ಮಂಗಳವಾರ, ಏಪ್ರಿಲ್ 13, 2021
30 °C

ಶಿಕ್ಷಣ ಪದ್ಧತಿಯಲ್ಲಿ ಸಂಸ್ಕಾರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆಲ್ಲಾ ಲಂಚಕೋರತನ, ಭ್ರಷ್ಟಾಚಾರ, ಲೈಂಗಿಕ ಅಪರಾಧ ಹಾಗೂ ಸ್ತ್ರೀಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪವನ್ನು ಎತ್ತಿ ತೋರುತ್ತದೆ~ ಎಂದು ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ `ಸ್ನಾತಕಪೂರ್ವ ದೀಕ್ಷಾಂತ ಸಮಾರೋಪ~ ಸಮಾರಂಭದಲ್ಲಿ 2011-12ನೇ ಸಾಲಿನ ಪ್ರಥಮಾ, ಕಾವ್ಯ ಹಾಗೂ ಸಾಹಿತ್ಯ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ ನಂತರ ಅವರು ಭಾಷಣ ಮಾಡಿದರು.`ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಸಂಸ್ಕಾರವಿಲ್ಲದ ಶಿಕ್ಷಣ ಅಪಾಯಕಾರಿ. ಎಲ್ಲ ಸಮಸ್ಯೆಗಳಿಗೂ ಇದೇ ಮೂಲ ಕಾರಣ. ಪರಿಣಾಮ, ವಿದ್ಯಾವಂತರೇ ಇಂದು ಲಂಚಕೋರರು ಹಾಗೂ ಭ್ರಷ್ಟಾಚಾರಿಗಳಾಗಿದ್ದಾರೆ~ ಎಂದು ಅವರು ವಿಷಾದಿಸಿದರು.`ವಿದ್ಯೆಯ ಮೂಲಕ ಚಾರಿತ್ರ್ಯವಂತ ವ್ಯಕ್ತಿಗಳೇಕೆ ನಿರ್ಮಾಣವಾಗುತ್ತಿಲ್ಲ. ಏಕೆ ವಿದ್ಯಾವಂತರೇ ಲಂಚಕೋರರು ಹಾಗೂ ಭ್ರಷ್ಟಾಚಾರಿಗಳಾಗುತ್ತಿದ್ದಾರೆ ಎಂಬ ಬಗ್ಗೆ ಚಿಂತನೆ ನಡೆದೇ ಇಲ್ಲ. ಇದರಿಂದ ಪರಿಹಾರ ದೂರ ಉಳಿಯಿತು.ಸ್ವಾತಂತ್ರ್ಯಾನಂತರ 13ನೇ ಪಂಚ ವಾರ್ಷಿಕ ಯೋಜನೆಯನ್ನು ನಾವು ಜಾರಿಗೊಳಿಸುತ್ತಿದ್ದರೂ ಆ ಯೋಜನೆಗಳನ್ನು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾರ್ಯಗತ ಮಾಡಬೇಕಾದ ವ್ಯಕ್ತಿಗಳ ನಿರ್ಮಾಣದ ಯೋಚನೆ ಮಾಡಲೇ ಇಲ್ಲ. ವ್ಯಕ್ತಿ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ಮೂಲಭೂತ ವಿಷಯವನ್ನು ಕಡೆಗಣಿಸಿರುವುದು ಇಂದಿನ ದಾರುಣ ಸ್ಥಿತಿಗೆ ಕಾರಣ~ ಎಂದು ಅವರು ವಿಶ್ಲೇಷಿಸಿದರು. `ಪ್ರಾಥಮಿಕ ಶಾಲಾ ಹಂತದ ಚಿಕ್ಕ ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಬೀಜ ಬಿತ್ತಲು ಇದು ಸಕಾಲ. ಆನಂತರ ಶ್ರದ್ಧಾವಂತ ಹಾಗೂ ದಕ್ಷ ಶಿಕ್ಷಕರು ವಿವಿಧ ಹಂತಗಳಲ್ಲಿ ಇದನ್ನು ಪೋಷಿಸುತ್ತಾ ಮೌಲ್ಯಗಳನ್ನು ಮಕ್ಕಳಲ್ಲಿ ರಕ್ತಗತವನ್ನಾಗಿ ಮಾಡಿದರೆ ಶಿಕ್ಷಣದ ಮೂಲಕ ವ್ಯಕ್ತಿ ನಿರ್ಮಾಣ ಮಾಡುವಂತಹ ಮಹಾತ್ಕಾರ್ಯದಲ್ಲಿ ಅರ್ಧ ಯಶಸ್ಸು ಪಡೆದಂತೆ~ ಎಂದು ಹೇಳಿದರು.ಪಠ್ಯಕ್ರಮದಲ್ಲಿ ಧರ್ಮ ಸೇರಿಸಲಿ: `ಪ್ರಾಥಮಿಕ ಶಾಲಾ ಹಂತದಿಂದ ಅತ್ಯುನ್ನತ ಮಟ್ಟದ ಶಿಕ್ಷಣದವರೆಗೆ `ಧರ್ಮ~ವನ್ನು ಪಠ್ಯಕ್ರಮವನ್ನಾಗಿ ಸೇರಿಸಬೇಕು. ಏಕೆಂದರೆ, ಕಾನೂನು ಅಪರಾಧ ಮಾಡಿದ ನಂತರ ಅಪರಾಧಿಯನ್ನು ಶಿಕ್ಷಿಸಿದರೆ, ಧರ್ಮ ಅಪರಾಧ ಮಾಡುವುದನ್ನೇ ತಪ್ಪಿಸುತ್ತದೆ. ಇದು ಕಾನೂನಿಗೂ- ಧರ್ಮಕ್ಕೂ ಇರುವ ವ್ಯತ್ಯಾಸ. ರಾಜ್ಯಸಭೆಯಲ್ಲಿ ಸಂವಿಧಾನ ತಿದ್ದುಪಡಿ ಖಾಸಗಿ ಮಸೂದೆ ಮಂಡಿಸಿದಾಗಲೂ ನಾನು ಈ ವಾದವನ್ನೇ ಮುಂದಿಟ್ಟಿದ್ದೇನೆ~ ಎಂದು ಅವರು ಹೇಳಿದರು.`ಕೇವಲ ಕಾನೂನಿನಿಂದ ಅಪರಾಧಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಅದೇ `ಧರ್ಮ~ ಆಧಾರಿತ ಶಿಕ್ಷಣದಿಂದ ಮಾತ್ರ ಪರಿಸ್ಥಿತಿ ಬದಲಾಯಿಸಲು ಸಾಧ್ಯ. ಇಂತಹ ಶಿಕ್ಷಣಕ್ಕೆ ಸಂಸ್ಕೃತ ಭಾಷೆಯಲ್ಲಿ ಅಪಾರ ಸಾಹಿತ್ಯವಿದೆ. ಅವು ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ದೊರೆಯುವಂತಾಗಬೇಕು. ಅಂತಹ ಶಿಕ್ಷಣವನ್ನು ಈಗಿನಿಂದಲೇ ಪ್ರಾರಂಭಿಸಿದರೆ ಒಂದು ತಲೆಮಾರಿನ ನಂತರವಾದರೂ ಫಲ ಪಡೆಯಬಹುದು~ ಎಂದರು.ಇದಕ್ಕೂ ಮುನ್ನ 2011-12ನೇ ಸಾಲಿನ ಪ್ರಥಮಾ, ಕಾವ್ಯ, ಸಾಹಿತ್ಯ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ `ಪುರಸ್ಕಾರ~ ನೀಡಿ ಗೌರವಿಸಲಾಯಿತು. ಅಲ್ಲದೆ, ನಿವೃತ್ತ ಸಂಸ್ಕೃತ ಪಾಠ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.ಸಂಸ್ಕೃತ ವಿ.ವಿ. ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಕುಲಸಚಿವ ಪ್ರೊ. ವೈ.ಎಸ್. ಸಿದ್ದೇಗೌಡ, ನಿರ್ದೇಶಕ ಶ್ರೀನಿವಾಸ ವರಖೇಡಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.