ಭಾನುವಾರ, ಏಪ್ರಿಲ್ 11, 2021
32 °C

ಶೋಭಾ ಬೌಲಿಂಗ್: ಯಡಿಯೂರಪ್ಪ ಬ್ಯಾಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೋಭಾ ಬೌಲಿಂಗ್: ಯಡಿಯೂರಪ್ಪ ಬ್ಯಾಟಿಂಗ್

ಮೈಸೂರು:ಸಚಿವೆ ಶೋಭಾ ಕರಂದ್ಲಾಜೆ ಅವರ ಬೌಲಿಂಗ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಟ್ಟವಾಗಿ ಬ್ಯಾಟ್ ಬೀಸುವ ಮೂಲಕ ತಮ್ಮ  ಕ್ರಿಕೆಟ್ ಪ್ರೀತಿ ಮೆರೆದರು. ಇದಕ್ಕೆ ಪ್ರೇಕ್ಷಕರಾಗಿ ಅವರ ಮಂತ್ರಿಮಂಡಲದ ಅನೇಕ ಸಚಿವರು ಸಾಕ್ಷಿಯಾದರು.ಇದೇನು ಸಚಿವರ ಕ್ರಿಕೆಟ್ ಪಂದ್ಯಾವಳಿ ಅಂದುಕೊಂಡಿರಾ? ನಿಮ್ಮ ಊಹೆ ತಪ್ಪು. ಮುಖ್ಯಮಂತ್ರಿ ಬ್ಯಾಟಿಂಗ್ ಮಾಡಿದ್ದು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲು!

ಹೌದು, ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಕಾ.ಪು.ಸಿದ್ದಲಿಂಗಸ್ವಾಮಿ ಸ್ನೇಹ ಬಳಗದ ವತಿಯಿಂದ ಏರ್ಪಡಿಸಿದ್ದ ಮೈತ್ರಾದೇವಿ ಯಡಿಯೂರಪ್ಪ ಪ್ರತಿಷ್ಠಾನದ ’ಡಾ.ರಾಜ್ ಕಪ್’ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ವಿಧ್ಯುಕ್ತ ಚಾಲನೆ ನೀಡಿದರು.ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ಸಜ್ಜಾದ ಯಡಿಯೂರಪ್ಪ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಅವರು ಬೌಲಿಂಗ್ ಮಾಡಲು  ಮುಂದಾದರು. ವೃತ್ತಿಪರ ಬ್ಯಾಟ್ಸ್‌ಮನ್‌ನಂತೆ ನಿಂತ ಸಿಎಂ, ಪುಟಿದು ಬರುತ್ತಿದ್ದ ಚೆಂಡಿಗೆ ಕರಾರುವಕ್ಕಾಗಿ ಉತ್ಸಾಹದಿಂದಲೇ ಬ್ಯಾಟ್ ಬೀಸಿದರು. ಆಫ್ ಸೈಡ್ ಮತ್ತು ಲೆಗ್ ಸೈಡ್ ಹೀಗೆ ಎರಡೂ ಕಡೆ ಬ್ಯಾಟ್ ಬೀಸುತ್ತಾ ಸಂಭ್ರಮ ಪಡುತ್ತಿದ್ದರು. ಸಿಎಂ ಅವರ ಬ್ಯಾಟಿಂಗ್ ವೈಖರಿಗೆ ಮಂತ್ರಿಮಂಡಲದ ಸಚಿವರುಗಳು ಮೂಕ ವಿಸ್ಮಿತರಾದರು.ಕ್ರೀಡಾಪಟುಗಳು ಹರ್ಷೋದ್ಗಾರ ಮಾಡುತ್ತಾ ಸಂಭ್ರಮಿಸಿದರೆ, ಸಿಎಂ ಬ್ಯಾಟಿಂಗ್ ದೃಶ್ಯಗಳನ್ನು ಸೆರೆ ಹಿಡಿಯಲು ಪತ್ರಿಕಾ ಛಾಯಾಗ್ರಾಹಕರು, ದೃಶ್ಯ ಮಾಧ್ಯಮದವರು ಮುಗಿಬಿದ್ದಿದ್ದರು. ಮತ್ತೊಂದು ಕಡೆ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು.ನಂತರ ಸಚಿವೆ ಶೋಭಾ ಕೂಡ ಬ್ಯಾಟ್ ಹಿಡಿದು ನುಗ್ಗಿ ಬರುತ್ತಿದ್ದ ಚೆಂಡಿಗೆ ಬ್ಯಾಟಿಂಗ್ ಮೂಲಕ ತಕ್ಕ ಉತ್ತರ ನೀಡಿದರು. ಶೋಭಾ ಅವರ ಬ್ಯಾಟಿಂಗ್ ಶೈಲಿಗೆ ನೆರದಿದ್ದ ಗಣ್ಯರು, ಕ್ರೀಡಾಪಟುಗಳು ಆಶ್ಚರ್ಯಪಟ್ಟರೆ, ಕೆಲವು ಅಭಿಮಾನಿಗಳು ಜಯಕಾರ ಕೂಗಿ ಕರತಾಡನ ಮಾಡಿದರು. ಶೋಭಾ ಬ್ಯಾಟಿಂಗ್‌ಗೆ ಯಡಿಯೂರಪ್ಪ ಬೌಲಿಂಗ್ ಮಾಡಲಿಲ್ಲ. ಶೋಭಾ ಬ್ಯಾಟಿಂಗ್ ಸೊಗಸನ್ನು ನೋಡಲೂ ಅವರು ಅಲ್ಲಿರಲಿಲ್ಲ.ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶೋಭಾ ಕರಂದ್ಲಾಜೆ, ಈ ಹಿಂದೆ ನಡೆದ ಶಾಸಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೆ. ಆದ್ದರಿಂದ ಕ್ರಿಕೆಟ್ ಆಡಿದ ಅನುಭವ ಇದೆ ಮತ್ತು ಕ್ರಿಕೆಟ್ ಮೇಲೆ ಪ್ರೀತಿಯೂ ಇದೆ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.