ಗುರುವಾರ , ಮೇ 28, 2020
27 °C

ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ಅವರ ಬೆಂಬಲಿಗರು ವಿನಾಕಾರಣ ರೈತ ಸಂಘದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಜಮಾವಣೆಗೊಂಡಿದ್ದ ರೈತ ಸಂಘದ ನೂರಾರು ಕಾರ್ಯಕರ್ತರು ಪುಟ್ಟರಾಜು ಮತ್ತು ಅವರ ಬೆಂಬಲಿಗರ ವಿರುದ್ಧ ಘೋಷಣೆ ಕೂಗಿದರು. ಚನ್ನರಾಯಪಟ್ಟಣ ಮೈಸೂರು ರಸ್ತೆಯಲ್ಲಿ ಕೆಲಹೊತ್ತು ರಸ್ತೆತಡೆ ನಡೆಸಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.ಈಚೆಗೆ ನಡೆದ ಜಿ.ಪಂ/ತಾ.ಪಂ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಪುಟ್ಟರಾಜು ಅವರಿಗೆ ಮುಂದಿನ ಚುನಾವಣೆಯಗಳಲ್ಲಿ  ಸೋಲಾಗುವ ಭೀತಿ ಉಂಟಾಗಿದೆ. ಇದರಿಂದಾಗಿ ಶಾಸಕರು ಮತ್ತು ಜೆಡಿಎಸ್ ಕಾರ್ಯಕರ್ತರು ಪಾಂಡವಪುರ ತಾಲ್ಲೂಕಿನಲ್ಲಿ ಅಶಾಂತಿಯ ವಾತಾವರಣ ಉಂಟುಮಾಡುತ್ತಿದ್ದಾರೆ. ಜನಪರವಾದ ಕಾಳಜಿಯೇ ಗೊತ್ತಿಲ್ಲದ ಇವರು, ಜನಪರ ಹೋರಾಟಗಾರ ಪುಟ್ಟಣ್ಣಯ್ಯನವರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸಾರ್ವಜನಿಕರ ನಡುವೆ ದ್ವೇಷದ ಭಾವನೆಯನ್ನು ಹುಟ್ಟುಹಾಕಿ ಅವರ ನೆಮ್ಮದಿ ಜೀವನಕ್ಕೆ ಭಂಗ ತರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ರೈತಮುಖಂಡ ಪುಟ್ಟಣ್ಣಯ್ಯ ಅವರ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ರೈತ ಸಂಘದ ಮುಖಂಡರಾದ ಕೆ.ಆರ್.ಜಯರಾಮು, ಎಂ.ವಿ.ರಾಜೇಗೌಡ, ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಡಿ.ಎಸ್.ನಾಗೇಂದ್ರ, ಮುದ್ದುಕುಮಾರ್, ಕಾರಿಗನಹಳ್ಳಿ ಕುಮಾರ್, ಚೌಡೇನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಮಹೇಶ್, ನಾಗಣ್ಣ, ಕರೋಟಿ ತಮ್ಮಯ್ಯ, ನಗರೂರು ಕುಮಾರ್ ಮತ್ತಿತರರು ನೇತೃತ್ವ ವಹಿಸಿದ್ದರು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.