ಶನಿವಾರ, ಏಪ್ರಿಲ್ 17, 2021
31 °C

ಶಿಗ್ಗಾಂವಿಯಲ್ಲಿ ಅನಾವರಣಗೊಂಡ ಜಾನಪದ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾಂವ: ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ನಾಡಿನ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಹೊಸ ಜಾನಪದ ಲೋಕವನ್ನು ಅನಾವರಣಗೊಳಿಸಿತು. ಕರ್ನಾಟಕ ಜಾನಪದ ಅಕಾಡೆಮಿ, ಹುಬ್ಬಳ್ಳಿ ಗಂಗಮ್ಮಾ ತಾಯಿ ಟ್ರಸ್ಟ್, ತಾಲ್ಲೂಕು ಜಾನಪದ ಕಲಾವಿದರು ಹಾಗೂ ಸ್ಥಳೀಯ ವಿವಿಧ ಸಂಘ-ಸಂಸ್ಥಗಳ ಸಹಯೋಗದಲ್ಲಿ ಆಯೋಜಿಸಲಾದ ಮೆರವಣಿಗೆ ಪಟ್ಟಣದ ಗಂಗೀಭಾವಿ ವೃತ್ತದಲ್ಲಿನ ಅರಟಾಳ ರುದ್ರಪ್ಪ ಮುಖ್ಯದ್ವಾರದಿಂದ ಪ್ರಾರಂಭವಾಯಿತು.ಮೆರವಣಿಗೆಯಲ್ಲಿ ಸುರಶೆಟ್ಟಿಕೊಪ್ಪ ಹಾಗೂ ಬನ್ನೂರಿನ ಜಗ್ಗಲಗಿ ತಂಡ, ಗೋನಾಳದ, ಬೆಳವಲಕೊಪ್ಪ ಹಾಗೂ ಚಿಕ್ಕಬೆಂಡಿಗೇರಿ ಹೆಜ್ಜೆಮೇಳಗಳ ತಂಡಗಳು, ಹಾವಣಗಿ, ಸುರಳೇಶ್ವರದ ವೀರಗಾಸೆ, ಹೊಸೂರು, ಜಕ್ಕನಕಟ್ಟಿ ತಾಂಡಾದ ಲಂಬಾಣಿ ನೃತ್ಯ, ಕಲಗೇರಿ ಕೀಲುಕುದರಿ, ಹುಲಸೋಗಿಯ ದೊಡ್ಡಾಟ ವೇಷಗಳ ಪ್ರದರ್ಶನ, ಹುರಳಿಕೊಪ್ಪಿ ಕೋಲಾಟ, ತಡಸ, ಕ್ಯಾಲಕೊಂಡದ ಕಹಳೆ ವಾದನ, ಧಾರವಾಡ ಜಿಲ್ಲೆ ನವಲಗುಂದದ ಮಂಜುನಾಥೇಶ್ವರ ಕರಡಿ ಮಜಲು ಮೇಳ, ಬನ್ನೂರು ಗ್ರಾಮದ ಶಾಲಾ ಮಕ್ಕಳಿಂದ ಗುರುಗೋವಿಂದ ಭಟ್ಟ ಹಾಗೂ ಶರೀಫರ ರೂಪಕ, ಸಂತ ಕನಕದಾಸರ, ಸರ್ವಜ್ಞ ಕವಿಗಳ ರೂಪಕ, ಗೊಟಗೋಡಿ ರಾಕ್ ಗಾರ್ಡನ್ನಿನ ಚಕ್ಕಡಿಬಂಡಿಯ ಡಾ.ರಾಜಕುಮಾರ ಮತ್ತು ಆನೆಬಂಡಿಯ ರೂಪಕಗಳು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜಾತ್ರಾ ಚಕ್ಕಡಿ ಪ್ರಾತ್ಯಕ್ಷಿಕೆ, ಮಹಿಳಾ ಪೂರ್ಣಕುಂಭಗಳ ಮೆರವಣಿಗೆ ಸೇರಿದಂತೆ ನೂರಾರು ಕಲಾ ತಂಡಗಳ ಪ್ರದರ್ಶನ ಜನಮನ ಸೆಳೆದವು.ಮನಸೆಳೆದ ಮೆರವಣಿಗೆ


ಇದಕ್ಕೂ ಮುನ್ನ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಜಗ್ಗಲಗಿ ಬಾರಿಸುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ತಹಸೀಲದಾರ  ಕೊಟ್ರೇಶ, ಪುರಸಭೆ ಅಧ್ಯಕ್ಷೆ ಇಂದ್ರಮ್ಮಾ ಹಾವೇರಿ, ತಾ.ಪಂ. ಅಧ್ಯಕ್ಷ ವೀರನಗೌಡ ಪಾಟೀಲ, ಸಾಹಿತಿ ಬ.ಫ. ಯಲಿಗಾರ ಸೇರಿದಂತೆ ಅನೇಕ ಗಣ್ಯರು ಕಲಾತಂಡಗಳ ಮೆರವಣಿಗೆಗೆ ಹೂಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.ಮೆರವಣಿಗೆ ಸಂದರ್ಭದಲ್ಲಿ ಕಲಾ ತಂಡದ ಸದಸ್ಯರಿಗೆ ಕುಡಿಯುವ ನೀರು, ಪಾನಕ ವಿತರಣೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕವಿ, ಸಾಹಿತಿಗಳ, ತತ್ವಪದಕಾರರ, ದಾಸರ ಭಾವ–ಚಿತ್ರಗಳು ಹಾಗೂ ತಳಿರು ತೋರಣಗಳಿಂದ ಅಲಂಕರಿಸಿದ ರಸ್ತೆಗಳು ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.