ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಬೇರಿಗೆ ತಂತ್ರಜ್ಞಾನದ ನೀರು

Last Updated 26 ನವೆಂಬರ್ 2015, 8:30 IST
ಅಕ್ಷರ ಗಾತ್ರ

ಇದು ಡಿಜಿಟಲ್ ಯುಗ. ಪ್ರತಿ ಹಳ್ಳಿಯ ಮೂಲೆ ಮೂಲೆಗಳಿಗೂ ಮಾಹಿತಿ ತಂತ್ರಜ್ಞಾನ ತಲುಪಬೇಕು ಎಂಬುದು ಡಿಜಿಟಲ್ ಕ್ರಾಂತಿಯ ಅಂತಿಮ ಉದ್ದೇಶ. ದಿನಕ್ಕೆ ಹತ್ತಾರು ಸ್ಮಾರ್ಟ್‌ಫೋನ್, ಟ್ಯಾಬ್, ಲ್ಯಾಪ್‌ಟಾಪ್, ಹೈ ಎಂಡ್ ತಂತ್ರಜ್ಞಾನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಇದರೊಟ್ಟಿಗೆ ಇನ್ನೊಂದು ಮುಖವೂ ಇದೆ. ಭಾರತದ ಇನ್ನೂ ಮುಕ್ಕಾಲು ಪಾಲು ಶಾಲೆಗಳಲ್ಲಿ ಒಂದೇ ಒಂದು ಕಂಪ್ಯೂಟರ್ ಇಲ್ಲ. ಒಂದು ಶಾಲೆಗೆ ಒಂದು ಕಂಪ್ಯೂಟರ್ ಬಂದರೆ ಎಷ್ಟೆಲ್ಲಾ ಬದಲಾವಣೆಗೆ ಕಾರಣವಾಗಬಹುದಲ್ಲವೇ’ ಎಂದು ಪ್ರಶ್ನೆ ಹಾಕಿದರು ಮುಕುಂದ್.

ಹೀಗೊಂದು ಪ್ರಶ್ನೆ ಅವರಲ್ಲಿ ಹುಟ್ಟಿಕೊಂಡಿದ್ದು ಆರು ವರ್ಷಗಳ ಹಿಂದೆ.  ಇದೇ ಪ್ರಶ್ನೆಗೆ ಉತ್ತರವಾಗಿ ಅವರು ಕಟ್ಟಿದ್ದು ‘ರಿನ್ಯೂ’ ಎಂಬ ಸಂಸ್ಥೆಯನ್ನು. ಶಾಲೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಸಣ್ಣ ಸಂಸ್ಥೆಗಳಿಗೆ ಅತಿ ಕಡಿಮೆ ಬೆಲೆಗೆ ಕಂಪ್ಯೂಟರ್‌ಗಳನ್ನು ನೀಡುತ್ತಿರುವ ರಿನ್ಯೂ ಹಿಂದೆ ಇಬ್ಬರು ಯುವಕರ ಕನಸಿದೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಮುಕುಂದ್‌ ಎನ್‌ಐಟಿ ಸೂರತ್‌ನಲ್ಲಿ ಬಿ.ಇ ಎಲೆಕ್ಟ್ರಾನಿಕ್ಸ್ ಮಾಡಿ, ಐಐಎಂ ಕೋಲ್ಕತ್ತದಲ್ಲಿ
ಸ್ನಾತಕೋತ್ತರ ಪದವಿ ಮುಗಿಸಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು. ಸಹಸಂಸ್ಥಾಪಕ ರಾಘವ್ ಬೊಗ್ಗರಂ ಕೂಡ ವೆಸ್ಟರ್ನ್‌  ಮಿಚಿಗನ್ ವಿಶ್ವವಿದ್ಯಾಲಯದಿಂದ  ಪದವಿ ಪಡೆದು, ಮ್ಯಾಂಚೆಸ್ಟರ್‌ನಲ್ಲಿ ಎಂಬಿಎ ಮುಗಿಸಿ ಶಿಕಾಗೊದಲ್ಲಿ ನೌಕರಿ ಹಿಡಿದಿದ್ದರು. ಆದರೆ ಸಂಬಳದ ಹಿಂದೆ ಬೀಳುವುದಕ್ಕಿಂತ ಸಮಾಜಕ್ಕೆ ನೆರವಾಗುವಂಥ ಕೆಲಸದ ಹುಡುಕಾಟದಲ್ಲೇ ಇಬ್ಬರ ಪ್ರಯತ್ನ ಮುಂದುವರೆದಿತ್ತು.

ಈ ಆಲೋಚನೆಗೆ ವೇದಿಕೆಯಾಗಿದ್ದು ಒಂದು ಭೇಟಿ. ಮದುವೆಯೊಂದಕ್ಕೆ ಹೋಗಿದ್ದ ಮುಕುಂದ್‌ಗೆ ಅಮೆರಿಕ ಪ್ರಜೆಯೊಬ್ಬರ ಭೇಟಿಯಾಯಿತು. ಅಮೆರಿಕದಲ್ಲಿ ಇ–ತ್ಯಾಜ್ಯವನ್ನು ಸಂಸ್ಕರಿಸುವ ಕಂಪೆನಿ ಬಗ್ಗೆ ಚರ್ಚೆಯೂ ನಡೆಯಿತು. ಇ–ತ್ಯಾಜ್ಯವನ್ನು ಸಮರ್ಥವಾಗಿ ನಿಭಾಯಿಸುವ ಪರಿಸರಸ್ನೇಹಿ ಕೆಲಸ ಮುಕುಂದ್‌ಗೆ ಆಕರ್ಷಕವಾಗಿ ಕಂಡಿತ್ತು. ಹಿಂದೆ ಮುಂದೆ ನೋಡದೆ ಇದ್ದ ಕೆಲಸವನ್ನು ಬಿಟ್ಟು ಅಮೆರಿಕಕ್ಕೆ ಹೋಗಿ ಎರಡು ತಿಂಗಳು ಕೆಲಸ ಮಾಡಿದರು. ಸಂಬಂಧಿ ರಾಘವ್ ಅವರೊಂದಿಗೆ ಇದೇ ರೀತಿ ಕಂಪೆನಿ ಆರಂಭಿಸುವ ಆಲೋಚನೆ ಹಂಚಿಕೊಂಡರು.

ಆದರೆ ಭಾರತದ ಪರಿಸ್ಥಿತಿ ಬೇರೆಯದ್ದೇ ಆಗಿತ್ತು. ಕಂಪ್ಯೂಟರ್‌ಗಳನ್ನು ಪುನರ್‌ಬಳಕೆ ಮಾಡುವುದು ಯಾವುದೇ ಸಂಸ್ಥೆಯ ಉದ್ದೇಶ ಆಗಿರಲಿಲ್ಲ ಎಂಬ ಸತ್ಯ ಇವರಿಗೆ ಅರಿವಾಗಿತ್ತು. ಪ್ರತಿಕ್ರಿಯೆಗಳೂ ಇವರು ನಿರೀಕ್ಷಿಸಿದಂತಿರಲಿಲ್ಲ. ಆದರೂ ಬಿಡದೆ ಕಂಪೆನಿಗಳನ್ನು ಓಲೈಸಿದ್ದರು.

‘ಐಟಿ ಕಂಪೆನಿಗಳು ಸಾಮಾನ್ಯವಾಗಿ  ಎರಡು ಮೂರು ವರ್ಷಗಳಿಗೆ ಕಂಪ್ಯೂಟರುಗಳನ್ನು ಬದಲಾಯಿಸುತ್ತವೆ. ಆಗ ಹಿಂದೆ ಇದ್ದವು ಮೂಲೆ ಗುಂಪಾಗುತ್ತವೆ. ಅಂಥವನ್ನು ಪಡೆದಾಗ ಅದರಲ್ಲಿ ಅರ್ಧದಷ್ಟು ಕಂಪ್ಯೂಟರುಗಳು ಬಳಕೆಗೆ ಯೋಗ್ಯವಾಗಿದ್ದವು. ಅವುಗಳನ್ನು ರದ್ದಿಗೆ ಸೇರಿಸಲು ಮನಸ್ಸಾಗಲಿಲ್ಲ. ಆಗ ಹಳ್ಳಿಗಳಲ್ಲಿನ ಕಂಪ್ಯೂಟರ್‌ ಅವಶ್ಯಕತೆ ನಮ್ಮ ಕಣ್ಣೆದುರಿಗೆ ಬಂತು. ಅವುಗಳನ್ನು ಸರಿ ಮಾಡಿ ಹಳ್ಳಿಗಳಲ್ಲಿನ ಶಾಲೆಗಳಿಗೆ ಅತಿ ಕಡಿಮೆ ಬೆಲೆಗೆ ಕೊಡಲು ನಿರ್ಧರಿಸಿದೆವು’ ಎಂದು ತಮ್ಮ ದಾರಿ ಬದಲಾದ ಹಂತವನ್ನು ವಿವರಿಸಿದರು ರಾಘವ್. 

2011ರ ರಾಷ್ಟ್ರೀಯ ಸಮೀಕ್ಷೆ ಪ್ರಕಾರ ಹತ್ತರಲ್ಲಿ ಒಂದಕ್ಕಿಂತ ಕಡಿಮೆ ಮನೆಗಳಲ್ಲಿ ಮಾತ್ರ ಕಂಪ್ಯೂಟರ್ ಇದೆ. ಅಂದರೆ ಶೇ 9.4ರಷ್ಟು ಮನೆಗಳಲ್ಲಿ ಮಾತ್ರ ಕಂಪ್ಯೂಟರ್ ಇದೆ.  ಎಷ್ಟೋ ಶಾಲೆಗಳಲ್ಲಿ  ಒಂದು ಕಂಪ್ಯೂಟರ್ ತರಲೂ ಕಷ್ಟವಿರುವ ಸ್ಥಿತಿಯನ್ನು ತಮ್ಮದೇ ಸಂಶೋಧನೆಯಿಂದ ಕಂಡುಕೊಂಡರು. ಕಂಪ್ಯೂಟರ್‌ಗಳನ್ನು ಕೈಗೆಟುಕುವ ದರದಲ್ಲಿ ಕೊಡುವುದು ಮಾತ್ರವಲ್ಲದೆ ಇ–ತ್ಯಾಜ್ಯ ಸಮಸ್ಯೆಯನ್ನೂ ಪರಿಣಾಮಕಾರಿಯಾಗಿ ನೀಗಿಸಬಹುದೆಂಬ ಇವರ ಯೋಚನೆ ಗಟ್ಟಿಯಾಯಿತು.

ಸವಾಲುಗಳ ದಾರಿಯಲ್ಲಿ ಕೈತುಂಬ ಸಂಬಳ ತರುವ ಕೆಲಸ ಬಿಡುವುದೆಂದರೆ ಸಾಮಾಜಿಕ ಒತ್ತಡ ಇದ್ದದ್ದೆ. ಅದರೊಂದಿಗೆ ದೊಡ್ಡ ದೊಡ್ಡ ಕಂಪೆನಿಗಳನ್ನು ಸಂಪರ್ಕಿಸಿ ಅವರಿಗೆ ಪ್ರತಿ ಅಂಶವನ್ನು ಮನವರಿಕೆ ಮಾಡಿಕೊಡುವುದು  ಇವರಿಗೆ ಬಹು ದೊಡ್ಡ ಸವಾಲಾಗಿತ್ತು.  ಲಾಭ ತರುವ ಉದ್ದಿಮೆ ಇದಲ್ಲ ಎಂಬುದು ಗೊತ್ತಿದ್ದರೂ ಹಿಂಜರಿಯಲಿಲ್ಲ.

‘ಆರಂಭದ ಒಂದು ವರ್ಷ ಓಡಾಟಗಳಲ್ಲೇ ಕಳೆದುಹೋಗಿತ್ತು. ಮಾಲಿನ್ಯ ಮಂಡಳಿಯಿಂದ ಪರವಾನಗಿ ಪಡೆಯುವುದೂ ಕಷ್ಟಕರವಾಗಿತ್ತು. ವರ್ಷದ ನಂತರ ಅಧಿಕೃತ ಇ-ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಾಗಿ ನೋಂದಾಯಿಸಿದೆವು. ಒಂದು ವರ್ಷದ  ನಂತರ ಎರಡು ಕಾಂಟ್ರಾಕ್ಟ್ ಕೈ ಸೇರಿದವು. ಮೊದಲ ಬಾರಿ ಐವತ್ತು ಕಂಪ್ಯೂಟರ್‌ಗಳನ್ನು ನವೀಕರಿಸಿ ನೀಡಿದೆವು. ನಂತರ ನಂಬಿಕೆ ಬೆಳೆಯಿತು. 2011ರಲ್ಲಿ ಭಾರತೀಯ ಸರ್ಕಾರ ಐಟಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಇ–ತ್ಯಾಜ್ಯ ನಿರ್ವಹಣೆಯ ಆದೇಶ ಹೊರಡಿಸಿದ್ದು ತುಂಬಾ ಸಹಾಯವಾಯಿತು’ ಎಂದು ನೆನೆಸಿಕೊಳ್ಳುತ್ತಾರೆ ಮುಕುಂದ್.

ಭಾರತ ಕಂಪೆನಿಗಳಲ್ಲಿ ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ಕಂಪ್ಯೂಟರ್‌ಗಳನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಸಮಯಗಳಲ್ಲಿ ಕೆಲವು ನಿಯಮಗಳೇ ಇವರಿಗೆ ತೊಡಕಾಗಿದ್ದೂ ಇದೆ.

ಶಿಕ್ಷಣಕ್ಕೆ ಬೇಕು ತಂತ್ರಜ್ಞಾನದ ನೆರವು
ದೇಶ ಮುಂದುವರೆಯಬೇಕಾದರೆ ಅಲ್ಲಿನ ಶಿಕ್ಷಣ ಉನ್ನತ ಮಟ್ಟದ್ದಾಗಿರಬೇಕು. ಅದರಲ್ಲಿ ತಂತ್ರಜ್ಞಾನದ ಪಾತ್ರ ತುಂಬಾ ಹಿರಿದು. ಗ್ರಾಮ ಹಾಗೂ ನಗರ ಶಿಕ್ಷಣದಲ್ಲಿ ಅಂತರ ಇರುವುದು ಇದೇ ವಿಷಯದಲ್ಲಿ. ಈ ಡಿಜಿಟಲ್ ಅಂತರವನ್ನು ಕಡಿಮೆ ಗೊಳಿಸುವ ಉದ್ದೇಶದೊಂದಿಗೆ ‘ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಕಂಪ್ಯೂಟರ್‌’ ಎಂಬ ಯೋಜನೆ ಹಮ್ಮಿಕೊಂಡರು. ಅದರ ಹಿಂದಿನ ಉದ್ದೇಶವನ್ನು ರಾಘವ್ ಬಿಡಿಸಿಟ್ಟಿದ್ದು ಹೀಗೆ...

‘ಭಾರತದಲ್ಲಿ ಇಪ್ಪತ್ತಮೂರು ಲಕ್ಷ ಶಾಲೆಗಳಿವೆ. ಅದರಲ್ಲಿ ಕೇವಲ ಶೇ. 20 ಶಾಲೆಗಳಲ್ಲಿ ಕಂಪ್ಯೂಟರ್‌ಗಳಿವೆ. ಹಳ್ಳಿಗಳಲ್ಲಿ ಕಂಪ್ಯೂಟರ್ ಕೊಳ್ಳುವುದು ಎಷ್ಟೋ ಮಂದಿಗೆ ಕನಸಿನ ವಿಷಯ. ಕಂಪ್ಯೂಟರ್‌ ಎಂದರೆ ಒಂದು ರೀತಿ ಕ್ರೇಝ್ ಇರುತ್ತದೆ. ಅವರಿಗೆ ಕಂಪ್ಯೂಟರ್‌ ಕೊಳ್ಳುವುದು ಕಾರು ಕೊಂಡಷ್ಟೇ ಖುಷಿ ನೀಡುತ್ತದೆ. ಎಷ್ಟೋ ಶಿಕ್ಷಕರಿಗೂ ತಂತ್ರಜ್ಞಾನದ ಬಗ್ಗೆ ತಿಳಿದೇ ಇರುವುದಿಲ್ಲ. ಅವರ ಇಂಥ ಕನಸುಗಳನ್ನು ಸಾಕಾರಗೊಳಿಸುವುದರಲ್ಲಿ ಸಾರ್ಥಕತೆಯಿದೆ. ದಾನವಾಗಿ ಕೊಟ್ಟರೆ ಜನ ಅದನ್ನು ಅನುಮಾನಿಸುತ್ತಾರೆ. ಜೊತೆಗೆ ಅದರೆಡೆಗೆ ಅಸಡ್ಡೆಯೂ ಬೆಳೆಯುತ್ತದೆ. ಆದ್ದರಿಂದ ವ್ಯಾಪಾರವೂ ಆಗಿರಬೇಕು, ಸಮಾಜಕ್ಕೆ ನೆರವೂ ಆಗಬೇಕೆಂಬ ಉದ್ದೇಶದೊಂದಿಗೆ ರಿನ್ಯೂ ಕೆಲಸ ಮಾಡುತ್ತಿದೆ’.

ನೂರಕ್ಕೂ ಹೆಚ್ಚು ಶಾಲೆಗಳಿಗೆ ಕಂಪ್ಯೂಟರ್‌
ಸರ್ಕಾರೇತರ ಸಂಸ್ಥೆಗಳ ಮೂಲಕ ಶಾಲೆಗಳನ್ನು ಸಂಪರ್ಕಿಸುವ ರಿನ್ಯೂ ಸಂಸ್ಥೆ, ಗ್ರಾಫಿಕ್ ಡಿಸೈನರ್‌ಗಳಿಗೆ, ಸಣ್ಣ ಸಣ್ಣ ಸಂಘ ಸಂಸ್ಥೆಗಳಿಗೆ ಈ ರೀತಿ ಕಡಿಮೆ ಬೆಲೆಗೆ ಕಂಪ್ಯೂಟರ್‌ಗಳನ್ನು ನೀಡುತ್ತದೆ. ಮೊದಲು ಅವರ ಅವಶ್ಯಕತೆಗಳನ್ನು ಅರ್ಥೈಸಿಕೊಂಡು ಯಾವ ರೀತಿಯ ಕಂಪ್ಯೂಟರ್‌ ಬೇಕು ಎಂದು ನಿರ್ಧರಿಸಲಾಗುತ್ತದೆ. ನಂತರ ಅವರ ಕೆಲಸಗಳಿಗೆ ತಕ್ಕುದಾದ ಕಂಪ್ಯೂಟರ್‌, ಅದಕ್ಕೆ ಅಗತ್ಯ ಸಾಫ್ಟ್‌ವೇರ್‌ಗಳ ಅಳವಡಿಕೆಯ ಸಲಹೆಯನ್ನೂ ನೀಡುತ್ತಾರೆ.

ಮೈಕ್ರೋಸಾಫ್ಟ್ ವಿಂಡೋಸ್ 7 ಲೈಸೆನ್ಸ್‌ನೊಂದಿಗೆ ಶಾಲೆಗಳಿಗೆ ಕೊಡಲಾಗುತ್ತದೆ. 1/10ರ ಮಾರುಕಟ್ಟೆ ಬೆಲೆಯಲ್ಲಿ, ಅಂದರೆ 4,500 ಸಾವಿರ ಬೆಲೆಗೆ ಒಂದು ಕಂಪ್ಯೂಟರ್‌ ಲಭ್ಯ. ಒಂದು ವರ್ಷದ ವಾರಂಟಿಯನ್ನೂ ನೀಡುತ್ತಾರೆ. ಡೆಲ್, ಎಚ್‌ಪಿ, ಐಬಿಎಂ, ಲೆನೊವೊಗಳಂಥ ಸಂಸ್ಥೆಗಳಿಂದ ತೆಗೆದುಕೊಂಡ ಕಂಪ್ಯೂಟರ್‌ಗಳನ್ನು ಖರೀದಿಸಿ, ಮಾಹಿತಿಗಳನ್ನು ಸಂಪೂರ್ಣ ಅಳಿಸಲಾಗುತ್ತದೆ.

(ಡಿಪಾರ್ಟ್‌ಮೆಂಟ್‌ ಆಫ್ ಡಿಫೆನ್ಸ್ ಕಂಪ್ಲೇಂಟ್‌ ಡೇಟಾ ಡಿಸ್ಟ್ರಕ್ಷನ್) ಸಂಪೂರ್ಣ ಪರಿವರ್ತನೆ ಮಾಡಲು  ಎರಡರಿಂದ ಮೂರ ವಾರಗಳು ಹಿಡಿಯಬಹುದು. ಐಎಸ್‌ಒ 9001, ಐಎಸ್‌ಒ 14001 ಮತ್ತು ಒಎಚ್‌ಎಸ್‌ಎಎಸ್ 18001ನಿಂದ ಪರವಾನಗಿ ಪಡೆದಿದ್ದು, ಸರಿಯಾಗಿ ಪರೀಕ್ಷಿಸಿ, ಹಾಳಾಗಿರುವ ಬಿಡಿಭಾಗಗಳನ್ನು ಬದಲಾಯಿಸಿ ಇನ್ನೂ ಹಲವು ಹಂತಗಳಲ್ಲಿ ಗುಣಮಟ್ಟದ ಪರೀಕ್ಷೆಗಳಿಗೆ  ಒಳಪಡಿಸಲಾಗುತ್ತದೆ.

ಸಂಸ್ಥೆ ಇದುವರೆಗೂ ನೂರಕ್ಕೂ ಹೆಚ್ಚು ಶಾಲೆಗಳಿಗೆ ಕಂಪ್ಯೂಟರ್‌ ವಿತರಿಸಿದೆ. ಆರು ತಿಂಗಳ ಹಿಂದೆ ಅರುಣಾಚಲಂ, ಕಾಶ್ಮೀರದಿಂದಲೂ ಕಂಪ್ಯೂಟರ್‌ಗಳನ್ನು ಖರೀದಿಸಿದ್ದರು. ಮೈಸೂರು, ತುಮಕೂರು, ಮಂಗಳೂರು, ಬಾಗಲಕೋಟೆ, ಬೆಳಗಾವಿಗಳ ಶಾಲಾ ಕಾಲೇಜುಗಳಿಗೂ ಕೊಟ್ಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿನ ಐದು ಶಾಲೆಗಳಿಗೂ ಕಂಪ್ಯೂಟರ್‌ ವಿತರಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರದ ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿದ್ದು, ಅಲ್ಲಿನ ಎಂಟು ಜಿಲ್ಲೆಗಳ ಶಾಲೆಗಳಿಗೆ ಕಂಪ್ಯೂಟರ್ ಬೇಡಿಕೆ ಇವರ ಕೈಯಲ್ಲಿದೆ. ಹೈದರಾಬಾದ್, ಮುಂಬೈನಲ್ಲೂ ಇವರ ಕಚೇರಿಗಳಿವೆ.

ಕೊಡುವುದರಲ್ಲಿ ತುಂಬಾ ಖುಷಿ ಇದೆ ಎನ್ನುವ ರಾಘವ್, ‘ಒಮ್ಮೆ ಅಂಬಾ ಎನ್ನುವ ಸರ್ಕಾರೇತರ ಸಂಸ್ಥೆಗೆ ಕಂಪ್ಯೂಟರ್‌ಗಳನ್ನು ಕೊಟ್ಟಿದ್ದೆವು. ಬುದ್ಧಿಮಾಂದ್ಯರಿಗೆ ಚಿಕ್ಕ ಪುಟ್ಟ ಕೆಲಸ ಕೊಡುವ ಸರ್ಕಾರೇತರ ಸಂಸ್ಥೆ ಅದು. ಅಲ್ಲಿ ಅವರನ್ನು ಸ್ವಾವಲಂಬಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಅರ್ಜಿಗಳನ್ನು ತುಂಬುವ, ಇ –ಮೇಲ್ ಕಳುಹಿಸುವ ಸಣ್ಣ ಪುಟ್ಟ ಕೆಲಸಗಳಿಗೆ ಈ ಕಂಪ್ಯೂಟರ್‌ಗಳು ಸಾಕು. ಇದರಿಂದ ಅವರು ತುಂಬಾ ಸಂತೋಷವಾಗಿದ್ದಾರೆ. ಅವರ ಖುಷಿಯನ್ನು ಲೆಕ್ಕ ಹಾಕಲು ಸಾಧ್ಯವೇ’ ಎಂದು ಭಾವುಕರಾದರು ರಾಘವ್.

ಆದರೆ ಕರ್ನಾಟಕದಲ್ಲಿ ಈ ಸ್ಥಿತಿ ಸ್ವಲ್ಪ ಭಿನ್ನವಂತೆ. ಇಲ್ಲಿನ ಎಷ್ಟೋ ಗ್ರಾಮೀಣ ಶಾಲೆಗಳಲ್ಲಿ ಗ್ರಂಥಾಲಯ, ಶೌಚಾಲಯ, ವಿದ್ಯುತ್‌ನಂಥ ಮೂಲ ಸೌಕರ್ಯವೇ ಇಲ್ಲ. ವಿದ್ಯುತ್ ಇಲ್ಲದೆ ಕಂಪ್ಯೂಟರ್‌ ತೆಗೆದುಕೊಂಡು ಏನು ಮಾಡುವುದು? ಎಂದು ಪ್ರಶ್ನಿಸುವವರೇ ಹೆಚ್ಚು ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಆದರೆ ಕಾರ್ಪೊರೇಟ್‌ ಸಂಸ್ಥೆಗಳು ಶೇ. 2ರಷ್ಟು ಲಾಭವನ್ನು ಸಾಮಾಜಿಕ ಸೇವೆಗೆ ಮೀಸಲಿಡಬೇಕಲ್ಲ, ಅದನ್ನು ಈಗ ಹೆಚ್ಚಾಗಿ ಗ್ರಾಮದ ಶೈಕ್ಷಣಿಕ ಕ್ಷೇತ್ರದಲ್ಲಿ ಉಪಯೋಗಿಸುತ್ತಿದ್ದು, ಅಂಥವರಿಂದ ಗ್ರಾಮಗಳಲ್ಲಿ ಒಂದಿಷ್ಟು ಬದಲಾವಣೆ ಸಾಧ್ಯವಾಗಿದೆ. ರಿನ್ಯೂ, ಕಾರ್ಪೊರೇಟ್‌ ಕಂಪೆನಿಗಳಿಗೆ ಅವರ ಕಂಪ್ಯೂಟರ್‌ಗಳನ್ನೇ ಮಕ್ಕಳಿಗೆ ನೀಡಿ, ಸೇವಾ ಶುಲ್ಕವನ್ನು ಮಾತ್ರ ವಿಧಿಸಿದ ಉದಾಹರಣೆಗಳೂ ಇವೆ.

ಶ್ರಮಕ್ಕೆ ಸಿಕ್ಕ ಮನ್ನಣೆ
ಇವರ ಈ ಕೆಲಸಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ 2014ರಲ್ಲಿ ‘ಇನೊವೇಷನ್ ಎಕ್ಸೆಲೆಂಟ್ ಅವಾರ್ಡ್‌’, ಸಿಎನ್‌ಬಿಸಿ ಮಾಸ್ಟರ್‌ಪ್ರೆನ್ಯೂರ್ ಪ್ರಶಸ್ತಿ, 2014ರಲ್ಲಿ ನ್ಯಾಷನಲ್ ಫೌಂಡೇಷನ್ ಫಾರ್ ಎಂಟರ್‌ಪ್ರೆನ್ಯೂರ್‌ಶಿಪ್ ಡೆವಲಪ್‌ಮೆಂಟ್‌ನ ‘ಯಂಗ್ ಎಂಟರ್‌ಪ್ರೆನ್ಯೂರ್’ ಪ್ರಶಸ್ತಿಗಳನ್ನು  ನೀಡಿವೆ.

ಇದುವರೆಗೂ ಸುಮಾರು ಇಪ್ಪತ್ತು ಸಾವಿರ ಕಂಪ್ಯೂಟರ್‌ಗಳನ್ನು ಕಡಿಮೆ ಬೆಲೆಗೆ ಕೊಟ್ಟಿದ್ದಾರೆ. ಭಾರತದಲ್ಲಿ ಎಂಟು  ಕಡೆ ಸೇವಾ ಕೇಂದ್ರಗಳನ್ನು ಹೊಂದಿದ್ದು, ಬೆಂಗಳೂರಿನ ಬೊಮ್ಮಸಂದ್ರದಲ್ಲಿ ರಿನ್ಯೂ ಸಂಸ್ಥೆಯಲ್ಲಿ ಏಳು ತಂತ್ರಜ್ಞರು ಕಂಪ್ಯೂಟರ್‌ಗಳ ನವೀಕರಣ ಕೆಲಸ ಮಾಡುತ್ತಾರೆ.

ಕಂಪ್ಯೂಟರ್‌ ನೀಡುವುದಷ್ಟೇ ಅಲ್ಲದೆ ಶಿಕ್ಷಣಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳ ಬಗ್ಗೆಯೂ ಮಾಹಿತಿಗಳನ್ನು ನೀಡುತ್ತಿದ್ದಾರೆ. ಕಂಪ್ಯೂಟರ್‌ಗಳಿಗೆ ಮಾರಾಟ ನಂತರದ ಸೇವೆಯನ್ನೂ ನೀಡುತ್ತಾರೆ. ಆನ್‌ಲೈನ್‌ನಲ್ಲೂ ಲಭ್ಯವಿದೆ. ಜೊತೆಗೆ ಕೊರಿಯರ್ ಸರ್ವೀಸ್ ಇದೆ. ಕಂಪ್ಯೂಟರ್ ಆನ್ ಸ್ಟಿಕ್, ಕಂಪ್ಯೂಟರ್‌ನ ಬಿಡಿ ಭಾಗಗಳು, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ಗಳು ಕೂಡ ಲಭ್ಯ.

ಮುಂದಿನ ನಾಲ್ಕೈದು ವರ್ಷಗಳಲ್ಲಿ ಒಂದು ಲಕ್ಷ ಕಂಪ್ಯೂಟರ್‌ಗಳನ್ನು ಕೊಡುವ ಗುರಿ ರಿನ್ಯೂ ಸಂಸ್ಥೆಯದ್ದು.  ‘ನಾವು ಒಂದು ಹೆಜ್ಜೆ ಮುಂದೆ ಇಟ್ಟರೆ  ನೂರು ಹೆಜ್ಜೆಗಳು ನಮ್ಮೊಂದಿಗೆ ಬರುತ್ತವೆ. ಇದು ನಮ್ಮ ದೇಶದ ಶಿಕ್ಷಣ ಮಟ್ಟವನ್ನು ಸುಧಾರಿಸುತ್ತದೆಂಬುದು ನಮ್ಮ ನಂಬಿಕೆ’ ಎನ್ನುತ್ತಾರೆ ಇವರು. ಸಂಪರ್ಕಕ್ಕೆ: 7676760015.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT