ಭಾನುವಾರ, ಮೇ 16, 2021
26 °C

ಶೌಚಕ್ಕಾಗಿ ಮಹಿಳೆಯರ ಪರದಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಪಟ್ಟಣದ ರಹೀಂ ನಗರದ ಮುಖ್ಯರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೇ ವ್ಯರ್ಥವಾಗುತ್ತಿದೆ.ಇಲ್ಲಿ ವಾಸಿಸುವ ಬಹುತೇಕ ಕೂಲಿ ಕಾರ್ಮಿಕ ಮಹಿಳೆಯರು ಶೌಚಕ್ಕೆ ಹೋಗದ ರೀತಿಯಲ್ಲಿ ಇಲ್ಲಿನ ಶೌಚಾಲಯ ಗಬ್ಬೆದ್ದು ಹೋಗಿದೆ. ಇದರಿಂದಾಗಿ ಮಹಿಳೆಯರು ಬಯಲು ಶೌಚಾಲಯಕ್ಕೆ ಮೊರೆ ಹೋಗಬೇಕಾದ ಸ್ಥಿತಿ ಎದುರಾಗಿದೆ.2009-10ನೇ ಸಾಲಿನ ಮುಖ್ಯಮಂತ್ರಿ ಅವರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ರೂ 5.56 ಲಕ್ಷ  ವೆಚ್ಚದಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಿಸಿರುವ ಇಲ್ಲಿನ ಶೌಚಾಲಯದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.ಶೌಚಾಲಯದ ಸುತ್ತ ವಾಸಿಸುವ ಕುಟುಂಬಗಳ ಪಾಡು ಮಾತ್ರ ಹೇಳತೀರದಾಗಿದೆ. ಕೊಳಚೆ ಪ್ರದೇಶ ಇದಾಗಿರುವುದರಿಂದ ತೆರೆದ ಚರಂಡಿ ನೀರಿನ ವಾಸನೆ, ಸೊಳ್ಳೆಗಳ ಕಾಟ ಒಂದೆಡೆಯಾದರೆ ಸಾರ್ವಜನಿಕ ಶೌಚಾಲಯದಿಂದ ಬರುವ ವಾಸನೆ ಮತ್ತೊಂದು ಕಡೆ ಸ್ಥಳೀಯರನ್ನು ರೋಸಿ ಹೋಗುವಂತೆ ಮಾಡಿದೆ. ಸರ್ಕಾರದ ಅನುದಾನ ಬಳಸಿಕೊಂಡು ನಿರ್ಮಿಸಿರುವ ಪಟ್ಟಣದ ಬಹುತೇಕ ಶೌಚಾಲಯಗಳು ಇದೇ ರೀತಿಯಲ್ಲಿ ಇರುವುದನ್ನು ಕಾಣಬಹುದಾಗಿದೆ. ಶೌಚಾಲಯದಿಂದ ಬರುವ ವಾಸನೆಯಿಂದ ಸ್ಥಳೀಯರು ನಲುಗುವಂತಾಗಿದೆ. 

ಲಕ್ಷಗಟ್ಟಲೆ ಹಣ ಖರ್ಚು ಮಾಡಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯಗಳು ಪುರಸಭೆಯವರ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಜನರಿಗೆ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಆಗುತ್ತಿಲ್ಲ ಎನ್ನುತ್ತಾರೆ ರಹೀಂ ನಗರದ ಮಹಿಳೆಯರು.ಶೌಚಾಲಯದ ಗುಂಡಿಯಲ್ಲಿ ತುಂಬಿರುವ ಗಲೀಜು ಸ್ವಚ್ಛ ಮಾಡಿ ಅದೆಷ್ಟೋ ದಿನಗಳು ಕಳೆದಿವೆ. ಕೊಳಚೆ ಪ್ರದೇಶದಲ್ಲಿ ಬದುಕುವ ಜನರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಎದ್ದು ಕಾಣಿಸುತ್ತಿದೆ. ಅದ್ದರಿಂದ, ನಮಗೆ ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ಇದರಿಂದಾಗಿ ಶೌಚಕ್ಕೆ ಹೋಗಲು ಪರದಾಡುವಂತಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.ಪಟ್ಟಣದ ಎಲ್ಲಾ ಸಾಮೂಹಿಕ ಶೌಚಾಲಯಗಳಲ್ಲೂ ನಿರ್ವಹಣೆ ಕೊರತೆ ಎದ್ದು ಕಾಣಿಸುತ್ತಿದೆ. ಇದಕ್ಕೆ ಪುರಸಭೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.