ಬುಧವಾರ, ಏಪ್ರಿಲ್ 21, 2021
30 °C

ಶಿಥಿಲಾವಸ್ಥೆಯಲ್ಲಿ ಪರವಾಸು ದೇವಾಲಯ

ಎನ್. ನಾಗರಾಜು Updated:

ಅಕ್ಷರ ಗಾತ್ರ : | |

ಶಿಥಿಲಾವಸ್ಥೆಯಲ್ಲಿ ಪರವಾಸು ದೇವಾಲಯ

ಗುಂಡ್ಲುಪೇಟೆ: ಸುಮಾರು 400 ವರ್ಷಗಳ ಇತಿಹಾಸ ಇರುವ ಪರವಾಸು ದೇವಾಲಯ ಶಿಥಿಲಾವಸ್ಥೆ ತಲುಪಿದ್ದು, ಜೀರ್ಣೋದ್ದಾರಕ್ಕಾಗಿ ಎದುರು ನೋಡುತ್ತಿದೆ.ಚಿಕ್ಕದೇವರಾಜ ಒಡೆಯರು ಅಧಿಕಾರ ವಹಿಸಿಕೊಂಡ ನಂತರ ಅವರ ತಂದೆ ದೊಡ್ಡ ದೇವರಾಜ ಒಡೆಯರ ಅಂತ್ಯಕ್ರಿಯೆಯನ್ನು ಗುಂಡ್ಲು ನದಿಯ ಎಡದಂಡೆಯಲ್ಲಿ 1674 ರಲ್ಲಿ ನಡೆಸಿ ಒಂದು ಅಗ್ರಹಾರ ಮತ್ತು ಪರವಾಸು ದೇವಾಲಯವನ್ನು ನಿರ್ಮಿಸಿ ಬ್ರಾಹ್ಮಣರಿಗೆ ನೀಡಿದರೆಂಬುದು ಇತಿಹಾಸ ದಿಂದ ತಿಳಿದು ಬರುತ್ತದೆ.ಈ ದೇವಾಲಯವು ತಲಕಾಡು ವೈದ್ಯನಾಥೇಶ್ವರ ದೇವಾಲಯದ ವಾಸ್ತುಶಿಲ್ಪವನ್ನು ಹೋಲುತ್ತದೆ. ಕಲ್ಲಿನ ತಳಹದಿಯ ಮೇಲೆ ದೊಡ್ಡ ಬಂಡೆಕಲ್ಲು ಮತ್ತು ಚಪ್ಪಡಿಗಳನ್ನು ಬಳಸಿ ದೇವಾಲಯ ನಿರ್ಮಿಸಲಾಗಿದೆ. ಗರ್ಭಗೃಹ, ಸುಖನಾಸಿ ಮತ್ತು ಚತುರ‌್ರಸ ಆಕಾರದ ನವರಂಗವಿದ್ದು 13 ಕಂಬಗಳು, ದಶಾವತಾರ, ಹನುಮಂತ, ನಂದಿ, ಸಿಂಹ, ಗಣೇಶ ಋಷಿ ಮುಂತಾದ ಶಿಲ್ಪಗಳನ್ನು ಕೆತ್ತಲಾಗಿದೆ.ಸುಖನಾಸಿಯ ಪಶ್ಚಿಮ ಮತ್ತು ದಕ್ಷಿಣಾಭಿಮುಖವಾದ ಎಡಕಂಬದ ಮೇಲೆ ಚಿಕ್ಕದೇವರಾಜರು ಆಸೀನರಾಗಿರುವ ಮತ್ತೊಂದು ಕಂಬದಲ್ಲಿ ಭಕ್ತವೈರಾಗಿ ಚಿಕ್ಕದೇವರಾಜರ ವಿಗ್ರಹದ ಕೆತ್ತನೆ ಇದೆ. ಸುರುಳಿಯ ಮೇಲೆ ಸುಖಾಸೀನರಾಗಿ ಕುಳಿತಿರುವ ಪರವಾಸು ದೇವರ ವಿಗ್ರಹವು 5 ಅಡಿ ಎತ್ತರವಿದೆ. ತಲೆಯ ಮೇಲೆ ಅನಂತ ಹೆಡೆಯನ್ನು ಬಿಚ್ಚಿದ್ದಾನೆ. ಮುಡಿಯ ಮೇಲೆ ಒಂದು ಕೈ, ಎರಡನೆಯದರಲ್ಲಿ ಚಕ್ರ, ಮೂರನೆಯದರಲ್ಲಿ ಶಂಖ, 4ನೇಯದರಲ್ಲಿ ಕೈ ಅನಂತನ ಮೇಲೆ ಊರಿದೆ. ಪರವಾಸು ದೇವನ ತಲೆಯ ಮೇಲೆ ಏಳು ತಲೆಯ ನಾಗಶೇಷನು ಹೆಡೆ ಬಿಚ್ಚಿ ಸ್ವಾಮಿಗೆ ಆಸರೆ ಮತ್ತು ಆಸೀನರಾಗಿರುವುದು ವಿಶೇಷ ಮತ್ತು ಶ್ರೀಕಮಲವಲ್ಲಿ ಮತ್ತು ಆಂಡಾಳ್ ವಿಗ್ರಹಗಳಿವೆ. ಈ ದೇವಸ್ಥಾನವು ಶಿಥಿಲಾವಸ್ಥೆ ತಲುಪಿದ್ದು, ದೇಗುಲದ ಗೋಡೆಗಳು ಬಿದ್ದು ಹೋಗಿವೆ. ಈ ವಿಗ್ರಹಗಳನ್ನು ಪಟ್ಟಣದ ವಿಜಯ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಸಂರಕ್ಷಣೆ ಮಾಡಲಾಗಿದೆ.`ಈ ದೇವಾಲಯವನ್ನು ಮತ್ತೆ ಜೀರ್ಣೋದ್ಧಾರ ಮಾಡಲು ಯಾರೂ ಮುಂದಾಗಿಲ್ಲ. ರಾಜ್ಯ ಸರ್ಕಾರ ಇದರ ಜೀರ್ಣೋದ್ಧಾರಕ್ಕಾಗಿ 5 ಲಕ್ಷ ರೂ. ಗಳನ್ನು ನೀಡುವುದಾಗಿ ಮುಂದೆ ಬಂದಿದ್ದರೂ ಯಾರೂ ಆಸಕ್ತಿ ವಹಿಸುತ್ತಿಲ್ಲ. ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು~ ಎನ್ನುವುದು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಧರ್ಮದರ್ಶಿ ನಾಗರಾಜು ಅವರ ಅಭಿಪ್ರಾಯ.ಇತಿಹಾಸ ಸಾರುವ ಇಂತಹ ದೇವಾಲಯಗಳನ್ನು ಉಳಿಸಿಕೊಂಡು ಅದರ ಜೀರ್ಣೋದ್ಧಾರ ಮಾಡಲು ಸಾರ್ವಜನಿಕರ ಆಸಕ್ತಿಯೂ ಬಹುಮುಖ್ಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.