ಭಾನುವಾರ, ಏಪ್ರಿಲ್ 11, 2021
32 °C

ಶ್ರಾವಣಕ್ಕೆ ಸಂಭ್ರಮಕ್ಕೆ ಸಜ್ಜಾದ ಹೂದೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನ ಕೆಲವು ರೈತರು ಶ್ರಾವಣ ಮಾಸವನ್ನು ಗಮನದಲ್ಲಿಟ್ಟುಕೊಂಡು ಚೆಂಡು ಹೂವಿನ ಗಿಡ ಬೆಳೆದಿದ್ದಾರೆ. ಬಹುತೇಕ ತೋಟಗಳಲ್ಲಿ ಗಿಡ ಮೊಗ್ಗಿನ ಹಂತದಲ್ಲಿದೆ. ಶ್ರಾವಣ ಪ್ರಾರಂಭದೊಂದಿಗೆ ಹೂವು ಕೊಯಿಲಿಗೆ ಬರುತ್ತದೆ.ಕಳೆದ ಒಂದೆರಡು ವರ್ಷಗಳಿಂದ ಚೆಂಡು ಹೂವಿಗೆ ಒಳ್ಳೆ ಬೆಲೆ ಸಿಗುತ್ತಿದೆ. ಅದರಲ್ಲೂ ಶ್ರಾವಣ, ಕಾರ್ತೀಕ ಮತ್ತು ದಸರಾ ಸಂದರ್ಭದಲ್ಲಿ ಹೂವಿನ ಬೆಲೆ ಗಗನಕ್ಕೇರುತ್ತದೆ. ಬೆಳೆದವರ ಬೊಗಸೆ ತುಂಬುತ್ತದೆ. ಮಧ್ಯವರ್ತಿಗಳ ಜೇಬು ದೊಡ್ಡದಾಗುತ್ತದೆ.ವಿಶೇಷ ಮಾಸಗಳು ಹಾಗೂ ದಿನಗಳಲ್ಲಿ ಮಲ್ಲಿಗೆ, ಕಾಕಡಾ, ಕನಕಾಂಬರದಂಥ ಹೂಗಳನ್ನು ಕೊಳ್ಳುವುದು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ. ಅಂಥ ಸಂದರ್ಭದಲ್ಲಿ ಬೆಲೆ ಹೆಚ್ಚೆನಿಸಿದರೂ ಚೆಂಡು ಹೂವು ನೆರವಿಗೆ ಬರುತ್ತದೆ. ದೇವರ ಉತ್ಸವ ಹಾಗೂ ಅಲಂಕಾರಗಳಿಗೂ ಚೆಂಡು ಹೂವನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಆದ್ದರಿಂದಲೇ ಅದಕ್ಕೆ ಬೇಡಿಕೆ ಹೆಚ್ಚಿದೆ.ಆಷಾಢ ಮಾಸದಲ್ಲಿ ದೀಪೋತ್ಸವಗಳನ್ನು ಹೊರತುಪಡಿಸಿದರೆ ಬೇರೆ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ ಸಹಜವಾಗಿಯೇ ಹೂವಿಗೆ ಬೇಡಿಕೆ ಕಡಿಮೆ ಇರುತ್ತದೆ. ಇದು ಬೆಲೆ ಇಳಿಕೆಗೆ ಕಾರಣವಾಗುತ್ತದೆ.ಮಳೆ ಹಿನ್ನಡೆಯಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಬಹಳಷ್ಟು ಕೊಳವೆ ಬಾವಿಗಳು ಬತ್ತಿಹೋಗಿವೆ. ನೀರಿನ ಲಭ್ಯತೆ ಇರುವವರು ಟೊಮೆಟೊಗೆ ಶರಣಾಗಿದ್ದಾರೆ. ಅಧಿಕ ಬಂಡವಾಳ ಹಾಕಲು ಸಾಧ್ಯವಾಗದ ರೈತರು ಕಡಿಮೆ ವೆಚ್ಚದ ಚೆಂಡು ಹೂವಿನ ಬೆಳೆ ಇಡಲು ಮುಂದಾಗುತ್ತಾರೆ.ಕೆಲವೊಮ್ಮೆ ತೋಟಗಾರಿಕಾ ಇಲಾಖೆ ಹೂವನ್ನು ಬೆಳೆಯಲು ಸಹಾಯಧನ ಕೊಡುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಕಡಿಮೆ ಸಂಖ್ಯೆಯಲ್ಲಾದರೂ ರೈತರು ಹೂವಿನ ಬೆಳೆಯ ಕಡೆ ವಾಲುತ್ತಿದ್ದಾರೆ. ಇದು ಹೆಚ್ಚಿನ ಸಂದರ್ಭಗಳಲ್ಲಿ ಲಾಭದಾಯಕವೂ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.