ಮಂಗಳವಾರ, ಮೇ 11, 2021
22 °C

ಶೀಘ್ರದಲ್ಲೇ ರಾಷ್ಟ್ರೀಯ ತಯಾರಿಕಾ ನೀತಿ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಮೊಟ್ಟ ಮೊದಲ ರಾಷ್ಟ್ರೀಯ ತಯಾರಿಕಾ ನೀತಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.ತಯಾರಿಕಾ ನೀತಿ ಅಂತಿಮಗೊಂಡಿದ್ದು, ವಾರದೊಳಗೆ ಸಂಸತ್ತಿನಲ್ಲಿ ಚರ್ಚೆಗೆ ಬರಲಿದೆ. ಯಾವುದೇ ವಿಳಂಬವಿಲ್ಲದೆ, ಈ ತಿಂಗಳಾಂತ್ಯಕ್ಕೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ   ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ ಸಭೆಯಲ್ಲಿ ಹೇಳಿದರು.ರಾಷ್ಟ್ರೀಯ ತಯಾರಿಕಾ ನೀತಿಯ  ಮೂಲಕ ಮುಂದಿನ 10 ವರ್ಷಗಳಲ್ಲಿ 100 ದಶಲಕ್ಷ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿಗೆ ಸರ್ಕಾರ ಯತ್ನಿಸುತ್ತಿದೆ. ಈ ಮೂಲಕ ದೇಶದಾದ್ಯಂತ ವಿಶ್ವದರ್ಜೆ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಿ, ಬೃಹತ್ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ಯೋಜನೆಹೊಂದಲಾಗಿದೆ. 2025ರ ವೇಳೆಗೆ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ತಯಾರಿಕಾ ಕ್ಷೇತ್ರದ ಕೊಡುಗೆಯನ್ನು ಈಗಿನ ಶೇ 16ರಿಂದ ಶೇ 25ಕ್ಕೆ ಹೆಚ್ಚಿಸುವ ಗುರಿ ಇದೆ. ಸದ್ಯಕ್ಕೆ ಯಾರಿಕಾ ಕ್ಷೇತ್ರವು, ದೇಶದ ಒಟ್ಟು ಕೈಗಾರಿಕೆ ಉತ್ಪಾದನೆಗೆ ಶೇ 80ರಷ್ಟು ಕೊಡುಗೆ ನೀಡುತ್ತಿದೆ.ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸಲು, ರಾಷ್ಟ್ರೀಯ ತಯಾರಿಕಾ ಹೂಡಿಕೆ ವಲಯಗಳ (ಎನ್‌ಎಂಐಜೆಡ್‌ಎಸ್) ಸೃಷ್ಟಿಯ ಕುರಿತೂ ರಾಷ್ಟ್ರೀಯ ತಯಾರಿಕಾ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ವಿಶೇಷ ಆರ್ಥಿಕ ವಲಯಕ್ಕಿಂತ (ಎಸ್‌ಇಜೆಡ್) ದೊಡ್ಡ ಮಟ್ಟದ ಯೋಜನೆಗಳಾಗಿದ್ದು, ಕೇಂದ್ರದ ಹಣಕಾಸಿನ ನೆರವಿನೊಂದಿಗೆ ರಾಜ್ಯಗಳ ಸಹಭಾಗಿತ್ವದಲ್ಲಿ ಇಂತಹ 4-5 `ಎನ್‌ಎಂಐಜೆಡ್~ಗಳನ್ನು ನಿರ್ಮಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಮೂಲ ಸೌಕರ್ಯ ವೃದ್ಧಿಯ ಜತೆಗೆ, ಹಸಿರು ಕೈಗಾರಿಕಾ ನಗರಗಳನ್ನು ಸ್ಥಾಪಿಸುವುದು ಯೋಜನೆಯ  ಉದ್ದೇಶವಾಗಿದೆ.90 ಶತಕೋಟಿ ಡಾಲರ್ (ರೂ4,05,000 ಕೋಟಿ) ಮೊತ್ತದ ಪ್ರಸ್ತಾವಿತ ದೆಹಲಿ ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ (ಡಿಎಂಐಸಿ) ಯೋಜನೆ ದೇಶದ ತಯಾರಿಕಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.