ಶುಕ್ರವಾರ, ಫೆಬ್ರವರಿ 26, 2021
20 °C

ಷೇರುಪೇಟೆ: ದೂರವಾದ ಐಪಿಒ ಬರ

ಕೆ. ಜಿ. ಕೃಪಾಲ್‌ Updated:

ಅಕ್ಷರ ಗಾತ್ರ : | |

ಷೇರುಪೇಟೆ: ದೂರವಾದ ಐಪಿಒ ಬರ

ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2015ನೆ ವರ್ಷವು ಷೇರುಪೇಟೆಯ ಪಾಲಿಗೆ ಭಾರಿ ಉತ್ತೇಜನಕಾರಿಯಾಗಿತ್ತು. ಪ್ರಾಥಮಿಕ ಮಾರುಕಟ್ಟೆಯಲ್ಲಿ ಸಾರ್ವಜನಿಕ ಆರಂಭಿಕ ಕೊಡುಗೆ (ಐಪಿಒ) ವಿತರಿಸುವಲ್ಲಿಯೂ ಉತ್ಸಾಹ ಕಂಡು ಬಂದಿದೆ. ಈ ವರ್ಷ ಬಿಡುಗಡೆಯಾದ ಐಪಿಒಗಳ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿಗೆ ಇದೆ. ಒಂದರ್ಥದಲ್ಲಿ ಬಂಡವಾಳ ಪೇಟೆಯಲ್ಲಿ ಈಗ ‘ಐಪಿಒ’ ಭರಾಟೆ ಕಂಡು ಬಂದಿದ್ದು, ನಾಲ್ಕೈದು ವರ್ಷಗಳ ಬರ ನೀಗಿದಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಷೇರುಗಳು ನೀಡಿಕೆ ಬೆಲೆಗಿಂತ ಕಡಿಮೆ ಬೆಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ಈ ವರ್ಷ ಬಿಡುಗಡೆಯಾದ ‘ಐಪಿಒ’ಗಳಲ್ಲಿ ಶೇ 56ರಷ್ಟು, ನೀಡಿಕೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ವಹಿವಾಟು ನಡೆಸುತ್ತಿವೆ. ಪುನರ್‌ಬಳಕೆ ಇಂಧನ, ಸಾರಿಗೆ, ಔಷಧ ತಯಾರಿಕೆ, ಎಲೆಕ್ಟ್ರಾನಿಕ್ಸ್‌ ಮತ್ತು ವಿಮಾನಯಾನ ಸಂಸ್ಥೆಗಳು ಕೂಡ ಈ ವರ್ಷ ಬಂಡವಾಳ ಸಂಗ್ರಹಿಸಲು ‘ಐಪಿಒ’ ಮೊರೆ ಹೋಗಿವೆ.ಮಾರುಕಟ್ಟೆ ಬಗ್ಗೆ ಹೂಡಿಕೆದಾರರಲ್ಲಿ  ವಿಶ್ವಾಸ ಮರಳಿ ತುಂಬುವಲ್ಲಿ ‘ಸೆಬಿ’ ಮಹತ್ವದ ಪಾತ್ರ ನಿರ್ವಹಿಸಿದೆ. ಹಲವಾರು ಸುಧಾರಣಾ ಕ್ರಮಗಳು, ಕಠಿಣ ಮತ್ತು ತ್ವರಿತಗತಿಯ ಜಾರಿ ಕ್ರಮಗಳಿಂದಾಗಿ ಹೂಡಿಕೆದಾರರು ಸೇರಿದಂತೆ ಬಂಡವಾಳ ಮಾರುಕಟ್ಟೆಯ ಎಲ್ಲ ಪಾಲುದಾರರಲ್ಲಿ ವಿಶ್ವಾಸ ಮೂಡಿಸುವಲ್ಲಿ ‘ಸೆಬಿ’ ಸರಿಯಾದ ಹಾದಿಯಲ್ಲಿ ಮುನ್ನಡೆದಿದೆ. ಷೇರು ನೀಡಿಕೆ ಅವಧಿ ಕೊನೆಗೊಂಡ ನಂತರ ಷೇರುಪೇಟೆಯಲ್ಲಿ ವಹಿವಾಟು ನಡೆಸುವುದನ್ನು 12 ರಿಂದ 6 ದಿನಗಳಿಗೆ ಇಳಿಸಲಾಗಿದೆ. ಇದು ‘ಐಪಿಒ’ ನೀಡಿಕೆಯಲ್ಲಿನ ವೆಚ್ಚವನ್ನೂ ತಗ್ಗಿಸಿದೆ. ಆದರೆ, ಚಿಲ್ಲರೆ ಹೂಡಿಕೆದಾರರಿಂದ ಈ ವರ್ಷವೂ ‘ಐಪಿಒ’ಗಳಿಗೆ ಉತ್ತೇಜಕರ ಪ್ರತಿಕ್ರಿಯೆ ದೊರೆತಿಲ್ಲ. ‘ಐಪಿಒ’ಗಳಿಗೆ ಸಂಬಂಧಿಸಿದ ಅಸಮರ್ಪಕ ಮಾಹಿತಿ  ಮತ್ತು ಷೇರುಪೇಟೆಯಲ್ಲಿನ ಅನಿರೀಕ್ಷಿತ ಏರಿಳಿತಗಳು ಅವರನ್ನು ದೂರ ಇರಿಸಿವೆ. ಇಲ್ಲಿ ಹೂಡಿದ ಹಣವನ್ನು ನಿರಂತರವಾಗಿ ಕಳೆದುಕೊಳ್ಳುತ್ತಿದ್ದರೆ ರಿಟೇಲ್‌ ಹೂಡಿಕೆದಾರರು ‘ಐಪಿಒ’ಗಳಲ್ಲಿ ಮತ್ತೆ ಹಣ ಹೂಡಲು ಸಹಜವಾಗಿಯೇ ಹಿಂಜರಿಯುತ್ತಾರೆ.2015ರ ವರ್ಷಾರಂಭದಿಂದ 41 ಕಂಪೆನಿಗಳು ಐಪಿಒ ಬಿಡುಗಡೆ ಮಾಡಲು ’ಸೆಬಿ’ ಅನುಮತಿ ಕೋರಿದ್ದವು. ಅವುಗಳ  ಪೈಕಿ 34 ಕಂಪೆನಿಗಳಿಗೆ ‘ಸೆಬಿ’ ಅನುಮತಿ ನೀಡಿತ್ತು. ಈ ವರ್ಷ ಐಪಿಒ ಮೂಲಕ ಸಂಗ್ರಹವಾದ ಮೊತ್ತವು 5 ವರ್ಷಗಳಲ್ಲಿನ ಅತ್ಯುತ್ತಮ ಸಾಧನೆಯಾಗಿದೆ. ಐಪಿಒಗಳ ಯಶಸ್ಸು ಪ್ರವರ್ತಕರ ದಕ್ಷತೆ, ವಹಿವಾಟಿನ ಗುಣಮಟ್ಟ ಮತ್ತಿತರ ಸಂಗತಿಗಳನ್ನು ಆಧರಿಸಿರುತ್ತದೆ.ಕಂಡಿದ್ದಷ್ಟೇ ಸತ್ಯ ಅಲ್ಲ, ದಕ್ಕಿದ್ದೇ ಸತ್ಯ.

ಯಾವುದೇ ಯೋಜನೆ, ಉದ್ಯಮ  ಆರಂಭಿಸಬೇಕಾದರೆ, ಅವುಗಳ ಕೇಂದ್ರ ಬಿಂದು ಜನಸಾಮಾನ್ಯರಾಗಿರುತ್ತಾರೆ. ಜನಸಾಮಾನ್ಯರಿಗೆ ಸಹಜವಾಗಿ ಉಪಯೋಗ ಆಗುವಂತಹುದಾದರೆ ಸ್ವಾಗತಾರ್ಹ. ಆದರೆ, ಇತ್ತೀಚಿನ ದಿನಗಳಲ್ಲಿ ಕೇವಲ ವ್ಯವಹಾರಿಕ ದೃಷ್ಟಿಯಿಂದ ಯೋಜನೆಗಳನ್ನು ತೇಲಿ ಬಿಡಲಾಗುತ್ತಿದ್ದು, ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ. ಈ ದಿಸೆಯಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿಸಲು ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಣ  ಸಂಸ್ಥೆಗಳು  ಪ್ರಯತ್ನಿಸುತ್ತಿವೆ.  ಕಾರ್ಪೊರೇಟ್ ವಲಯ ಸಹ ಗ್ರಾಹಕರಲ್ಲಿ, ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು ಶಿಬಿರಗಳನ್ನು, ಸಮಾವೇಶಗಳನ್ನು ಆಯೋಜಿಸಿ ತಜ್ಞರಿಂದ ಸೂಕ್ತ ಮಾರ್ಗದರ್ಶನ ಒದಗಿಸಲು ಪ್ರಯತ್ನಿಸುತ್ತಿವೆ.ಆರ್ಥಿಕ ಸಾಕ್ಷರತೆ ಎಂಬ ಬಿಸಿಲ್ಗುದುರೆಯು ಜನಸಾಮಾನ್ಯರಿಗೆ ಸಿಗದಂತಿದೆ. ಹಣ ಹೂಡಿಕೆ ಮಾಡುವ ಮುನ್ನ ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ಅರಿತು ನಿರ್ಧರಿಸಿರಿ ಎಂದು ತಜ್ಞರು ಉಪದೇಶಿಸುವುದು ಸಾಮಾನ್ಯವಾಗಿದೆ. ಷೇರು ಪೇಟೆಗಳಲ್ಲಿ ಹಣ ಹೂಡಿಕೆ ಮಾಡು ಮುನ್ನ ಅಪಾಯದ ಬಗ್ಗೆ ತಿಳಿದುಕೊಂಡಿರಬೇಕು. ಯಾರನ್ನೂ ಅನುಸರಿಸಬೇಡಿ ಎಂದು ಷೇರು ನಿಯಂತ್ರಣ ಮಂಡಳಿ (ಸೆಬಿ) ಎಚ್ಚರಿಸುತ್ತಲೇ ಇರುತ್ತದೆ.ಇಂತಹ ಸಲಹೆ  ಸಾಮಾನ್ಯವಾಗಿ ಎಲ್ಲಾ ಆರ್ಥಿಕ ಪೇಟೆಗಳಿಗೂ ಅನ್ವಯಿಸುತ್ತದೆಯಾದರೂ ಷೇರುಪೇಟೆಯ ದೃಷ್ಟಿಯಿಂದ ಇದು ಸುಲಭವಾಗಿ ಪಾಲನೆಯಾಗುವುದಿಲ್ಲ. ಕಾರಣ ಇಲ್ಲಿನ ರೀತಿ ನೀತಿಗಳು, ವಹಿವಾಟಿನ ಶೈಲಿಗಳು ದಿನೇ ದಿನೇ ಬದಲಾಗುತ್ತಿವೆ. ಯಾವುದೇ ಬೆಳವಣಿಗೆ ವಿಶ್ಲೇಷಿಸುವ ರೀತಿಗಳು ವೈವಿಧ್ಯಮಯವಾಗಿರುತ್ತವೆ. ಇಂತಹ ಬೆಳವಣಿಗೆಗೆ  ಪೇಟೆ ಇದೇ ರೀತಿಯಲ್ಲಿ ಸ್ಪಂದಿಸುತ್ತದೆ ಎಂದು ನಿಖರವಾಗಿ ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಷೇರುಪೇಟೆಗಳು ವರ್ತಿಸುತ್ತವೆ.ಅಕಾಡೆಮಿಕ್ ಪುಸ್ತಕಗಳನ್ನು ಮೀರಿ ಬೆಳೆದು ನಿಂತಿರುವ ಪೇಟೆಗಳಲ್ಲಿ ಘಟನೆಯ ನಂತರದಲ್ಲಿ ಕಾರಣಗಳನ್ನು ವಿಶ್ಲೇಷಿಸಬಹುದಾಗಿದೆ. ಇದಕ್ಕೆ ಮುಖ್ಯ ಕಾರಣ ಈಗಿನ ಪೇಟೆಗಳಲ್ಲಿ ಒತ್ತಡ ನಿಯಂತ್ರಿಸುವ  ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಕ್ಷೀಣಿಸುತ್ತಿದೆ,  ಸಾಂಸ್ಥಿಕ ಹಣಕಾಸು ಸಂಸ್ಥೆಗಳ, ವಿದೇಶಿ ಹೂಡಿಕ ಸಂಸ್ಥೆಗಳ ಚಟುವಟಿಕೆ ಹೆಚ್ಚುತ್ತಿದೆ.ಹೊಸ ಹೂಡಿಕೆ, ಮ್ಯುಚುವಲ್ ಫಂಡ್‌, ಕಾರ್ಪೊರೇಟ್ ಫಂಡ್ಸ್, ಇ ಟಿ ಎಫ್ ಫಂಡ್ಸ್, ಪಾರ್ಟಿಸಿಪೇಟರಿ ನೋಟ್ಸ್ ಮೂಲಕ ಪೇಟೆಯೊಳಗೆ ಹರಿದುಬರುತ್ತಿರುವ ಹಣ ಹೆಚ್ಚಾಗಿದ್ದು ಹೂಡಿಕೆ ಚಟುವಟಿಕೆಯ ರಭಸ ಅತಿ ವೇಗವಾಗಿದೆ. ಇದು ಪೇಟೆಯಲ್ಲಿ ಹೆಚ್ಚಿನ ಡೋಲಾಯಮಾನ ಸೃಷ್ಟಿಸುತ್ತಿದೆ. ಇದು ಹೊರನೋಟಕ್ಕೆ ಚಿಲ್ಲರೆ  (ರಿಟೇಲ್‌) ಹೂಡಿಕೆದಾರರನ್ನು ದೂರ ಇಟ್ಟಿದೆ ಎನ್ನಬಹುದು.  ಆದರೆ, ಇದು ಸೃಷ್ಟಿಸಿಕೊಡುತ್ತಿರುವ ಅವಕಾಶಗಳಿಂದ ಸಣ್ಣ ಹೂಡಿಕೆದಾರರು ವಂಚಿತರಾಗುತ್ತಿದ್ದಾರೆ.  ಷೇರುಪೇಟೆಯ ಚಟುವಟಿಕೆಯ ಪರಿ ಈಗ ಬಹಳಷ್ಟು ಬದಲಾಗಿದೆ.ಬೆಳಿಗ್ಗೆ  9.15 ರಿಂದ ಸಂಜೆ 3.30 ರ ವರೆಗೂ ಚಟುವಟಿಕೆಗೆ ತೆರೆದಿರುವುದರಿಂದ ದಿನದ ವಹಿವಾಟಿನಲ್ಲಿ  ಪ್ರಭಾವಿ ಅಂಶಗಳು ಹೆಚ್ಚು ಹೆಚ್ಚು ಸೃಷ್ಟಿಯಾಗುತ್ತಿರುತ್ತವೆ. ಈ ಕಾರಣದಿಂದಾಗಿ ಹೆಚ್ಚಿನ ಏರಿಳಿತಗಳು ಉಂಟಾಗಿ ಹತ್ತಾರು ಅವಕಾಶಗಳು ತೇಲಿ ಬರುತ್ತವೆ, ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಸಾಮಾನ್ಯವಾಗಿ ಹೂಡಿಕೆದಾರರು ಈ ಏರಿಳಿತಗಳ ಹಿಂದಿನ ಕಾರಣದ ಆನ್ವೇಷಣೆಗೆ ತೊಡಗುತ್ತಾರೆ, ಅವಕಾಶ ವಂಚಿತರಾಗುತ್ತಾರೆ.ಈಗ ಹೆಚ್ಚಿನ ನಿಯಂತ್ರಣಗಳಿದ್ದರೂ ಗಾಳಿ ಸುದ್ದಿ, ಊಹಾಪೋಹಗಳು ತೇಲಿ ಬರುವುದರಿಂದ ಹೆಚ್ಚಿನ ಏರುಪೇರು ಉಂಟಾಗುತ್ತದೆ. ಇಂತಹ ಸುದ್ದಿಗಳ ಬಗ್ಗೆ ಕಂಪನಿಯ ಅಭಿಪ್ರಾಯವನ್ನು  ಪೇರುಪೇಟೆಗಳು ಕೇಳುತ್ತವೆ. ಅದಕ್ಕೆ ಕಂಪೆನಿಗಳು ಸಮಜಾಯಿಷಿ ನೀಡುತ್ತವೆ. ಅಷ್ಟರಲ್ಲಿ ಷೇರಿನ ಬೆಲೆಗಳು ಏರಿಕೆ ಅಥವಾ ಇಳಿಕೆಯಿಂದ ಹಿಂದಿರುಗಿರುತ್ತವೆ. ಷೇರುಪೇಟೆಯಲ್ಲಿ ಚಟುವಟಿಕೆಯು ಜೂಜಾಟ ಎನ್ನುವವರೂ ಉಂಟು.  ಆದರೆ ಇದು ಹೂಡಿಕೆದಾರರು ನಡೆಸುವ ಚಟುವಟಿಕೆಯ ರೀತಿಯನ್ನು ಅವಲಂಬಿಸಿರುತ್ತದೆ. ಹೂಡಿಕೆಯಾಗಿ  ತೊಡಗಿಸಿಕೊಂಡವರಿಗೆ ಇದು  ಜೂಜಾಟವಲ್ಲ. ಕಾರಣ ಇಲ್ಲಿ ಹೂಡಿಕೆ ಮಾಡಿದ ಷೇರಿನ ಬೆಲೆ  ಹೆಚ್ಚಾಗುವವರೆಗೂ ಹೂಡಿಕೆ ಮುಂದುವರೆಸಬೇಕಾಗುತ್ತದೆ. ಈಗಿನ ಸಂವೇದಿ ಸೂಚ್ಯಂಕ ಮತ್ತು ಉಪ ಸೂಚ್ಯಂಕಗಳು ಈಗಾಗಲೇ ದಾಖಲೆಯ ಮಟ್ಟಕ್ಕೆ ಚಿಮ್ಮಿರುವುದರಿಂದ ದೀರ್ಘ ಕಾಲೀನ ಹೂಡಿಕೆ ಎಂಬ ಭ್ರಮೆ ಸರಿಯಲ್ಲ. ಮಾಧ್ಯಮಗಳಲ್ಲಿ ಬರುವ ವಿಶ್ಲೇಷಣೆಗಳು, ವಿಶ್ಲೇಷಕರ ಅಭಿಪ್ರಾಯವೇ ಹೊರತು ವೇದ ವಾಕ್ಯವಲ್ಲ.  ಕೆಲವು ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಾಗಬಹುದು, ಅಂತರರಾಷ್ಟ್ರೀಯ ಮಟ್ಟದಲ್ಲಾಗಿರಬಹುದು, ಸರಕಾರದ, ನಿಯಂತ್ರಕರ ಮಟ್ಟದಲ್ಲಾಗಬಹುದು ಇವು ಯಾರ ಊಹೆಗೂ ನಿಲುಕದೆ ತಮ್ಮ ಪ್ರಭಾವ ಬೀರಿ ಏರಿಳಿತಕ್ಕೆ ಕಾರಣವಾಗುತ್ತವೆ.ಸಾಮಾನ್ಯ ಹೂಡಿಕೆದಾರರ ಆಕರ್ಷಿಸಿದ ‘ಐಪಿಒ’

ಜಾಗತೀಕರಣದ ಮುಂಚಿನ ದಿನಗಳಲ್ಲಿ   ಆರಂಭಿಕ ಸಾರ್ವಜನಿಕ ಕೊಡುಗೆಗಳಲ್ಲಿ (ಐಪಿಒ)  ಅರ್ಜಿ ಹಾಕಿದವರಿಗೆ ಷೇರು ವಿತರಣೆ ಆಯಿತೆಂದರೆ ಅದು ಒಂದು ರೀತಿಯ ಲಾಟರಿ ಎಂಬಂತಿತ್ತು.  ಆಗ ಐಪಿಒಗಳ ಮೂಲಕ ವಿತರಿಸಬೇಕಾದರೆ ಆ ಕಂಪೆನಿಗಳು ಕಂಟ್ರೋಲರ್ ಆಫ್ ಕ್ಯಾಪಿಟಲ್ ಆಫ್ ಇಷ್ಯೂಸ್  ( ಸಿಸಿಐ) ಅನುಮತಿ ಪಡೆಯಬೇಕಿತ್ತು. ಅವರು ಎಂತಹ ಉತ್ತಮ ಕಂಪನಿಯಾದರೂ ವಿತರಿಸಬೇಕಾದ ಪ್ರೀಮಿಯಂ ಅನ್ನು  ಸೀಮಿತಗೊಳಿಸಿ ಅರ್ಜಿದಾರರಿಗೆ ಅನುಕೂಲಕರವಾಗುವಂತೆ ಮಾಡುತ್ತಿದ್ದರು. ಇದು ಹೆಚ್ಚಿನವರನ್ನು  ಪ್ರಾಥಮಿಕ ಮಾರುಕಟ್ಟೆ ಕಡೆ ಆಕರ್ಷಿಸಿತು. ಹೀಗಾಗಿ ಐಪಿಒ ವಿತರಣೆ  ಆಯಿತೆಂದರೆ ಲಾಭ ಖಚಿತ ಎನ್ನುವಂತಿತ್ತು.ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿದಾಗ  ಆ ಷೇರು ಚಟುವಟಿಕೆ ಭರಿತವಾಗುತ್ತಿತ್ತು. ಆದರೆ ಈಗ ಪೇಟೆಯಲ್ಲಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿರುವುದರಿಂದ ಬೇಡಿಕೆ ಆಧಾರಿತವಾದ ವ್ಯವಸ್ಥೆ ಜಾರಿಯಾಗಿದೆ. ಇಲ್ಲಿ ಷೇರು ವಿತರಣೆಯ ಬೆಲೆಯ ಅಂತರವನ್ನು ಪ್ರಕಟಿಸಿ ಆ ಮಿತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯಾವ ದರದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೋ ಆ ಬೆಲೆಗೆ ವಿತರಣೆ ಬೆಲೆಯೆಂದು ನಿಗದಿ ಪಡಿಸಲಾಗುತ್ತಿದೆ.ಸಾಮಾನ್ಯವಾಗಿ ವಿತರಣೆ ಬೆಲೆಯನ್ನು ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಅನುಕೂಲಕರವಾಗಿರುವಂತೆ ನಿಗದಿ ಪಡಿಸಲಾಗುವುದು. ಇದು ಮರ್ಚಂಟ್ ಬ್ಯಾಂಕರ್‌ಗಳ ಸಹಯೋಗದೊಂದಿಗೆ ನಡೆಯುವುದು.  ‘ಐಪಿಒ’ ವಿತರಣೆಗೆ ‘ಸೆಬಿ’ಗೆ ಸಲ್ಲಿಸಿ ಅನುಮತಿ ಪಡೆಯಲಾಗುವುದಾದರೂ, ವಿತರಣೆಯ ಬೆಲೆಯ ಬಗ್ಗೆ ‘ಸೆಬಿ’ ಗಮನಹರಿಸುವುದಿಲ್ಲ. ಅದು ಕೇವಲ ವಿತರಣೆಯ ಬಗ್ಗೆ, ಆಂತರಿಕ ವಿಚಾರಗಳನ್ನು, ನಿಯಮಗಳ ಪಾಲನೆಯ ಬಗ್ಗೆ ಮಾತ್ರ ಪರಿಶೀಲಿಸುವುದು. ಷೇರು ವಿತರಣೆ ಬೆಲೆಯು ಯೋಗ್ಯವೇ ಎಂಬುದನ್ನು ಅರ್ಜಿದಾರರ ನಿರ್ಧಾರಕ್ಕೆ ಬಿಡಲಾಗಿದೆ.ಈ ರೀತಿಯ ಬದಲಾವಣೆಯು ಹೂಡಿಕೆದಾರರಿಗೆ ಮನವರಿಕೆಯಾಗುವಷ್ಟರಲ್ಲಿ ಅನೇಕ ಮದ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು ಕೊಳ್ಳೆ ಹೊಡೆದು ಸಣ್ಣ ಹೂಡಿಕೆದಾರರನ್ನು ಬಲಿಪಶುಗಳನ್ನಾಗಿಸುತ್ತವೆ. ಐಪಿಒಗಳಲ್ಲಿ ಹಣ ಹೂಡಿಕೆ ಮಾಡುವಾಗ ಸಾಮಾನ್ಯ ಹೂಡಿಕೆದಾರರು ಕಂಪೆನಿ ಆಡಳಿತ ಮಂಡಳಿ, ಅವುಗಳ ಚಟುವಟಿಕೆ, ವಹಿವಾಟಿನ ಗಾತ್ರ  ಮುಂತಾದ ಮಾಹಿತಿಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು.

*

ಪ್ರಾಥಮಿಕ ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡರೆ ರಿಟೇಲ್‌ ಹೂಡಿಕೆದಾರರು ಮತ್ತೆ ಈ ಕಡೆ ಮುಖ ಮಾಡುವುದಿಲ್ಲ.

-ಯು. ಕೆ. ಸಿನ್ಹಾ, ಸೆಬಿ ಅಧ್ಯಕ್ಷ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.