ಮಂಗಳವಾರ, ಜುಲೈ 14, 2020
25 °C

ಶೋಭಾ ವೆಂಕಟೇಶ್ ಜೀವಮಾನದ ರಂಗಸಾಧಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೋಭಾ ವೆಂಕಟೇಶ್ ಜೀವಮಾನದ ರಂಗಸಾಧಕಿಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ನೀಡುವ 2010-11ನೇ ಸಾಲಿನ ವಿವಿಧ ಪ್ರಶಸ್ತಿಗಳು ಪ್ರಕಟವಾಗಿದ್ದು, ಮಕ್ಕಳ ರಂಗಭೂಮಿ ‘ವಿಜಯನಗರ ಬಿಂಬ’ದ ಅಧ್ಯಕ್ಷೆ ಶೋಭಾ ವೆಂಕಟೇಶ್ ಅವರಿಗೆ ಜೀವಮಾನದ ರಂಗಸಾಧನೆ ಗೌರವ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ ರೂ 10 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.ರಂಗಭೂಮಿ ಅಭಿವೃದ್ಧಿಗೆ ಕೊಡುಗೆ ನೀಡಿದವರು ಹಾಗೂ ಸಂಸ್ಥೆಗಳಿಗೆ ಮಾಸ್ಟರ್ ಹಿರಣ್ಣಯ್ಯ ಅವರ ತಂದೆಯ ಹೆಸರಿನಲ್ಲಿ ನೀಡಲಾಗುವ ‘ಸುಸಂಸ್ಕೃತ ಹಾಸ್ಯಗಾರ ಕೆ. ಹಿರಣ್ಣಯ್ಯ ಪುರಸ್ಕಾರ’ ಈ ಬಾರಿ ರಂಗ ನಿರ್ದೇಶಕ ತಾವರೆಕೆರೆ ನಾಗರಾಜ್ ಅವರಿಗೆ ಸಂದಿದೆ. ಇದು 5 ಸಾವಿರ ನಗದು- ಫಲಕ ಒಳಗೊಂಡಿದೆ.ಬೆಂಗಳೂರಿನ ‘ಕನ್ನಡ ಭವನ’ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ ಅವರು, ‘ಪ್ರಶಸ್ತಿ ಪ್ರದಾನ ಸಮಾರಂಭವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇದೇ 25ರಂದು ನಡೆಯಲಿದೆ’ ಎಂದರು.ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳಿಗೆ ನೀಡುವ ‘ರಂಗಭೂಮಿ ಪುಸ್ತಕ ಪುರಸ್ಕಾರ’ ಈ ಸಾಲಿನಲ್ಲಿ ಬಸವರಾಜ ಬೆಂಗೇರಿ ಶಿರೂರ ಅವರು ಬರೆದ ‘ನಟಸಾರ್ವಭೌಮ ಎನ್. ಬಸವರಾಜ ಆತ್ಮಕಥನ’ ಕೃತಿಯ ಪಾಲಾಗಿದೆ. ಈ ಪ್ರಶಸ್ತಿ ರೂ 5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.‘ಯಾರಿಗೂ ಏಕಪಕ್ಷೀಯವಾಗಿ ಪ್ರಶಸ್ತಿ ಘೋಷಿಸಿಲ್ಲ, ಅಕಾಡೆಮಿಯಲ್ಲಿ ಹಾಗೆ ಮಾಡಲು ಸಾಧ್ಯವೂ ಇಲ್ಲ. ಎಲ್ಲವನ್ನೂ ಅಕಾಡೆಮಿಯ ಸದಸ್ಯರ ಜೊತೆ ಚರ್ಚಿಸಿಯೇ ತೀರ್ಮಾನ ಮಾಡಲಾಗಿದೆ. ಪುಸ್ತಕ ಪುರಸ್ಕಾರಕ್ಕೂ ವಿವಿಧ ಪತ್ರಿಕೆಗಳ ಮೂಲಕ ಅರ್ಜಿ ಆಹ್ವಾನಿಸಿದ್ದೆವು’ ಎಂದು ಅವರು ಉತ್ತರಿಸಿದರು. ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತಿರುವ ಗೌರವಧನ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.ರಾಜ್ಯದ ರಂಗಭೂಮಿಯ ಚಟುವಟಿಕೆಗಳ ಬಗ್ಗೆ ಕಳೆದ 55 ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಸಂಗ್ರಹಿಸಲಾಗಿದೆ. 10 ಸಾವಿರ ಪುಟಗಳಷ್ಟು ಮಾಹಿತಿ ಲಭ್ಯವಾಗಿವೆ, ಇವುಗಳನ್ನು ಡಿಜಿಟೈಸ್ ಮಾಡಲಾಗಿದೆ. ಮಹಿಳೆ, ಮಕ್ಕಳು ಮತ್ತು ಕಾಲೇಜು ರಂಗಭೂಮಿಯ ಕುರಿತು ಮಾಹಿತಿ ನೀಡುವ ಪ್ರತ್ಯೇಕ ಪುಸ್ತಕಗಳು ಸಿದ್ಧವಾಗುತ್ತಿವೆ ಎಂದು ಮಾಹಿತಿ ನೀಡಿದರು.ಪ್ರಶಸ್ತಿಗೆ ಆಯ್ಕೆ ಮಾಡುವಾಗ ಜಿಲ್ಲೆ ಮತ್ತು ವಿವಿಧ ಪ್ರಕಾರಗಳ ಪ್ರಾತಿನಿಧ್ಯದೆಡೆಗೆ ಗಮನ ನೀಡಲಾಗಿದೆ ಎಂದರು.

ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.