ಗುರುವಾರ , ಮೇ 26, 2022
23 °C

ಶುಭೋದಯದ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ವಿಧವೆಗೆ ಮಂಗಳ ಭಾಗ್ಯ~ ವರದಿ ಓದಿ, ಅತ್ಯಂತ ಸಂತೋಷ ಪಟ್ಟವರಲ್ಲಿ ನಾನೂ ಒಬ್ಬಳು. `ವಿಧವೆ~ಯರಿಗೆ, ಈ ರೀತಿ ಕರೆಯುವುದೂ ಜನಾರ್ದನ ಪೂಜಾರಿಯವರು ಹೇಳಿದಂತೆ, ಕ್ರೌರ್ಯವಾಗುತ್ತದೆ. ಗಂಡನನ್ನು ಕಳೆದುಕೊಂಡ ಹತಭಾಗಿನಿಯರ ಬಾಳಿನಲ್ಲಿ ಶುಭ ಗಳಿಗೆ ಮೂಡಿದ ಸಂದರ್ಭ ಅದು.ಇಂಥ ಹಲವಾರು ಅನಿಷ್ಟ ಆಚರಣೆ -ಸಂಪ್ರದಾಯಗಳಿಂದ ಸಂಕಟ, ಹೀನಾಯ, ಅವಮಾನ ಮುಂತಾದ ದೌರ್ಜನ್ಯಗಳಿಗೆ ಈಡಾಗಿದ್ದ ಈ ಭಗಿನಿಯರು, ಅಂದು ದೇವರೆದುರು ಹೂ, ಕುಂಕುಮ ಬಳೆ ಧರಿಸಿ ದೇವರ ಬೆಳ್ಳಿ ರಥ ಎಳೆದು ಸಂಭ್ರಮಿಸಿದ್ದು ಧಾರ್ಮಿಕ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಘಟನೆ.ವಿಪರ್ಯಾಸವೆಂದರೆ ಕೆಲವು ದಿನಗಳ ಹಿಂದೆ ದೂರದರ್ಶನ ವಾಹಿನಿಯೊಂದರಲ್ಲಿ ಗುರುಗಳೆಂದು ಕರೆಸಿಕೊಂಡು ಕಾರ್ಯಕ್ರಮ ನೀಡುತ್ತಿರುವವರೊಬ್ಬರು ವಿಧವೆ ಕುಂಕುಮ, ಹೂ ಬಳೆಗಳನ್ನು ಧರಿಸಲು ನಿಷೇಧವೇಕೆಂದರೆ, ಗಂಡ ಸತ್ತ ನಂತರ ಆಕೆಯನ್ನು ರಕ್ಷಿಸುವವರಿಲ್ಲದಿರುವುದರಿಂದ, ಇತರರ ಆಕರ್ಷಣೆ ಒಳಗಾಗಬಾರದೆಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಹೇಳಿ ಹಿಂದೂ ಧರ್ಮದ ಈ ಅನಿಷ್ಟ ಸಂಪ್ರದಾಯವನ್ನು ಮಾನ್ಯ ಮಾಡಿದರು.ಈಗಲೂ ಹೆಣ್ಣಿನ ಬಗ್ಗೆ ಇಂಥ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವವರ ಮಧ್ಯೆ ಗೋಕರ್ಣನಾಥ ದೇವಸ್ಥಾನದಲ್ಲಿ, ಗಂಡನನ್ನು ಕಳೆದುಕೊಂಡ ಸ್ತ್ರೀಯರ ಅಳಲನ್ನು ಅರ್ಥಮಾಡಿಕೊಂಡು ಅವರಿಗೆ ಮಂಗಳ ಭಾಗ್ಯ ಒದಗಿಸಿದ್ದು ಅತ್ಯಂತ ಪ್ರಶಂಸಾರ್ಹ ಕಾರ್ಯ. ಇದರ ಜವಾಬ್ದಾರಿ ಹೊತ್ತು ನಿರ್ವಹಿಸಿದ ಜನಾರ್ದನ ಪೂಜಾರಿಯವರೂ ಅಭಿನಂದನಾರ್ಹರು. ಇಂಥ ಸುಧಾರಣೆಯ ಕಾರ್ಯಕ್ರಮ ಏನೇ ಮಾಡಿದರೂ, ಪರಂಪರಾಗತ, ಸ್ಥಾಪಿತ ಧರ್ಮದ ಮೂಲಬೇರುಗಳನ್ನು ಗಟ್ಟಿಯಾಗಿಸಿಕೊಂಡ ಮನಸ್ಸುಗಳು ಸ್ಪಂದಿಸುವುದು ವಿರಳ.

ಅಂಥದ್ದರಲ್ಲಿ ನಿರೀಕ್ಷೆಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಂಗಳ ದ್ರವ್ಯಗಳನ್ನು ಧರಿಸಲು ಮುಂದೆ ಬಂದ ಈ ಭಗಿನಿಯರು ಅನಿಷ್ಟ ಸಂಪ್ರದಾಯದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದಾರೆ. ಹಿಂದೂ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಯ ಶುಭೋದಯವಾಗುವುದರ ಸೂಚನೆ ಇದು. ಇದರ ಹರಿಕಾರರಾದ ನಾರಾಯಣ ಗುರುಗಳ ಆಶಯ ಈಡೇರಿ, ಇಂಥ ಮೂಢ ಸಂಪ್ರದಾಯಗಳಿಂದ ಮುಕ್ತವಾದ ಮಾನವೀಯ ಮೌಲ್ಯಗಳಿಂದ ಹಿಂದೂ ಧರ್ಮ ವಿಜೃಂಭಿಸಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.