ಗುರುವಾರ , ಜೂನ್ 24, 2021
25 °C

ಶಿಷ್ಟಾಚಾರ ಉಲ್ಲಂಘನೆ: ಇಒ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯ ಸರ್ಕಾರದ ಅನುದಾನದಿಂದ ನಡೆಸಲಾಗುವ ಕಾಮಗಾರಿ ಉದ್ಘಾಟನಾ ಸಮಾರಂಭಗಳಿಗೆ ಮಾರ್ಗಸೂಚಿಯನ್ವಯ ಜನಪ್ರತಿನಿಧಿಅಹ್ವಾನಿಸದ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಲೋಪಗಳಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುಳಾ ವೆಂಕಟೇಶ್, ಈಚೆಗೆ ತಾವು ಮುಳಬಾಗಲುವಿನ ಅಂಗನವಾಡಿ ಕಟ್ಟಡದ ಉದ್ಘಾಟನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಶಾಸಕರ ಹೆಸರನ್ನೇ ಕೈಬಿಡಲಾಗಿತ್ತು. ಅದೇ ರೀತಿ ಬಂಗಾರಪೇಟೆ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ತಿಳಿಸಿದರು.ಈ ವಿಷಯ ಕುರಿತು ಬಂಗಾರಪೇಟೆ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಉಪಾಧ್ಯಕ್ಷ ಹರೀಶ್, ಬೂದಿಕೋಟೆ ಗ್ರಾಮದಲ್ಲಿ ಈಚೆಗೆ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳೀಯ ಜಿ.ಪಂ.ಸದಸ್ಯರನ್ನೇ ಕರೆದಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಹಣವನ್ನು ಶಾಸಕರು ಮನೆಯಿಂದ ತರುತ್ತಿಲ್ಲ. ಸರ್ಕಾರದಿಂದ ಬರುವ ಹಣವನ್ನು ಸಾರ್ವಜನಿಕವಾಗಿ ಉಪಯೋಗಿಸುವಾಗ ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯವಾಗಬೇಕು ಎಂದರು.ಅದೇ ರೀತಿ ಭೂಸೇನಾ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪ ಕಾರ್ಯದರ್ಶಿ ಟಿ.ಬದನೂರು, ಲಕ್ಷಾಂತರ ರೂಪಾಯಿ ಕಾಮಗಾರಿ ನಡೆಸುವ ನಿಮಗೆ ಒಂದು ಸಾವಿರ ರೂಪಾಯಿ ಖರ್ಚು ಮಾಡಿ ಕರಪತ್ರ ಮುದ್ರಿಸಲು ಸಾಧ್ಯವಾಗುವುದಿಲ್ಲವೆ. ನೀವು ಮಾಡಿದ ಕಾಮಗಾರಿಗಳ ವಿವರ ಸ್ಥಳೀಯ ಪ್ರತಿನಿಧಿಗಳಿಗೆ ತಿಳಿದಿರುವುದಿಲ್ಲ. ಸಮರ್ಪಕವಾಗಿ ನಿರ್ವಹಿಸುವಂತೆ ಸರ್ಕಾರದಿಂದ ಆಗಾಗ್ಗೆ ಸೂಚನೆ ಬರುತ್ತಲೇ ಇವೆ. ನೀವು ಮಾತ್ರ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಳಬಾಗಲು ತಾಲ್ಲೂಕು ಹೊಸಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಅಕ್ರಮ ಎಸಗುತ್ತಿದ್ದಾರೆ. ರಾಗಿ ಮಿಷನ್‌ನಲ್ಲಿ ದಾಸ್ತಾನು ಇಟ್ಟುಕೊಂಡು ಪಡಿತರದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಸಂಬಂಧ ದೂರು ಸಲ್ಲಿಸಿದ್ದರೂ; ಅಧಿಕಾರಿಗಳು ನಿರ್ಲಿಪ್ತರಾಗಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಕಿಟ್ಟಪ್ಪ ಆರೋಪಿಸಿದರು.ಕಿಟ್ಟಪ್ಪ ಆರೋಪಕ್ಕೆ ಪ್ರತಿ ವಾದ ಮಾಡಿದ ಉಪನಿರ್ದೇಶಕ ಶ್ರೀನಿವಾಸ್ ಅಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಧಿಕಾರಿಗಳು ಸಮರ್ಪಕವಾಗಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪ ಅಲ್ಲಗೆಳೆದರು. ಈ ಹಂತದಲ್ಲಿ ಕಿಟ್ಟಪ್ಪ, ಶ್ರೀನಿವಾಸ್ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಮಂಜುಳಾ, ಸದರಿ ಗ್ರಾಮಕ್ಕೆ ಉಪನಿರ್ದೇಶಕರೇ ಭೇಟಿ ನೀಡಿ ಮುಂದಿನ ಸಭೆಯಲ್ಲಿ ವರದಿ ನೀಡಿ ಎಂದು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.