ಸೋಮವಾರ, ಜನವರಿ 27, 2020
25 °C
ಸಮಾನ ಶಿಕ್ಷಣ ನೀತಿ ವಿಚಾರ ಸಂಕಿರಣ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟದ ಹಿತದೃಷ್ಟಿಯಿಂದ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಬೇಕಿದೆ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ವಿ.ಪಿ.­ನಿರಂಜನಾರಾಧ್ಯ ತಿಳಿಸಿದರು.ಸಮಾನ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಕುರಿತು ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯು ನಗರದ ಡಾ.ಬಿ.ಆರ್‌.­ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಸಮಾನ ಶಿಕ್ಷಣ ನೀತಿ ಜಾರಿಗೊಳಿಸುವುದು ಸೇರಿದಂತೆ ಗುಣಾತ್ಮಕ ಬದಲಾವಣೆ ಮಾಡದ ಹೊರತು ಶೈಕ್ಷಣಿಕ ಗುಣಮಟ್ಟ ಸುಧಾರಿಸು­ವು­ದಿಲ್ಲ ಮತ್ತು ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುವುದಿಲ್ಲ. ಶಿಕ್ಷಣ ಕ್ಷೇತ್ರದ ಸ್ಥಿತಿ ನಿರೀಕ್ಷೆಗೂ ಮೀರಿ ಹದಗೆಟ್ಟಿದೆ ಎಂದರು.ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲು ಹೆಚ್ಚಾಗುತ್ತಿದ್ದು, ಸರ್ಕಾರಿ ಶಾಲೆಗಳ ಸಂಖ್ಯೆ ಕ್ಷೀಣಿಸತೊಡಗಿದೆ. 2010–11ರ ಶೈಕ್ಷಣಿಕ ವರ್ಷದಲ್ಲಿ ಶೇ 78.26ರಷ್ಟು ಇದ್ದ ಸರ್ಕಾರಿ ಶಾಲೆಗಳ ಸಂಖ್ಯೆ 2011–12ರ ವೇಳೆಗೆ ಶೇ 71ರಷ್ಟು ಕುಸಿದಿದೆ. ಬಹುತೇಕ ಮಕ್ಕಳು ಸರ್ಕಾರಿ ಶಾಲೆಗಳನ್ನು ತ್ಯಜಿಸಿ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದು, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಶಿಕ್ಷಣ ಹಕ್ಕು (ಆರ್‌ಟಿಇ) ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಬೇರೆ ಬೇರೆ ಯೋಜನೆಗಳನ್ನು ಜಾರಿಗೊಳಿಸಿ ಸರ್ಕಾರವೇ ಮಕ್ಕಳನ್ನು ಖಾಸಗಿ ಶಾಲೆಗೆ ಸೇರುವಂತೆ ಮಾಡುತ್ತಿದೆ. ಆರ್‌ಟಿಇ ಯೋಜನೆ ಆಧರಿಸಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದರೆ, ಸರ್ವಶಿಕ್ಷಣ ಅಭಿಯಾನದಡಿ ಖಾಸಗಿ ಸ್ವಯಂ–ಸೇವಾ ಸಂಸ್ಥೆಗಳು ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರವೇಶಿಸುವಂತಾಗಿದೆ.ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚಿ ಇಲ್ಲವೇ ಅವುಗಳನ್ನು ಖಾಸಗಿ ಸ್ವಯಂ–ಸೇವಾ ಸಂಸ್ಥೆಗಳ ವ್ಯಾಪ್ತಿಗೆ ನೀಡಿ, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಪ್ರಯತ್ನ ನಡೆಸಿದೆ ಎಂದು ಅವರು ತಿಳಿಸಿದರು.ಸಾವಿರಾರು ಶಾಲೆಗಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಿದ್ದರೂ ಅವುಗಳನ್ನು ಭರ್ತಿ ಮಾಡುವ ಪ್ರಕಿ್ರಯೆ ಕೈಗೊಳ್ಳಲಾಗುತ್ತಿಲ್ಲ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ, ಉತ್ತೇಜಿಸುವ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರವೇ ತನ್ನ ಶಾಲೆಗಳತ್ತ ನಿರಾಸಕ್ತಿ ತೋರುವುದು ಮುಂದು­ವರೆ­ಸಿದರೆ, ಪೋಷಕರು ತಮ್ಮ ಮಕ್ಕಳನ್ನು ಹೇಗೆ ತಾನೇ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಾರೆ ಎಂದು ಅವರು ತಿಳಿಸಿದರು.

ಜಲತಜ್ಞ ನಾರಾಯಣಸ್ವಾಮಿ ಮಾತನಾಡಿ, ’ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮತ್ತು ಅವರಲ್ಲಿ ಪರಿಸರ ರಕ್ಷಣೆ ಕುರಿತು ಕಾಳಜಿ ಮೂಡಿಸುವುದು ಇಂದಿನ ಅಗತ್ಯವಾಗಿದೆ’ ಎಂದರು.ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯೆ ಮಲ್ಲಿಗೆ ಅವರು ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಅಗತ್ಯ ಮತತು ಅದರ ಹಕ್ಕೊತ್ತಾಯಗಳು’ ಕುರಿತು ಉಪನ್ಯಾಸ ನೀಡಿದರು.ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ಅವರು ‘ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಣದ ಸ್ಥಿತಿಗತಿಗಳು’ ಕುರಿತು ಮಾತನಾಡಿದರು.ಕರ್ನಾಟಕ ಜನಶಕ್ತಿ ಸಂಘಟನೆಯ ಅಧ್ಯಕ್ಷ ಎನ್‌.ವೆಂಕಟೇಶ್‌ ಕಾರ್ಯಕ್ರಮ ಉದ್ಘಾಟಿಸಿ­ದರೆ, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್‌ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಸಿ.ಜಿ.­ಗಂಗಪ್ಪ, ಬಿ.ವಿ.ಆನಂದ್‌, ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ವಾಸು, ಸಂಜಯ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)