ಶನಿವಾರ, ಮೇ 15, 2021
22 °C

ಶಿಕ್ಷಣ ವಂಚಿತ ಮಕ್ಕಳು: ಸುಳ್ಳು ಅಂದಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಂಖ್ಯೆ 2012-13ರಲ್ಲಿ ಕೇವಲ 51,994 ಎಂದು ಶಿಕ್ಷಣ ಇಲಾಖೆ ಅಂದಾಜಿಸಿರುವುದನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಸ್ವಯಂಸೇವಾ ಸಂಸ್ಥೆ `ಸಿವಿಕ್'ನ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್, ಅಂದಾಜು 6.28 ಲಕ್ಷ ಮಕ್ಕಳು ರಾಜ್ಯದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.ರಾಜ್ಯದಲ್ಲಿ 6ರಿಂದ 14 ವರ್ಷ ವಯಸ್ಸಿನೊಳಗಿನ ಅಂದಾಜು 54 ಸಾವಿರ ಮಕ್ಕಳು ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ, ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲು ಮಾಡಿಕೊಂಡಿದೆ. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.ಪ್ರಕರಣದಲ್ಲಿ ಕಾತ್ಯಾಯಿನಿ ಅವರೂ ವಾದಿಯಾಗಿದ್ದಾರೆ. ಅವರು ವಿಭಾಗೀಯ ಪೀಠಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ, ರಾಜ್ಯದಲ್ಲಿ ಶಾಲೆಗಳಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಎಷ್ಟು ಎಂಬುದನ್ನು ಅಂದಾಜಿಸಿದ್ದಾರೆ. ಇದನ್ನು ಪರಿಶೀಲಿಸಿರುವ ಪೀಠ, `ಇವರು ಸಲ್ಲಿಸಿರುವ ದಾಖಲೆ ಗಮನಿಸಿದರೆ, ಸಮಸ್ಯೆ ನಾವು ಅಂದುಕೊಂಡಿದ್ದಕ್ಕಿಂತ ಗಂಭೀರವಾಗಿರಬಹುದು ಎನಿಸುತ್ತಿದೆ. ಈ ಕುರಿತು ವಿವರ ನೀಡಿ' ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಲೆಕ್ಕಾಚಾರ ಹೇಗೆ?: 2005-06ರಿಂದ 2011-12ರ ನಡುವಿನ ಅವಧಿಯಲ್ಲಿ ಒಂದನೆಯ ತರಗತಿಗೆ ದಾಖಲಾದ ಮಕ್ಕಳ ಒಟ್ಟು ಸಂಖ್ಯೆ 78,76,110. ಇವರೆಲ್ಲ ಈಗ (ಅಂದರೆ, 2012- 13ನೇ ಶೈಕ್ಷಣಿಕ ವರ್ಷದಲ್ಲಿ) 2ರಿಂದ 8ನೇ ತರಗತಿಗಳಲ್ಲಿ ಇರಬೇಕಿತ್ತು. ಆದರೆ 2012-13ನೇ ಸಾಲಿನಲ್ಲಿ 2ರಿಂದ 8ನೇ ತರಗತಿಯಲ್ಲಿರುವ ಮಕ್ಕಳ ಒಟ್ಟು ಸಂಖ್ಯೆ 72,48,063 ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ.ಇದರರ್ಥ ಪ್ರಸ್ತುತ ಒಟ್ಟು 6,28,047 ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದು ಕಾತ್ಯಾಯಿನಿ ಅವರ ವಾದ (ಪಟ್ಟಿ ನೋಡಿ).

ಆದರೆ ಶಿಕ್ಷಣ ಇಲಾಖೆಯ ಹೇಳಿಕೆ ಪ್ರಕಾರ ರಾಜ್ಯದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಂಖ್ಯೆ ಈ 51,994 ಮಾತ್ರ. ಇದಕ್ಕೆ ಇಲಾಖೆ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಪೀಠಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ಕೋರಿದ್ದಾರೆ.ವ್ಯಾಖ್ಯಾನದ ಪ್ರಶ್ನೆ: ಈಗಿನ ಕಾನೂನು ಪ್ರಕಾರ, ನಿರಂತರವಾಗಿ 60 ದಿನಗಳ ಕಾಲ ಶಾಲೆಗೆ ಬಾರದ ವಿದ್ಯಾರ್ಥಿಯನ್ನು `ಶಾಲೆ ತೊರೆದವ' ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಂದರೆ ಒಬ್ಬ ವಿದ್ಯಾರ್ಥಿ ಶಾಲೆಗೆ ಬಾರದಿದ್ದರೆ, 60 ದಿನಗಳವರೆಗೆ ಸರ್ಕಾರದ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಬೇಕಿಲ್ಲ. ಏಕೆಂದರೆ ಕಾನೂನಿನ ಅನ್ವಯ ಅಂಥ ಮಕ್ಕಳು ಶಾಲೆ `ತೊರೆದವರು' ಅಲ್ಲ. ಕಾನೂನಿನ ಈ ಅಂಶವನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂದು ಕೋರಲಾಗಿದೆ.ಶಿಕ್ಷಣ  ಕಡ್ಡಾಯಗೊಳಿಸಿರುವ ಕೆಲವು ದೇಶಗಳಲ್ಲಿ, ಯಾವುದೇ ಕಾರಣ ಇಲ್ಲದೆ ನಿರಂತರವಾಗಿ ಮೂರು ದಿನ ಶಾಲೆಗೆ ಬಾರದ ವಿದ್ಯಾರ್ಥಿಗಳನ್ನು `ಶಾಲೆಯಿಂದ ಹೊರಗುಳಿದಿರುವ' ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದೇ ಮಾದರಿಯನ್ನು ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರಬೇಕು ಎಂದೂ ಅವರು ಅವರು ಮಧ್ಯಂತರ ಅರ್ಜಿಯಲ್ಲಿ ಕೊರಿದ್ದಾರೆ. ಸ್ವಯಂಪ್ರೇರಿತ ಪಿಐಎಲ್‌ನ ವಿಚಾರಣೆ ಪೀಠ, ಜುಲೈ 4ರಂದು ನಡೆಸಲಿದೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.