ಸೋಮವಾರ, ಮೇ 23, 2022
30 °C

ಶಿಕ್ಷಣ ಇಲಾಖೆ ಹೊಸ ಯತ್ನ ಸ್ಫೂರ್ತಿ ಸೌರಭ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕೊಂಚ ಮಾತ್ರ ಹಿನ್ನಡೆ ಕಂಡಿರುವ ಜಿಲ್ಲೆ ಮತ್ತೆ ಜಿಲ್ಲಾವಾರು ಪಟ್ಟಿಯಲ್ಲಿ ಇನ್ನಷ್ಟು ಮೇಲಕ್ಕೇರಲು ಶೈಕ್ಷಣಿಕ ವರ್ಷದ ಆರಂಭದಲ್ಲೆ ಪ್ರಯತ್ನ ಆರಂಭಿಸಿದೆ.ಫಲಿತಾಂಶದ ಸಮಗ್ರ ವಿಶ್ಲೇಷಣೆ, 2012-13ನೇ ಸಾಲಿಗೆ ಕ್ರಿಯಾ ಯೋಜನೆ ಮತ್ತು ಗುಣಾತ್ಮಕ ಫಲಿತಾಂಶದ ಮಾರ್ಗಸೂಚಿಗಳನ್ನು ಉಳ್ಳ `ಸ್ಫೂರ್ತಿ ಸೌರಭ~ ಕೈಪಿಡಿಯನ್ನು ಪರೀಕ್ಷೆಯ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ಸಿದ್ಧಪಡಿಸಿದ್ದು, ಮುದ್ರಣಕ್ಕೆ ನೀಡಲಾಗಿದೆ. ಜೂನ್ ಕೊನೆಯ ವಾರದಿಂದಲೇ ಈ ಕೈಪಿಡಿ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ವಿತರಣೆಯಾಗಲಿದೆ.ಫಲಿತಾಂಶ ಹೆಚ್ಚಿಸುವ ಪ್ರಯತ್ನವಾಗಿ ಜಿಲ್ಲಾ ಪಂಚಾಯಿತಿ ಮತ್ತು ಇಲಾಖೆ ಜಂಟಿಯಾಗಿ ಮುಖ್ಯಶಿಕ್ಷಕರಿಗಾಗಿ ಗುಣಾತ್ಮಕ ಫಲಿತಾಂಶದ ಮಾರ್ಗಸೂಚಿ `ಸ್ಫೂರ್ತಿ~ ಕೈಪಿಡಿಯನ್ನು ಮೊದಲ ಬಾರಿಗೆ 2010ರ ಜುಲೈನಲ್ಲಿ ಪ್ರಕಟಿಸಿತ್ತು. ನಂತರದ ವರ್ಷ `ನವ್ಯಸ್ಫೂರ್ತಿ~ ಕೈಪಿಡಿ ಪ್ರಕಟಿಸಲಾಗಿತ್ತು. ಇದೀಗ ಮೂರನೇ ಯತ್ನವಾಗಿ `ಸ್ಫೂರ್ತಿ ಸೌರಭ~ ಪ್ರಕಟವಾಗುತ್ತಿದೆ.ಏನೇನಿದೆ?: ಶಾಲಾ ದತ್ತು ಯೋಜನೆ, ವಿದ್ಯಾರ್ಥಿ ದತ್ತು ಯೋಜನೆ, ಶಾಲೆಗಳಲ್ಲಿ ಕಡ್ಡಾಯವಾಗಿ ವರ್ಷದುದ್ದಕ್ಕೂ ಅನುಸರಿಸಬೇಕಾದ ಪರೀಕ್ಷಾ ಕಾರ್ಯಸೂಚಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಗಳು, ಮುಖ್ಯಶಿಕ್ಷಕರು, ಶಿಕ್ಷಕರು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ಮಾಹಿತಿ, ಪ್ರತಿ ತಿಂಗಳ ಕಾರ್ಯಸೂಚಿ, 2013ರ ಏಪ್ರಿಲ್‌ವರೆಗಿನ ಮುನ್ನೋಟವನ್ನು ಕೈಪಿಡಿಯಲ್ಲಿ ವಿವರಿಸಲಾಗಿದೆ.2012-13ನೇ ಸಾಲಿನಲ್ಲಿ ಫಲಿತಾಂಶವನ್ನು ಉತ್ತಮಪಡಿಸಲು ಸಿದ್ಧಪಡಿಸಿರುವ ಕ್ರಿಯಾಯೋಜನೆ, ಅಳವಡಿಸಿರುವ ಪ್ರಮುಖ ಕಾರ್ಯಕ್ರಮಗಳು, ಪ್ರೌಢಶಾಲಾ ವಿದ್ಯಾರ್ಥಿಗಳ ಮಾದರಿ ದಿನಚರಿಯೂ ಸೇರಿದಂತೆ ದತ್ತು ಯೋಜನೆ, ಶಿಕ್ಷಕರು ನಿರ್ವಹಿಸಬೇಕಾದ ವಿದ್ಯಾರ್ಥಿ ವೈಯಕ್ತಿಕ ಕಡತ ನಿರ್ವಹಣೆ ಕುರಿತೂ ಕೈಪಿಡಿಯಲ್ಲಿ ವಿವರಿಸಲಾಗಿದೆ.ನೋಡಲ್ ಅಧಿಕಾರಿ: 2012-13ನೇ ಸಾಲಿನಲ್ಲಿ ಎಲ್ಲ ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರತಿ ಶೈಕ್ಷಣಿಕ ಬ್ಲಾಕ್‌ಗೆ ನೋಡಲ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಬಂಗಾರಪೇಟೆ- ವಿಷಯ ಪರಿವೀಕ್ಷಕ ಶ್ರೀನಿವಾಸಗೌಡ, ಕೆಜಿಎಫ್- ಶಿಕ್ಷಣಾಧಿಕಾರಿ ಎಚ್.ವಿ.ಸುಬ್ರಹ್ಮಣ್ಯ, ಕೋಲಾರ-ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್, ಮಾಲೂರು-ವಿಷಯ ಪರಿವೀಕ್ಷಕ ಸಿ.ಆರ್.ಅಶೋಕ್, ಮುಳಬಾಗಲು-ವಿಷಯ ಪರಿವೀಕ್ಷಕ ಬಾಬು ಜನಾರ್ದನ ನಾಯ್ಡು, ಶ್ರೀನಿವಾಸಪುರ- ವಿಷಯ ಪರಿವೀಕ್ಷಕ ಎಚ್.ವೆಂಕಟಸ್ವಾಮಿ.ದತ್ತು ಯೋಜನೆ: ಕಳೆದ ಎರಡು ವರ್ಷದಲ್ಲಿ ಕಳಪೆ ಫಲಿತಾಂಶ ಪಡೆದ ಶಾಲೆಗಳನ್ನಷ್ಟೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು. ಆದರೆ ಈ ಬಾರಿ ಶೇ 80ರಷ್ಟು ಫಲಿತಾಂಶ ಪಡೆದಿರುವ 75 ಶಾಲೆಗಳನ್ನು ದತ್ತು ನೀಡಲಾಗಿದೆ. ಶೇ 80-100ರ ನಡುವೆಯೇ ಈ ಫಲಿತಾಂಶವಿದೆ. ಅದನ್ನು ಶೇ 100ಕ್ಕೆ ಹೆಚ್ಚಿಸುವ ವಿಶೇಷ ಪ್ರಯತ್ನವಿದು ಎನ್ನುತ್ತಾರೆ ನಾಗೇಂದ್ರಪ್ರಸಾದ್.ಸೇತುಬಂಧ: 8, 9, 10ನೇ ತರಗತಿ ವಿದ್ಯಾರ್ಥಿಗಳ ಹಿಂದಿನ ತರಗತಿಯ ಶೈಕ್ಷಣಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ಪೂರ್ವಪರೀಕ್ಷೆ ನಡೆಸಿದ ಬಳಿಕ ಸೇತುಬಂಧವನ್ನು ತಪ್ಪದೆ ನಡೆಸಬೇಕು ಎಂದು ಈ ಬಾರಿ ಎಲ್ಲ ಶಿಕ್ಷಕರಿಗೂ ಸೂಚಿಸಲಾಗಿದೆ ಎಂದು ತಿಳಿಸಿದರು.2010-11ನೇ ಸಾಲಿನಲ್ಲಿ ಬಾರಿ 8ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21ನೇ ಸ್ಥಾನ ಪಡೆದರೂ ಫಲಿತಾಂಶದಲ್ಲಿ ಹೆಚ್ಚು ಏರುಪೇರಾಗಿಲ್ಲ ಎಂಬುದು ಗಮನಾರ್ಹ. ಕಳೆದ ಬಾರಿ ಶೇ 81.46ರಷ್ಟು ಫಲಿತಾಂಶ ದೊರೆತಿತ್ತು. ಈ ಬಾರಿ 79.83ರಷ್ಟು ಫಲಿತಾಂಶ ದೊರೆತಿದೆ. ಶೇ 1.6ರಷ್ಟು ಮಾತ್ರ ಕಡಿಮೆಯಾಗಿದೆ. ಇನ್ನಷ್ಟು ಉತ್ತಮ ಫಲಿತಾಂಶ ಪಡೆಯುವ ಪ್ರಯತ್ನ ಇದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.