ಭಾನುವಾರ, ಜನವರಿ 26, 2020
18 °C

ಶ್ರೀರಂಗಪಟ್ಟಣ: ಹಳ್ಳಿಯಲ್ಲೊಬ್ಬ ಮಂಡೇಲಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ದಕ್ಷಿಣ ಆಫ್ರಿಕಾದ ಹಿರಿಯ ನಾಯಕ ನೆಲ್ಸನ್‌ ಮಂಡೇಲಾ ಅವರ ಪ್ರಭಾವ ಹಳ್ಳಿಗಳಿಗೂ ವ್ಯಾಪಿಸಿದೆ. ಇದಕ್ಕೆ ಸಾಕ್ಷಿ ಚಳವಳಿಗಾರೊಬ್ಬರು ತಮ್ಮ ಮಗನಿಗೆ ’ಮಂಡೇಲಾ’ ಎಂಬ ಹೆಸರು ಇಟ್ಟಿದ್ದಾರೆ. ಈಗಲ್ಲ, 1995ರಲ್ಲಿಯೇ ಮಂಡೇಲಾ ಇವರ ಮನೆಯಲ್ಲಿ ಬೆಳೆದಿದ್ದಾನೆ. ಅವರ ಹೆಸರು ಚಿಂತನ್ ಮಂಡೇಲಾ.ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ದಲಿತ ಸಂಘರ್ಷ ಸಮಿತಿಯ ಹಿರಿಯ ಕಾರ್ಯಕರ್ತ ಎಂ. ಚಂದ್ರಶೇಖರ್‌, ತಮ್ಮ ಮೊದಲ ಮಗನಿಗೆ ಚಿಂತನ್‌ ಮಂಡೇಲಾ ಎಂದು ನಾಮಕರಣ ಮಾಡಿದ್ದಾರೆ.1995ರ ಮಾರ್ಚ್‌ 14ರಂದು ಹುಟ್ಟಿದ ಕುವರನಿಗೆ ಈಗ 19 ವರ್ಷ. ಚಿಂತನ್‌ ಮಂಡೇಲಾ ಸದ್ಯ ಮೈಸೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ವರ್ಣಭೇದ ನೀತಿಯ ವಿರುದ್ಧ ಹೋರಾಟ ನಡೆಸಿ, 27 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ ನೆಲ್ಸನ್‌ ಮಂಡೇಲಾ ಪರೋಕ್ಷವಾಗಿ ನಮ್ಮ ನೆಲದಲ್ಲಿ ಕೂಡ ಹೋರಾಟದ ಕಿಚ್ಚು ಹಚ್ಚಿದ್ದಾರೆ. ಅವರು ಆ ದೇಶದ ಅಧ್ಯಕ್ಷರಾದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘದ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಸಂಭ್ರಮ ಆಚರಿಸಿದ್ದೆವು.

ಆಗ ದಲಿತ ಮತ್ತು ರೈತ ಚಳವಳಿಗಳು ಈ ಭಾಗದಲ್ಲಿ ಪ್ರಬಲವಾ ಗಿದ್ದವು. 90ರ ದಶಕದಲ್ಲಿ ಮಂಡೇಲಾ ಅವರ ಕೀರ್ತಿ ಉತ್ತುಂಗದಲ್ಲಿತ್ತು. ಅಂತಹ ದಿನಗಳಲ್ಲಿ ನನ್ನ ಮಗ ಜನಿಸಿದ್ದರಿಂದ ಮಂಡೇಲಾ ಎಂದು ನಾಮಕರಣ ಮಾಡಿದ್ದೇನೆ. ಮಗಳಿಗೆ ತೆರೇಸಾ ಎಂದು ಹೆಸರಿಟ್ಟಿದ್ದೇನೆ’ ಎಂದರು ಚಂದ್ರಶೇಖರ್‌.‘ನನ್ನ ಹೆಸರು ಕೇಳಿದವರು ಅಚ್ಚರಿಯಿಂದ ನೋಡುತ್ತಾರೆ. ಸಮಾನತೆಗಾಗಿ ಹೋರಾಡಿದ ಮಂಡೇಲಾರ ಅರ್ಧ ಹೆಸರು ನನ್ನ ಹೆಸರಿನ ಜತೆ ಸೇರಿರುವುದು ಖುಷಿ ಕೊಡುತ್ತದೆ’ ಎಂಬುದು ಚಿಂತನ್‌ ಮಂಡೇಲಾ ಮಾತು.

ಪ್ರತಿಕ್ರಿಯಿಸಿ (+)