ಮಂಗಳವಾರ, ಮೇ 24, 2022
30 °C

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಸಮುದಾಯ ನಮ್ಮಲ್ಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಮಾಡದ ಹಾಗೆ ಶಿಕ್ಷಕರು ಸೇವಾ ಮನೋಭಾವನೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು” ಎಂದು ಶಿಕ್ಷಣ ತಜ್ಞ ಪ್ರೊ. ಎ.ಎನ್.ಸೀತಾರಾಮು ಹೇಳಿದರು.ಇಲ್ಲಿನ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ 2010-2011ನೇ ಸಾಲಿನ ಬೆಳಗಾವಿ ವಿಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ವಿಶೇಷ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಶಿಕ್ಷಣ ಸಮಾಜದ ಕಟ್ಟಕಡೆಯ ಮಗುವಿಗೂ ಸಿಗಬೇಕು. ಮಕ್ಕಳಲ್ಲಿ ಕಲಿಯಬೇಕೆಂಬ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರಿಂದ ಸಮುದಾಯಕ್ಕೆ ಸ್ಪಂದಿಸುವಂಥ ಕೆಲಸ ನಡೆಯಬೇಕು. ಅಧ್ಯಾಪಕರು ಭಯ ಇಲ್ಲದ ಶಿಕ್ಷಣ ಕಲಿಕೆ ವಾತಾವರಣ ನಿರ್ಮಿಸಬೇಕು. ಶಿಕ್ಷಕರು ತಮ್ಮ ಸೇವೆಯನ್ನು ಮಾಡುವ ಕಲೆಯನ್ನು ಪರಿಶ್ರಮದಿಂದ ಕರಗತ ಮಾಡಿಕೊಂಡು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿ, ಸರ್ವಶಿಕ್ಷಣ ಅಭಿಯಾನ ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಕಾರ್ಯಕ್ರಮದಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷದಲ್ಲಿ 36,000 ಮಕ್ಕಳು ಶಾಲೆ ಬಿಟ್ಟು ಹೊರಗಿದ್ದರೆ, ಈ ವರ್ಷ 20,000ಕ್ಕೆ ಈ ಪ್ರಮಾಣ ಇಳಿದಿದೆ ಎಂದು ಹೇಳಿದರು.ಪ್ರಸಕ್ತ ವರ್ಷ ರಾಜ್ಯದಲ್ಲಿ ಸರ್ವಶಿಕ್ಷಣ ಅಭಿಯಾನದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ 1600 ಕೊಟಿ ರೂಪಾಯಿಗಳ ಯೋಜನೆ ನೀಡಿದೆ. ಈ ಯೋಜನೆ ಮುಖಾಂತರ ಇದುವರೆಗೆ ರಾಜ್ಯದಲ್ಲಿ ಶೇ. 90 ರಷ್ಟು ಮೂಲಭೂತ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಲಾಗಿದೆ. ಇದರಿಂದಾಗಿ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಪ್ರಗತಿಯನ್ನು ಕಾಣುತ್ತಿದ್ದೇವೆ ಎಂದರು.ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಂ.ಎಸ್.ಪಾಟೀಲ, ನಿವೃತ್ತ ಉಪನಿರ್ದೇಶಕ ಬಿ.ಎಂ.ಪಾಟೀಲ ಅವರನ್ನು ಸಹ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಎಸ್.ಆರ್. ಮನಹಳ್ಳಿ, ಅರಸ್ ಮುಳ್ಳೂರು, ವೀರೇಶ ಮಠ, ರೇವತಿ ಮಠದ, ನಾಯಕ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಜಂಟಿ ನಿರ್ದೇಶಕ ಜಿ.ಎಸ್.ನಾಯಕ, ಸರ್ವಶಿಕ್ಷಣ ಅಭಿಯಾನ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಗುರಿಕಾರ ವೇದಿಕೆಯಲ್ಲಿದ್ದರು. ನಿರ್ದೇಶಕ ವೈ.ಟಿ.ಗುರುಮೂರ್ತಿ ಸ್ವಾಗತಿಸಿದರು. ಇನಾಂದಾರ ನಿರೂಪಿಸಿದರು. ಡಿಡಿಪಿಐ ಕೆ.ಆನಂದ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.