ಶುಕ್ರವಾರ, ಮಾರ್ಚ್ 5, 2021
27 °C

ಶೃಂಗಾರ ಶೀಲ ಸಂಗೀತ ಲೋಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗಾರ ಶೀಲ ಸಂಗೀತ ಲೋಲ

ರವಿಚಂದ್ರನ್‌ ಮತ್ತೆ ಪ್ರೇಮಲೋಕದ ಗುಂಗಿಗೆ ಬಿದ್ದಿದ್ದಾರಾ? ‘ಶೃಂಗಾರ’ ಚಿತ್ರದ ಸೆಟ್‌ನಲ್ಲಿ ಸುದ್ದಿಗಾರರ ಜೊತೆ ಕೂತ ಅವರ ಮಾತುಗಳಲ್ಲಂತೂ ಪ್ರೇಮಲೋಕದ ನಶೆ ಜಿನುಗುತ್ತಿತ್ತು.‘ಹತ್ತು ವರ್ಷಗಳ ನಂತರ ಗಡ್ಡ ತೆಗೆದಿದ್ದೇನೆ. ನಟನಾಗಿ ನನಗೆ ನಾನೇ ಚೌಕಟ್ಟು ಹಾಕಿಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದೇನೆ. ನನ್ನ ಯಾವ ಇಮೇಜನ್ನು ಜನರು ಇಷ್ಟಪಡುತ್ತಿದ್ದರೋ ಆ ಇಮೇಜನ್ನು ಉಳಿಸುವುದು ನಿರ್ದೇಶಕರಿಗೆ ಮತ್ತು ಸಂಗೀತ ನಿರ್ದೇಶಕರಿಗೆ ಬಿಟ್ಟಿದ್ದು. ಈ ಸಿನಿಮಾದ ಆರು ಹಾಡುಗಳನ್ನು ಹಿಟ್ ಮಾಡಲೇಬೇಕು. ಒಂದು ಹಾಡು ಸರಿ ಇಲ್ಲ ಅಂದರೂ ಸಿನಿಮಾಕ್ಕೆ 10 ಪರ್ಸೆಂಟ್ ಏಟು ಬೀಳುತ್ತೆ. ಸಿನಿಮಾದ ಬಜೆಟ್‌ ಕೂಡ ಸಹಜವಾಗಿಯೇ ದೊಡ್ಡದಾಗಿದೆ. ನನ್ನ ಜೊತೆಗೆ ಇಬ್ಬರು ಗ್ಲಾಮರಸ್‌ ಹೀರೊಯಿನ್‌ಗಳು ಇದ್ದಮೇಲೆ ಬಜೆಟ್‌ ಹೆಚ್ಚುವುದು ಸಹಜ...’ರವಿಚಂದ್ರನ್ ಅವರ ಮಾತುಗಳ ಜಾಡು ಹಿಡಿದು ಹೇಳುವುದಾದರೆ, ಅವರ ಮುಂದಿನ ಸಿನಿಮಾ ‘ಶೃಂಗಾರ’ಮಯ ಆಗಿರಲಿದೆ. ಹೇಳಿಕೇಳಿ ಚಿತ್ರದ ಹೆಸರೇ ‘ಶೃಂಗಾರ’. ನಾಗೇಂದ್ರಪ್ರಸಾದ್ ಚಿತ್ರದ ನಿರ್ದೇಶಕರು.‘ಗಡಿಬಿಡಿ ಗಂಡ ಚಿತ್ರದ ರೇಂಜಿಗೆ ಈ ಚಿತ್ರ ಮಾಡಬೇಕು. ಅಂದಿನ ಹಾಡುಗಳು ಮತ್ತೆ ಜನರಿಗೆ ಸಿಕ್ಕಬೇಕು. ಸಿನಿಮಾ ಪೂರ್ಣವಾಗಿ ಶೃಂಗಾರಮಯ ಆಗಿರಲೇಬೇಕು’ ಎಂದು ಚಿತ್ರದ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಮತ್ತು ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ ಅವರನ್ನು ರವಿಚಂದ್ರನ್ ಪ್ರೀತಿಪೂರ್ವಕವಾಗಿ ತಾಕೀತು ಮಾಡಿದರು. ಅಂದಹಾಗೆ, ಈ ಚಿತ್ರದಲ್ಲಿ ರವಿಚಂದ್ರನ್ ಅವರದು ಫ್ಯಾಷನ್ ಡಿಸೈನರ್ ಪಾತ್ರ.‘ಶೃಂಗಾರ ಅಂದರೆ ರವಿಚಂದ್ರನ್, ರವಿಚಂದ್ರನ್ ಅಂದರೆ ಶೃಂಗಾರ’ ಎನ್ನುವ ಬಣ್ಣನೆ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಅವರದು. ‘ಈ ಚಿತ್ರಕ್ಕೆ ಶೃಂಗಾರ ಅಂತ ಟೈಟಲ್ ಕೊಟ್ಟವರು ರವಿ ಸರ್‌. ಬೆಂಗಳೂರು, ಹುಬ್ಬಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗುವುದು.  ಸಾವಿರಾರು ಜನರ ನಡುವೆ ಹುಬ್ಬಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗುವುದು’ ಎಂದವರು ಹೇಳಿದರು.ಲಕ್ಷ್ಮೀ ರೈ ಮತ್ತು ರಾಗಿಣಿ ಚಿತ್ರದ ನಾಯಕಿಯರು. ‘ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ‘ತುಪ್ಪಾ ಬೇಕಾ ತುಪ್ಪಾ’ ಎಂದು ರವಿಚಂದ್ರನ್ ಅವರೊಂದಿಗೆ ಕುಣಿದಿದ್ದ ಈ ತುಪ್ಪದ ಬೆಡಗಿಗೆ ‘ರವಿಚಂದ್ರನ್ ಅವರಿಂದ ತುಂಬಾ ಕಲಿಯಬಹುದು. ನನ್ನ ಮತ್ತು ಅವರ ನಡುವೆ ಒಳ್ಳೆಯ ಸೀನ್‌ಗಳಿವೆ’ ಎಂದು ಚಿತ್ರಕಥೆ ಕೇಳಿದಾಗ ಅನ್ನಿಸಿದೆ. ‘ರವಿ ಸರ್ ಜತೆ ಈ ಪಾತ್ರ ಸಿಕ್ಕಿದ್ದು ಹೆಚ್ಚು ಇಷ್ಟವಾಯಿತು. ಈ ಪಾತ್ರಕ್ಕಾಗಿ ಏನನ್ನಾದರೂ ಮಾಡಲು ಸಿದ್ಧ’ ಎಂದರು ಲಕ್ಷ್ಮೀ ರೈ.‘ಪ್ರೇಮಲೋಕ ಸಿನಿಮಾ ನೋಡಿ ಮ್ಯೂಸಿಕ್ ಮಾಡಬೇಕು ಅಂದುಕೊಂಡಿದ್ದೆ. ಹಂಸಲೇಖ ಶಿಷ್ಯನಾದೆ. ಮೊದಲ ಸಲ ಹಿನ್ನೆಲೆ ಗಾಯಕನಾಗಿ ಹಾಡಿದ್ದು ರವಿ ಸರ್ ನಟನೆಯ ‘ಒಂದಾಗೋಣ ಬಾ’ ಚಿತ್ರಕ್ಕೆ’ ಎಂದು ರವಿಚಂದ್ರನ್ ಅವರೊಂದಿಗೆ ತಮಗಿರುವ ಪರೋಕ್ಷ ನಂಟನ್ನು ಸಂಗೀತ ನಿರ್ದೇಶಕ ಅನೂಪ್ ನೆನಪಿಸಿಕೊಂಡರು. ‘ಶೃಂಗಾರ’ದ ನಿರ್ಮಾಪಕ ಶಂಕರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.