ಶನಿವಾರ, ಮೇ 21, 2022
24 °C

ಶೈಕ್ಷಣಿಕ ಸಬಲೀಕರಣಕ್ಕೆ ಕೇಂದ್ರ ಪ್ರೋತ್ಸಾಹ: ವಾಸ್ನಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೇಂದ್ರ ಸರ್ಕಾರ ಶೈಕ್ಷಣಿಕ ಕ್ಷೇತ್ರವನ್ನು  ಸಬಲಗೊಳಿಸಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು,ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಿರುವುದು ಇದಕ್ಕೆ ಸಾಕ್ಷಿ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು    ಸಬಲೀಕರಣ ಸಚಿವ ಮುಕುಲ್ ವಾಸ್ನಿಕ್ ಅಭಿಪ್ರಾಯಪಟ್ಟರು.ನಗರದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟಿಸಿ ಸೋಮವಾರ ಮಾತನಾಡಿದ ಅವರು, ಸರ್ವ ಶಿಕ್ಷಾ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಸಲಾಗುತ್ತಿದೆ ಎಂದು   ಹೇಳಿದರು.ಸ್ವಾತಂತ್ರ್ಯ ನಂತರವೂ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಅನಕ್ಷರಸ್ಥರಿದ್ದರು. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿವೆ. ಜಿಲ್ಲೆಯಲ್ಲಿ 50 ವರ್ಷದ ಹಿಂದೆಯೇ ಶಿಕ್ಷಣದ ಮಹತ್ವವನ್ನು ಅರಿತು ಶ್ರಮಿಸಿದ ಎಚ್.ಎಂ.ಗಂಗಾಧರಯ್ಯ ಶ್ರಮ ಸಾರ್ಥಕವಾಗಿದೆ. ಶಿಕ್ಷಣ ನೀಡುವುದು ಸಹ ಮಾನವೀಯ ಮೌಲ್ಯವುಳ್ಳ ಕಾರ್ಯ ಎಂದು ಹೇಳಿದರು.ಸ್ವಾತಂತ್ರ್ಯ ನಂತರವೂ ಇಡೀ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ವರ್ಷದಲ್ಲಿ ಸುಮಾರು 35 ಸಾವಿರ ದೌರ್ಜಜ್ಯ ಮತ್ತು ಅಸ್ಪೃಶ್ಯತೆ ಆಚರಣೆ ಪ್ರಕಣಗಳು ದಾಖಲಾಗುತ್ತಿವೆ.ದೇಶದಲ್ಲಿಯೇ ಕರ್ನಾಟಕ ಪ್ರಗತಿಪರ ಚಿಂತನೆಗಳ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದೆ. ಆದರೂ ಇಲ್ಲಿಯೂ ವಾರ್ಷಿಕ ಸುಮಾರು 2000 ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಎಂದು ವಿಷಾದಿಸಿದರು.ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಿರುವ  ಪ್ರದೇಶದಲ್ಲಿಯೇ ದೌರ್ಜನ್ಯ ಮತ್ತು ಅಮಾನವೀಯ  ಪ್ರಕರಣಗಳು ಹೆಚ್ಚುತ್ತಿವೆ. ಶಿಕ್ಷಣಕ್ಕೂ ಮಾನವೀಯತೆಗೂ ಸಂಬಂಧವಿಲ್ಲ ಎಂಬ ಅನುಮಾನ ಬರುತ್ತದೆ. ಅತಿ ಹೆಚ್ಚು    ಸಾಕ್ಷರತೆಯುಳ್ಳ ದೆಹಲಿ, ಮುಂಬೈ, ಕೋಲ್ಕತಾ ಮುಂತಾದ ನಗರಗಳಲ್ಲಿಯೇ ಕೌಟುಂಬಿಕ ದೌರ್ಜನ್ಯ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟರು.ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಶಿಕ್ಷಣದಿಂದ ಸಮಾನತೆ ಮತ್ತು ಪರಿವರ್ತನೆ ಸಾಧ್ಯ ಎಂದು ಸಮಾಜಕ್ಕೆ ತಿಳಿದಿದೆ. ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ. 30 ವರ್ಷಗಳ ಹಿಂದೆ ನಗರ   ಪ್ರದೇಶದ ಜನತೆಗೂ ಸಿಗದಿದ್ದ ಶಿಕ್ಷಣ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೂಲಕ ಆರಂಭಿಸಲಾಯಿತು. ಈಗ 40 ಪ್ರೌಢಶಾಲೆ ಸೇರಿದಂತೆ 85 ಶಿಕ್ಷಣ ಸಂಸ್ಥೆಗಳನ್ನು ಸಿದ್ದಾರ್ಥ ಸಂಸ್ಥೆ ಒಳಗೊಂಡಿದೆ ಎಂದರು.ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ    ಸರಸ್ವತಿ ಸ್ವಾಮೀಜಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾರುತಿ ಡಿ.ಮಾಲೆ, ಕಾರ್ಯದರ್ಶಿ ಡಾ.ಜಿ.ಶಿವಪ್ರಸಾದ್, ವೈ.ಎಂ.ರೆಡ್ಡಿ ಮತ್ತು ಮಾಜಿ ಸಂಸದ ಶಿವಣ್ಣ ಮುಂತಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.