ಶುಕ್ರವಾರ, ಮೇ 14, 2021
29 °C

ಶಿಕ್ಷಕರಿಂದ ಅಂಗವಿಕಲ ಕೋಟಾ ದುರುಪಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ 18 ಶಿಕ್ಷಕರು ಸುಳ್ಳು ವೈದ್ಯಕೀಯ ಪ್ರಮಾಣಪತ್ರವನ್ನು ನೀಡಿ ಅಂಗವಿಕಲರ ಕೋಟಾವನ್ನು ದುರುಪಯೋಗಪಡಿಸಿಕೊಂಡಿರುವ ಸಂಗತಿ ಬಹಿರಂಗಗೊಂಡಿದೆ.45 ಮಂದಿ ಶಿಕ್ಷಕರು ಅಂಗವಿಕಲರ ಸೌಲಭ್ಯ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಚೇರಿಯ ಆಯುಕ್ತ ಕೆ.ವಿ.ರಾಜಣ್ಣ ಜೂನ್ 5ರಂದು ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ವೇಳೆ 18 ಮಂದಿ `ನಕಲಿ ಅಂಗವಿಕಲರು' ಇರುವುದು ಬೆಳಕಿಗೆ ಬಂತು.`ಈ ಎಲ್ಲ ಶಿಕ್ಷಕರ ದೈಹಿಕ ತಪಾಸಣೆ ಹಾಗೂ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಿ ರಾಜ್ಯ ಮಟ್ಟದ ಮೇಲ್ವಿಚಾರಣಾ ವೈದ್ಯಕೀಯ ಪ್ರಾಧಿಕಾರಕ್ಕೆ ಮರುಪರಿಶೀಲನೆಗೆ ಕಳುಹಿಸಲು ನಿಶ್ವಯಿಸಲಾಗಿದೆ. ಅವರು ಅಂಗವಿಕಲರು ಅಲ್ಲ ಎಂಬುದು ಗೊತ್ತಾದರೆ ಅಂಗವಿಕಲರ ಕೋಟಾದಡಿ ಪಡೆದಿರುವ ಸೌಲಭ್ಯಗಳನ್ನು ರದ್ದುಗೊಳಿಸಿ, ಈಗಾಗಲೇ ಪಡೆದುಕೊಂಡಿರುವ ಮೊತ್ತದ ವಸೂಲಿಗೆ ಆದೇಶಿಸಲಾಗುವುದು' ಎಂದು ರಾಜಣ್ಣ ಅವರು   ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`45 ಶಿಕ್ಷಕರ ಪಟ್ಟಿಯಲ್ಲಿ 42 ಮಂದಿಯ ದೈಹಿಕ ತಪಾಸಣೆ ಹಾಗೂ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು. ಅಂಗವಿಕಲ ಕೋಟಾದಡಿ ಉದ್ಯೋಗ ಪಡೆದುಕೊಂಡಿದ್ದ 10 ರಿಂದ 11 ಮಂದಿ ಶಿಕ್ಷಕರು ಕಣ್ಣಿಗೆ ಕಾಣುವಂತಹ ಅಂಗವಿಕಲತೆಯನ್ನೂ ಹೊಂದಿಲ್ಲ ಎಂಬುದು ಕಂಡುಬಂದಿದೆ' ಎಂದು ಮಾಹಿತಿ ನೀಡಿದರು. `ಏಳು ಶಿಕ್ಷಕರು ಸಾಮಾನ್ಯ ಕೋಟಾದಡಿಯಲ್ಲಿ ನೇಮಕವಾಗಿದ್ದರು.ಬಳಿಕ ಗಂಟುನೋವು, ಮೂಳೆಮುರಿತ ಮುಂತಾದವುಗಳಿಗೆಲ್ಲ ಅಂಗವಿಕಲರೆಂದು ವೈದ್ಯಕೀಯ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದರು. ಅವರು ಹತ್ತಾರು ವರ್ಷಗಳಿಂದ ಅಂಗವಿಕಲರಿಗೆ ಮೀಸಲಾಗಿರುವ ವೃತ್ತಿ ತೆರಿಗೆ ವಿನಾಯಿತಿ, ಆದಾಯ ತೆರಿಗೆ ವಿನಾಯಿತಿ ಮತ್ತು ಸಂಚಾರಿ ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಅವರು ಈ ಪ್ರಮಾಣಪತ್ರಗಳನ್ನು ಅಧಿಕೃತ ವೈದ್ಯಕೀಯ ಮಂಡಳಿಯಿಂದ ಪಡೆದದ್ದಲ್ಲ' ಎಂದು ಸ್ಪಷ್ಟಪಡಿಸಿದರು.`ಇದೇ ತಾಲ್ಲೂಕಿನಲ್ಲಿ ಮೂವರು ಶಿಕ್ಷಕರು ಸೇವೆಯಲ್ಲಿರುವಾಗಲೇ ಅಂಗವಿಕಲರಾಗಿದ್ದಾರೆ. ವಿ.ಸುಬ್ರಹ್ಮಣ್ಯ ಎಂಬುವರು ದೃಷ್ಟಿ ಕಳೆದುಕೊಂಡು ಮೂರು ವರ್ಷಗಳಾಗಿವೆ. ದೇವರಾಜು ಒಂದೂವರೆ ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದಾರೆ ಮತ್ತು ಅಮರನಾಥ ಅವರು ಒಂದು ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದಾರೆ. ಆದರೆ, ಇವರ‌್ಯಾರಿಗೂ ವೇತನವನ್ನು ನೀಡಿಲ್ಲ ಮತ್ತು ಅವರಿಗೆ ಅನುಕೂಲವಾಗುವಂತಹ ಬದಲಿ ಕೆಲಸವನ್ನೂ ನೀಡಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.`ಸೇವೆಯಲ್ಲಿರುವಾಗ ಅಂಗವಿಕಲರಾದರೆ ಅವರಿಗೆ ವೇತನ ಮತ್ತು ಬದಲಿ ಕೆಲಸವನ್ನು ನೀಡುವ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಜತೆಗೆ ಶಿಕ್ಷಕರ ಸಂಘದವರಿಗೂ ಮಾಹಿತಿ ಇಲ್ಲದೇ ಇರುವುದು ಆಶ್ಚರ್ಯ ಉಂಟುಮಾಡಿದೆ' ಎಂದರು.ಸರ್ಕಾರಿ ಉದ್ಯೋಗ ಕಡಿಮೆ: `ರಾಜ್ಯದಲ್ಲಿ ಸುಮಾರು 7 ರಿಂದ 8 ಸಾವಿರ ಅಂಗವಿಕಲರು ಮಾತ್ರ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಬೇರೆ ರಾಜ್ಯಗಳಲ್ಲಿ ಇದರ ಪ್ರಮಾಣ ಸುಮಾರು 30 ಸಾವಿರಕ್ಕಿಂತ ಜಾಸ್ತಿ ಇದೆ. ಅಂಗವಿಕಲರಿಗೆ ಇರುವ ಅನೇಕ ಸೌಲಭ್ಯಗಳ ಕುರಿತು ಮಾಹಿತಿಯಿಲ್ಲದಿರುವುದು, ಅಂಗವಿಕಲರಿಗೆ ದೊರೆಯಬೇಕಾದ ಸೌಲಭ್ಯಗಳ ದುರುಪಯೋಗ ಮತ್ತು ಇಲಾಖೆಯಲ್ಲಿನ ಅನೇಕ ದೋಷಗಳೂ ಇದಕ್ಕೆ ಪ್ರಮುಖ ಕಾರಣಗಳು' ಎಂದರು.

`ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಸರಿನ ಬದಲಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೆಂದು ಎಲ್ಲೆಡೆಯೂ ನಮೂದಿಸಬೇಕೆಂದು ಹೇಳಿ ಒಂದು ವರ್ಷವಾಯಿತು. ಅದು ಇನ್ನು ಜಾರಿಗೆ ಬಂದಿಲ್ಲ. ಎಲ್ಲರೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯ ಕುರಿತು ಮಾತಾಡುತ್ತಾರೆಯೇ ಹೊರತು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕುರಿತು ಏನೂ ಮಾತಾಡುವುದಿಲ್ಲ. ಯಾವ ಕಾರ್ಯವನ್ನೂ ಸಹ ಮಾಡುವುದಿಲ್ಲ' ಎಂದು ಕೆ.ವಿ.ರಾಜಣ್ಣ ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.