ಗುರುವಾರ , ಏಪ್ರಿಲ್ 22, 2021
27 °C

ಶ್ರೀಗಳ ನಡಿಗೆ ಕೃಷಿ ಕಡೆಗೆ ನ.17 ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕೃಷಿಯಿಂದ ವಿಮುಖರಾಗುತ್ತಿರುವ ರೈತರನ್ನು ಮತ್ತೆ ಕೃಷಿಯತ್ತ ಆಕರ್ಷಿತರನ್ನಾಗಿ ಮಾಡುವ ಉದ್ದೇಶವಿಟ್ಟುಕೊಂಡು “ಶ್ರೀಗಳ ನಡಿಗೆ ಕೃಷಿಯ ಕಡೆಗೆ~ ಎನ್ನುವ ಕೃಷಿ ಜ್ಞಾನ ಚಿಂತನಾ ಶಿಬಿರವನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಈಗಾಗಲೇ ನಾಡಿನ ಹಲವಾರು ಧಾರ್ಮಿಕ ಮುಖಂಡರು ಕೂಡ ಲಸಂಗಮ, ಬೆಳಗಾವಿಯಲ್ಲಿ ನಡೆಸಿದ ಶಿಬಿರಗಳಿಗೆ ಪೂರಕವಾಗಿ ಈ ಶಿಬಿರ ವನ್ನು ನಡೆಸಲಾಗುವುದು ಎಂದರು.ನ.17 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶಿಬಿರ ಆರಂಭವಾಗಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಯ 40ಕ್ಕೂ ಹೆಚ್ಚು ಮಠಾಧೀಶರು, ಕೃಷಿ ವಿವಿ, ತೋಟಗಾರಿಕೆ ವಿವಿ ಕುಲಪತಿಗಳು, ವಿಷಯ ತಜ್ಞರು, ಪ್ರಗತಿಪರ ಕೃಷಿಕರು, ಕೃಷಿ ಸಾಧಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಶೇ 70 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಗ್ರಾಮೀಣ ಭಾಗದ ಜನರು ಅನಾದಿ ಕಾಲದಿಂದಲೂ ಕೃಷಿಯನ್ನು ಆಧರಿಸಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆ, ಸಿಗದ ಶ್ರಮಕ್ಕೆ ತಕ್ಕ ಪ್ರತಿಫಲ, ಪ್ರಕೃತಿ ವಿಕೋಪ ಸೇರಿದಂತೆ ಹತ್ತು ಹಲವು ಕಾರಣಗಳಿಂದ ರೈತರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.ಯುವಕರು ಕೃಷಿಯ ಬಗ್ಗೆ ತಾತ್ಸಾರ ಭಾವನೆ ಬೆಳಸಿಕೊಂಡು ಜಮೀನುಗಳನ್ನು ಬೇರೆಯವರಿಗೆ ಕೊಟ್ಟೋ ಅಥವಾ ವೃದ್ಧ ತಂದೆ ತಾಯಿಗಳಿಗೆ ಬಿಟ್ಟು ಉದ್ಯೋಗ ಅರಸಿ ಪಟ್ಟಣ ಸೇರುತ್ತಿದ್ದಾರೆ. ಇದು ದೇಶದ ಆಹಾರ ಭದ್ರತೆಗೆ ಕೊಡಲಿ ಪೆಟ್ಟು ನೀಡಲಿದ್ದು, ಈ ಬೆಳವಣಿಗೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನು ಗಂಭೀರವಾಗಿ ಪರಿಗಣಿಸಬೇಕಿದೆ. ಅಷ್ಟೇ ಅಲ್ಲದೇ ಕೃಷಿಯನ್ನೆ ಮೂಲ ಉದ್ಯೋಗವನ್ನಾಗಿ ಪರಿವರ್ತಿಸುವುದಕ್ಕೆ ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಧಾರ್ಮಿಕ ಮುಖಂಡರು, ದಾರ್ಶನಿಕರು, ಕೃಷಿ ವಿಶ್ವವಿದ್ಯಾಲಯಗಳ ತಜ್ಞರು, ಕೃಷಿ ಮಿಷನ್, ಸಾವಯವ ಕೃಷಿ ಮಿಷನ್ ಅಧ್ಯಕ್ಷರು, ಕೃಷಿ ಇಲಾಖೆ ಕಾರ್ಯದರ್ಶಿಗಳು, ಆಯುಕ್ತರು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕ ರು ರೈತರ ಜತೆ ಗೂಡಿ ಅವರ ಅಹ ವಾಲುಗಳನ್ನು ಕೇಳುವುದರ ಜತೆಗೆ, ಅವರ ಸಮಸ್ಯೆಗಳಿಗೆ ಪರಿ ಹಾರವನ್ನು ಸೂಚಿ ಸಲು ವೇದಿಕೆ ಕಲ್ಪಿಸುವುದೇ ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ ಎಂದರು.ಕೃಷಿಯ ಸುಸ್ಥಿರತೆ ಸಂಬಂಧಿಸಿದಂತೆ ಹಲವಾರು ಹೊಸ ಹೊಸ ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಹಾಗೂ ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಅರಿವು ಮೂಡಿಸಲಾಗುವುದು, ಕೃಷಿ ವಂಚಿತ ಹಾಗೂ ಅಭಿರುಚಿ ಕಳೆದುಕೊಂಡ ಯುವಕರನ್ನು ಮತ್ತೆ ಕೃಷಿಯತ್ತ ತಿರುಗಿಸುವುದಕ್ಕೆ ಹೆಚ್ಚಿನ ಗಮನ ನೀಡಲಾಗುವುದು.ಶ್ರೀಮಠದಿಂದ ಕೃಷಿಯಲ್ಲಿ ಆಸಕ್ತಿ ಬೆಳೆಸುವ ತರಬೇತಿ ಶಿಬಿರಗಳನ್ನು ನಡೆಸುವುದು, ಶ್ರೀಮಠದ ಮೂಲಕವೇ ಉತ್ತಮ ತಳಿ ಬೀಜ, ಸಸಿಗಳನ್ನು ತಯಾರಿಸಿ ವಿತರಿಸುವುದು, ವಿಜ್ಞಾನಿಗಳು, ಪ್ರಗತಿಪರ ರೈತರು, ಅಧಿಕಾರಿಗಳು ಒಳಗೊಂಡಂತೆ ಕೃಷಿ ಕುರಿತು ಕಾಳಜಿ ಇರುವವ ಜತೆಯಲ್ಲಿ ಚಿಂತನ ಮಂಥನ ನಡೆಸಿ ಕೃಷಿ ನೀತಿ ರೂಪಿಸುವಲ್ಲಿ ಸರ್ಕಾರಕ್ಕೆ ಸಲಹೆ ಸೂಚನೆ ನೀಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗುವುದು ಎಂದು ಹೇಳಿದರು.ಅದರ ಜತೆಯಲ್ಲಿ ತಮ್ಮ ಸಂಸ್ಥೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ಕೃಷಿ ಜ್ಞಾನ ದಾಸೋಹ, ಬೀಜ, ಸಸಿಗಳ ಉತ್ಪಾದನೆ ಹಾಗೂ ಹಂಚಿಕೆ, ಕೃಷಿ ಅನುಭಾವ ಮಂಟಪ ಸ್ಥಾಪನೆ, ಕೃಷಿ ಚಿಂತನೆ ಪುಸ್ತಕ ಹಾಗೂ ಪ್ರಕಟಣೆಗಳ ಪ್ರಕಟ, ಕೃಷಿ ಜಾತ್ರಾ ಮಹೋತ್ಸವ ಆಚರಣೆ, ಸಾಧಕ ರೈತರಿಗೆ ಸನ್ಮಾನ, ಕೃಷಿ ಸಂಸ್ಥೆಗಳೊಂದಿಗೆ ಸಂಬಂಧ ವೃದ್ಧಿ, ಹೈನೋದ್ಯಮ, ಗೋಶಾಲೆಗಳ ಪ್ರಾರಂಭ, ಸಸ್ಯ ಸಂಕುಲ ಸಂರಕ್ಷಣೆ, ವನ್ಯ ಔಷಧಿ ಉದ್ಯಾನ ಸ್ಥಾಪನೆ, ಪಾರಂಪರಿಕ ಹಾಗೂ ಸಾಂಪ್ರಾದಾಯಿಕ ಕೃಷಿ ಜ್ಞಾನದ ದಾಖಲಾತಿ, ಬೆಳೆಗಾರರ ಸಂಘಟನೆ, ಮಾರುಕಟ್ಟೆ ಅವಕಾಶ ಸೇರಿದಂತೆ ಇನ್ನೂ ಅನೇಕ ವಿಷಯಗಳ ಮೇಲೆ ಜ್ಞಾನ ಚಿಂತನ ಶಿಬಿರ ಒತ್ತು ನೀಡಲಿದೆ ಎಂದು ಶ್ರೀಗಳು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಪೀಠದ ಅಧ್ಯಕ್ಷ ಪಿ.ಡಿ.ಶಿರೂರ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ, ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಹಳ್ಳಿಕೇರಿ ಹಾಗೂ ಬಿ.ಬಸವರಾಜಪ್ಪ ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.