ಶ್ಯಾಮಭಟ್ ನೇಮಕಕ್ಕೆ ₹125 ಕೋಟಿ ಲಂಚ: ಶಾಸಕ ಶಿವನಗೌಡ ಆರೋಪ

ರಾಯಚೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಶ್ಯಾಮಭಟ್ ಅವರನ್ನು ನೇಮಿಸಿರುವುದರ ಹಿಂದೆ ₹125 ಕೋಟಿ ಲಂಚದ ವ್ಯವಹಾರ ನಡೆದಿದೆ. ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಹಣ ಹಂಚಿಕೆ ಆಗಿದೆ’ ಎಂದು ದೇವದುರ್ಗದ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ಯಾಮಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಮುಖ್ಯಮಂತ್ರಿ ಆದಿಯಾಗಿ ಯಾರು ಯಾರು ಎಷ್ಟೆಷ್ಟು ಹಣ ಪಡೆದಿದ್ದಾರೆ ಎಂಬುದು ಹೊರಬರಲಿದೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಅವರು ಹಣ ಪಡೆದಿಲ್ಲ ಎಂದು ಹೇಳುವುದಾದರೆ ಈ ಬಗ್ಗೆ ಕೇಂದ್ರ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.
‘ಶ್ಯಾಮಭಟ್ ಅವರು ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿದ್ದಾಗ ಎರಡು ಸಾವಿರ ನಿವೇಶನಗಳನ್ನು ಹನುಮಂತೇಗೌಡ ಅವರಿಗೆ ಮಂಜೂರು ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸಿದ ಆರೋಪ ಇದೆ’ ಎಂದರು.
‘ಶ್ಯಾಮಭಟ್ ಅವರ ನೇಮಕವನ್ನು ಪ್ರಶ್ನಿಸಿ ಹೈಕೋಟ್೯ಗೆಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಹಾಕಲಾಗುವುದು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.