ಭಾನುವಾರ, ಏಪ್ರಿಲ್ 11, 2021
25 °C

ಶುಲ್ಕ ಪರಿಷ್ಕರಣೆ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆಗೆ ಶುಲ್ಕ ಹೆಚ್ಚಳ ಮಾಡಿರುವ ಕ್ರಮವನ್ನು ಶುಕ್ರವಾರ ಮೇಯರ್ ಪೂರ್ಣಾ ಪಾಟೀಲ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ವಿರೋಧ ಪಕ್ಷದ ನಾಯಕ ದೀಪಕ್ ಚಿಂಚೋರೆಯವರು ಮಾಡಿರುವ ಆರೋಪಗಳನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಲ್ಲಗಳೆದ ಅವರು, ‘ಕಳೆದ 18 ವರ್ಷಗಳ ನಂತರ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಇದರಿಂದ ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆಯಾಗಿಲ್ಲ. ವಿರೋಧ ಪಕ್ಷವೂ ಸೇರಿದಂತೆ ಎಲ್ಲರ ಸಮ್ಮತಿಯ ಮೇರೆಗೆ ಶುಲ್ಕ ಹೆಚ್ಚಳದ ನಿರ್ಧಾರ ಪ್ರಕಟಿಸಲಾಗಿದೆ’ ಎಂದು ಹೇಳಿದರು.‘ವಿರೋಧ ಪಕ್ಷದ ನಾಯಕರು ಸಾಮಾನ್ಯ ಸಭೆಯಲ್ಲಿ ಅಥವಾ ಪಾಲಿಕೆಯ ವೇದಿಕೆಯಲ್ಲಿ ವಿರೋಧ ವ್ಯಕ್ತಪಡಿಸಬಹುದಿತ್ತು. ಆದರೆ, ನಿರ್ಧಾರ ಮಾಡುವಾಗ ತಮ್ಮ ಸಮ್ಮತಿ ಕೊಟ್ಟಿರುವ ಅವರು, ನಂತರ ಪತ್ರಿಕಾಗೋಷ್ಠಿಯಲ್ಲಿ ಇಂತಹ ಹೇಳಿಕೆ ನೀಡುವುದು ಸಮ್ಮತವಲ್ಲ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಾಜರಿದ್ದ ಸಭಾ ನಾಯಕ ವೀರಣ್ಣ ಸವಡಿ, ‘ಈ ಶುಲ್ಕ ಪರಿಷ್ಕರಣೆಗೆ ಒಂದು ವೇಳೆ ವಿರೋಧವಿದ್ದಿದ್ದರೆ ಸಭೆಯಲ್ಲಿಯೇ ಅವರು ಲಿಖಿತ ರೂಪದಲ್ಲಿ ಕೊಡಬಹುದಿತ್ತು. ಅವರು ದೂರನ್ನು ರಾಜ್ಯ ಸರ್ಕಾರಕ್ಕೆ ಬರೆಯಲೂ ಅವಕಾಶವಿತ್ತು. ಅವರಿಂದ ಮುಚ್ಚುಮರೆ ಮಾಡಿ ಪರಿಷ್ಕರಣೆಯ ನಿರ್ಧಾರವನ್ನು ಪ್ರಕಟಿಸಿಲ್ಲ’ ಎಂದರು.ಈ ಸಂದರ್ಭದಲ್ಲಿ ಹಾಜರಿದ್ದ ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ, ‘ಪ್ರತಿ ಐದು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆಯಾಗಬೇಕು. ಆದರೆ ಕಳೆದ 18 ವರ್ಷಗಳಿಂದ ಮಾಡಿರಲಿಲ್ಲ. ಅದಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಹೆಚ್ಚಳ ದೊಡ್ಡದಲ್ಲ. ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಸುಸಜ್ಜಿತ ವಾದ ನಗರ ನಿರ್ವಹಣೆಗಾಗಿ ಧನ ಸಂಪನ್ಮೂಲದ ಅವಶ್ಯಕತೆ ಇದೆ. ಈ ಶುಲ್ಕ ಹೆಚ್ಚಳದಿಂದ ಸಿಗುವ ಹೆಚ್ಚುವರಿ ಆದಾಯ ಸೌಲಭ್ಯ ನೀಡಲು ವಿನಿಯೋಗವಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.‘ಶುಲ್ಕ ಪರಿಷ್ಕರಣೆಯ ಬಗ್ಗೆ ಸಲಹೆಗಳನ್ನು ಸ್ವೀಕರಿಸಲು ಪಾಲಿಕೆಯು ಯಾವಾಗಲೂ ಸಿದ್ಧವಾಗಿದೆ. ಈ ಕುರಿತು ಪರಿಶೀಲಿಸಲಾಗುವುದು. ರಾಜ್ಯ ಬೇರೆ ಪಾಲಿಕೆಗಳ ಶುಲ್ಕಗಳಿಗೆ ಹೋಲಿಕೆ ಮಾಡಿದರೆ ನಮ್ಮದು ಜನಪರವಾಗಿದೆ’ ಎಂದು ಹೇಳಿದರು. ನೀರಿಗಾಗಿ ವಿಶೇಷ ಸಭೆ: ‘ಬೇಸಿಗೆಯಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಪರಿಹಾರ ಕಂಡುಕೊಳ್ಳಲು ಇದೇ ಬುಧವಾರ ಅಧಿಕಾರಿಗಳ ಮತ್ತು ಪಾಲಿಕೆ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇರುವುದು ಗೊತ್ತಾಗಿದ್ದು, ಯಾವ ವಿಭಾಗದಲ್ಲಿ ಎಷ್ಟು ಪ್ರಮಾಣದ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಪೂರ್ಣಾ ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ನಾರಾಯಣ ಜರತಾರಘರ, ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.