ಶನಿವಾರ, ಫೆಬ್ರವರಿ 27, 2021
27 °C
ಶಿಕ್ಷಣ ಹಕ್ಕು ಕಾಯ್ದೆ ಪರಾಮರ್ಶೆ:ಶಿಕ್ಷಣ ತಜ್ಞನಿರಂಜನಾರಾಧ್ಯ ಅಭಿಪ್ರಾಯ

ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಕರಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಕರಣಕ್ಕೆ ಆಗ್ರಹ

ಬೆಂಗಳೂರು: ‘ಎಲ್ಲ ವರ್ಗದ ಮಕ್ಕಳಿಗೆ ಏಕರೂಪದ ಶಿಕ್ಷಣ ನೀಡುವುದಕ್ಕಾಗಿ ಈ ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು. ಇದಕ್ಕಾಗಿ ಬೃಹತ್‌ ಸಾಮಾಜಿಕ ಚಳವಳಿ ಹುಟ್ಟುಹಾಕುವ ಅವಶ್ಯಕತೆ ಇದೆ’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.ದಲಿತ ಸಂರಕ್ಷ ಸಮಿತಿಯು ಶನಿವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಶಿಕ್ಷಣ ಹಕ್ಕಿನ ಕಾಯ್ದೆ ಕುರಿತ ಪರಾಮರ್ಶೆ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2010ರಲ್ಲಿ ಜಾರಿಗೆ ಬಂದಿರುವ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಿಂದ ಗುಣಾತ್ಮಕ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಣದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಈ ಕಾಯ್ದೆ ದಯನೀಯವಾಗಿ ಸೋತಿದೆ’ ಎಂದು  ಹೇಳಿದರು.‘ಅಸಮಾನತೆ ಶಿಕ್ಷಣ ಕ್ಷೇತ್ರದಲ್ಲಿ ತಾಂಡವಾಡುತ್ತಿದೆ. ಮೇಲ್ವರ್ಗವದವರು ಎಲ್ಲ ಸೌಕರ್ಯಗಳನ್ನೊಳಗೊಂಡ ಶಿಕ್ಷಣ್ನು ಪಡೆಯುತ್ತಿದ್ದಾರೆ. ಶೇ 80ರಷ್ಟು ಜನರಿಗೆ ಮೂಲ ಸೌಕರ್ಯಗಳನ್ನೊಳಗೊಂಡ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿಲ್ಲ. ನಮ್ಮ ಸಂವಿಧಾನದ ಮೂಲ ಆಶಯಕ್ಕೆ ತದ್ವಿರುದ್ಧವಾದ ಶಿಕ್ಷಣ ವ್ಯವಸ್ಥೆಯನ್ನು ನಾವು ಕಟ್ಟಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.‘ಶಿಕ್ಷಣದಲ್ಲಿ ಖಾಸಗೀಕರಣ ದಿನೇ ದಿನೇ ಹೆಚ್ಚುತ್ತಿದೆ. ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ಅಪವಿತ್ರ ಮೈತ್ರಿ ಇದೆ.   ಇಡೀ ಸರ್ಕಾರವನ್ನು ಖಾಸಗಿ ಶಾಲೆಗಳೇ ನಿಯಂತ್ರಿಸುತ್ತಿವೆ. ಯಾಕೆಂದರೆ, ಅಧಿಕಾರದಲ್ಲಿರುವವರಲ್ಲಿ ಬಹುತೇಕರು ಶಾಲೆಗಳ ಮಾಲೀಕರಾಗಿದ್ದಾರೆ’ ಎಂದರು.‘ಏಕರೂಪದ ಶಿಕ್ಷಣವನ್ನು ಪ್ರತಿಪಾದಿಸಿದ್ದ ಕೊಠಾರಿ ಆಯೋಗದ ಶಿಫಾರಸುಗಳನ್ನು ಪರಾಮರ್ಶೆಗೆ ಒಳಪಡಿಸಲು ಇದು ಸಕಾಲ’ ಎಂದು ಅವರು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆರ್‌ಟಿಇ ಕಾರ್ಯಪಡೆಯ ರಾಜ್ಯ ಸಂಚಾಲಕ ನಾಗಸಿಂಹ ಜಿ. ರಾವ್‌ ಮಾತನಾಡಿ, ‘ಕಡ್ಡಾಯ ಶಿಕ್ಷಣ ಕಾಯ್ದೆ ಎಂದರೆ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳು ಬಡವರ ಮಕ್ಕಳಿಗೆ ಮೀಸಲಿರುತ್ತವೆ ಎಂದಷ್ಟೇ ಎಲ್ಲರಿಗೂ ತಿಳಿದಿದೆ. ಶಿಕ್ಷಣ ಇಲಾಖೆಯೂ ಇದೇ ವಾದಕ್ಕೆ ಜೋತು ಬಿದ್ದಿದೆ.  ಪೋಷಕರಿಗೆ, ಸ್ಥಳೀಯ ಆಡಳಿತಗಳಿಗೆ ಕಾಯ್ದೆಯ ಕುರಿತಾಗಿ ಪೂರ್ಣ ಮಾಹಿತಿ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ’ ಎಂದರು.‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕಾಯ್ದೆಯಿಂದ ವಿನಾಯಿತಿ ಇದೆ ಎಂಬ ಕಾರಣಕ್ಕೆ ಈ ವರ್ಗಕ್ಕೆ ಸೇರದ ಶಾಲೆಗಳು ಕೂಡ ‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ’ ಎಂದು ನಕಲಿ ಪ್ರಮಾಣ ಪತ್ರ ಸಲ್ಲಿಸಿ ಮಕ್ಕಳ ದಾಖಲು ಮಾಡಿಕೊಳ್ಳಲು ನಿರಾಕರಿಸುತ್ತಿವೆ. ಉಚಿತ ಶಿಕ್ಷಣ ಎಂದು ಕಾಯ್ದೆ ಹೇಳಿದರೂ ಖಾಸಗಿ ಶಾಲೆಗಳು ಪೋಷಕರಿಂದ ಸುಲಿಗೆ ಮಾಡುತ್ತಿವೆ’ ಎಂದು  ಆರೋಪಿಸಿದರು.ಎಸ್‌ಎಫ್ಐ ಮುಖಂಡ ಹಾಗೂ ವಕೀಲ ಅನಂತ್‌ ನಾಯ್ಕ್‌ ಅವರು ಮಾತನಾಡಿ, ‘ಅಂಬೇಡ್ಕರ್‌ ಅವರ ಆಶಯದಂತೆ ಎಲ್ಲ ಮಕ್ಕಳಿಗೆ ಸಮಾನ ಶಿಕ್ಷಣ ಸಿಗಬೇಕು. ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಕರಣ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

*

ಶಿಕ್ಷಣ ಎಂಬುದು ಈಗ ಅತ್ಯಂತ ಲಾಭಕರ ಉದ್ಯಮ. ಲಾಭ ಮಾಡುವುದೇ ಖಾಸಗಿ ಶಾಲೆಗಳ ಉದ್ದೇಶ. ಮಾನವೀಯತೆ, ಮಾನವ ಹಕ್ಕುಗಳ ಬಗ್ಗೆ ಅವುಗಳಿಗೆ ಗೌರವ ಇಲ್ಲ.

-ನಿರಂಜನಾರಾಧ್ಯ,

ಶಿಕ್ಷಣ ತಜ್ಞ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.