಮಿಯ ಮ್ಯುಟೇಷನ್ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದರು. ಆಗ ಯಶವಂತಪುರ ಹೋಬಳಿಯ ಕಂದಾಯ ನಿರೀಕ್ಷಕರ ಹುದ್ದೆಯಲ್ಲಿದ್ದ ರಮೇಶ್ ಈ ಬೇಡಿಕೆಯನ್ನು ನಿರಾಕರಿಸಿದ್ದರು.

 

ನಂತರ ಈ ಹುದ್ದೆಗೆ ಬಂದ ಸುರೇಶ್ ಎದುರು ಮುನಿರಾಜು ಮತ್ತೊಂದು ಅರ್ಜಿ ಸಲ್ಲಿಸಿದರು. ಅದನ್ನು ಮಾನ್ಯ ಮಾಡಿದ್ದ ಅವರು, ಸತ್ಯ ಸಂಗತಿಯನ್ನು ಮುಚ್ಚಿಟ್ಟು ಉಪ ವಿಭಾಗಾಧಿಕಾರಿಗೆ ಕಳುಹಿಸಿದ್ದರು ಎಂಬ ಆರೋಪವನ್ನು  ದಾಖಲಿಸಲಾಗಿದೆ.ಇದೇ ಭೂಮಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿ ಇತ್ತು. ಈ ವಿಷಯವನ್ನು ಮುಚ್ಚಿಟ್ಟು, ತಹಶೀಲ್ದಾರ್ ರಂಗನಾಥಯ್ಯ ಕೂಡ ಮ್ಯುಟೇಷನ್ ವರ್ಗಾವಣೆಗೆ ಶಿಫಾರಸು ಮಾಡಿದ್ದರು. ಉಪ ವಿಭಾಗಾಧಿಕಾರಿಗಳಿಂದ ಕಡತ ವಾಪಸಾದ ಬಳಿಕ, ಅಕ್ರಮವಾಗಿ ಈ ಭೂಮಿಯ ಮ್ಯುಟೇಷನ್ ಅನ್ನು ಮುನಿರಾಜು ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.ಈ ಕುರಿತು ವಿವರ ನೀಡಿದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಎಚ್.ಎನ್.ಸತ್ಯನಾರಾಯಣ ರಾವ್, ಮುನಿರಾಜು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 120-ಬಿ (ಸಂಚು), 420 (ವಂಚನೆ), ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)(ಡಿ) ಮತ್ತು 13(2) (ಅಧಿಕಾರ ದುರ್ಬಳಕೆ, ಅಕ್ರಮ ಆಸ್ತಿ ಸಂಪಾದನೆ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು. ರಂಗನಾಥಯ್ಯ ಮತ್ತು ಸುರೇಶ್ ವಿರುದ್ಧ  ನಿಯಂತ್ರಣ ಕಾಯ್ದೆಯ ಕಲಂ 13(1)(ಡಿ) ಮತ್ತು 13(2) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.