ಶುಕ್ರವಾರ, ಮಾರ್ಚ್ 5, 2021
27 °C

ಶ್ರೇಷ್ಠ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೇಷ್ಠ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳ ಸೃಷ್ಟಿ

ಬೆಂಗಳೂರು: `ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವದರ್ಜೆಯ ಪ್ರಾಧ್ಯಾಪಕರು ರೂಪುಗೊಳ್ಳದೇ ಹೋದರೆ ಉತ್ತಮ ವಿದ್ಯಾರ್ಥಿಗಳನ್ನು ನೀಡಲು ಸಾಧ್ಯವಿಲ್ಲ. ಭಾರತೀಯ ವಿದ್ಯಾಭವನವು ವಿಶ್ವದರ್ಜೆಯ ಪ್ರಾಧ್ಯಾಪಕರನ್ನು ರೂಪುಗೊಳಿಸುವತ್ತ ಹೆಜ್ಜೆ ಇಡಬೇಕು~ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಸಲಹೆ ನೀಡಿದರು.ಭಾರತೀಯ ವಿದ್ಯಾಭವನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಭವನದ ಅಮೃತಮಹೋತ್ಸವ ಮತ್ತು ಸಂಸ್ಥಾಪಕ ಡಾ.ಕೆ.ಎಂ. ಮುನ್ಷಿ ಅವರ 125ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ, `ವಿಶ್ವಕವಿ ಟ್ಯಾಗೋರ್ ಸ್ಥಾಪಿಸಿದ `ಶಾಂತಿನಿಕೇತನ~ ದಂತಹ ಶಿಕ್ಷಣ ಸಂಸ್ಥೆಯು ಆರಂಭದಲ್ಲಿದ್ದ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಮುನ್ಷಿ ಅವರು ಸ್ಥಾಪಿಸಿರುವ ವಿದ್ಯಾಭವನವು 75 ವರ್ಷಗಳ ನಂತರವೂ ದಿನಹೊಸ ಬಗೆಯ ಚಿಂತನೆಗೆ ಪ್ರೇರಣೆಯಾಗುತ್ತಿದೆ~ ಎಂದು ಬಣ್ಣಿಸಿದರು.ಕನ್ನಡಕ್ಕೆ ಅನುವಾದಗೊಂಡಿರುವ ಮುನ್ಷಿ ಅವರ 26 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿದ್ಯಾಭವನದ ಲೋಗೋವನ್ನು ಲೋಕಾರ್ಪಣೆ ಮಾಡಲಾಯಿತು. ಹಿರಿಯ ನಟಿ ಬಿ.ಸರೋಜಾ ದೇವಿ, ಅನುವಾದಕ ಪ್ರೊ.ಎ.ವಿ.ನರಸಿಂಹಮೂರ್ತಿ, ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಇತರರು ಇದ್ದರು.

`ಅತಂತ್ರದೆಡೆಗೆ ಹೆಜ್ಜೆ~

`ಭ್ರಷ್ಟಾಚಾರವನ್ನು ಮುಂದುವರಿಸುವ ಸಲುವಾಗಿಯೇ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿರುವ ಬೆಳವಣಿಗೆಯೇ ರಾಜ್ಯದಲ್ಲಿ ಬಿಜೆಪಿಯು ಅತಂತ್ರದಿಂದ ಅತಂತ್ರದೆಡೆಗೆ ತೆರಳುತ್ತಿದೆ ಎಂಬುದರ ಸೂಚಕ~ ಎಂದು ಸಚಿವ ವೀರಪ್ಪ ಮೊಯಿಲಿ ಅವರು ವಿಶ್ಲೇಷಿಸಿದರು.ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಬದಲಾವಣೆ ಬಿಜೆಪಿ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಆದರೆ ಅರ್ಹತೆಯನ್ನು ಬದಿಗಿಟ್ಟು ಜಾತಿಯನ್ನೇ ಬಂಡವಾಳ ಮಾಡಿಕೊಂಡು ಮುಖ್ಯಮಂತ್ರಿಯನ್ನು ಬದಲಾಯಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಒತ್ತು ನೀಡದ ಬಿಜೆಪಿ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ~ ಎಂದು ದೂರಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.