ಭಾನುವಾರ, ಜುಲೈ 25, 2021
22 °C
ಕೇದಾರನಾಥ ಅರ್ಚಕ ವಾಗೀಶ ಪ್ರತಿಕ್ರಿಯೆ

`ಸಂಕಲ್ಪ ಪೂರೈಸಿಯೇ ಊರಿಗೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ದೇವರ ಉತ್ಸವ ಮೂರ್ತಿಯನ್ನು ಕಟ್ಟಳೆಯೊಳಗೆ ಪಡೆಯುವ ಮೊದಲು ಏನೇ ಸಂಕಷ್ಟ ಎದುರಾದರೂ ಅದನ್ನು ನಿಭಾಯಿಸುವುದಾಗಿ ಸಂಕಲ್ಪ ನೆರವೇರಿಸುತ್ತೇವೆ. ಈಗ ಅದನ್ನು ಈಡೇರಿಸಿಯೇ, ದೀಪಾವಳಿ ವೇಳೆ ಊರಿಗೆ ಹಿಂತಿರುಗುತ್ತೇನೆ' ಎಂದು ಉತ್ತರಾಖಂಡದ ಪ್ರಸಿದ್ಧ ಕ್ಷೇತ್ರ ಕೇದಾರನಾಥ ದೇಗುಲದ ಪ್ರಧಾನ ಅರ್ಚಕ ವಾಗೀಶ ಲಿಂಗಾಚಾರ್ಯ ತಿಳಿಸಿದ್ದಾರೆ.ರುದ್ರಪ್ರಯಾಗ ಜಿಲ್ಲೆಯ ಉಕ್ಕಿಮಠದಿಂದ (ತಾಲ್ಲೂಕಿನ ಹೆಸರೂ ಉಕ್ಕಿಮಠ) `ಪ್ರಜಾವಾಣಿ' ಜತೆ ಮಂಗಳವಾರ ಅವರು ದೂರವಾಣಿಯಲ್ಲಿ ಮಾತನಾಡಿದರು. 60 ಕಿ.ಮೀ. ದೂರದಲ್ಲಿರುವ ಕೇದಾರನಾಥ ಮಂದಿರ ಕೂಡ ಇದೇ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತದೆ.`ಉತ್ಸವ ಮೂರ್ತಿಯನ್ನು ಕೇದಾರನಾಥ ದೇವಸ್ಥಾನದಿಂದ ಗುಪ್ತಕಾಶಿಗೆ, ಅಲ್ಲಿಂದ ಉಕ್ಕಿಮಠಕ್ಕೆ ತರಲಾಗಿದೆ. ದೇವರ ಗದ್ದುಗೆ ಇಲ್ಲಿಯೇ ಇದ್ದು, ಸೋಮವಾರದಿಂದ ಪೂಜೆ ಕೂಡ ಆರಂಭಿಸಿದ್ದೇವೆ. ಈ ಸಮಯದಲ್ಲಿ ಗದ್ದುಗೆಯಲ್ಲಿ ಪೂಜೆ ನಡೆಯುವುದಿಲ್ಲ. ಆದರೆ, ಪ್ರಕೃತಿ ವಿಕೋಪದ ಕಾರಣ ಬೇರೆ ದಾರಿಯಿರಲಿಲ್ಲ. ಯಾವುದೇ ಕಾರಣಕ್ಕೆ ಪೂಜೆ ನಿಲ್ಲಿಸುವಂತಿಲ್ಲ. ದೀಪಾವಳಿ ಬಳಿಕ ಕೇದಾರನಾಥ ದೇಗುಲದ ಪೂಜಾ ಕೈಂಕರ್ಯದ ಹೊಣೆ ನಿಯಮದಂತೆ ಮತ್ತೊಬ್ಬ ಅರ್ಚಕರಿಗೆ ಸಲ್ಲುತ್ತದೆ. ಅಲ್ಲಿಯವರೆಗೆ ಪರಂಪರೆ ಮುರಿದು ಬರುವುದು ಸರಿಯಲ್ಲ' ಎಂದು ಹರಿಹರ ತಾಲ್ಲೂಕಿನ ಭಾನುವಳ್ಳಿಯ ವಾಗೀಶ ವಿವರಿಸಿದರು.ಈಗ ಕೇದಾರನಾಥಕ್ಕೆ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ. ಅಲ್ಲಿದ್ದವರಲ್ಲಿ ಶೇ 95 ರಷ್ಟು ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಕೇದಾರನಾಥ ಸಮೀಪದ ಗೌರಿಕುಂಡ ಪ್ರದೇಶಕ್ಕೆ ಮಂಗಳವಾರ  ಹೆಲಿಕಾಪ್ಟರ್ ಬಂದಿದ್ದರೂ ಬೆಳಿಗ್ಗೆಯಿಂದ ಮೋಡದ ವಾತಾವರಣ ಇರುವ ಕಾರಣ ಹಾರಾಟ ನಡೆಸಿಲ್ಲ' ಎಂದರು.ಉಕ್ಕಿಮಠಕ್ಕೆ ಇತ್ತೀಚಿನ ಪ್ರವಾಹದಿಂದ ಸಮಸ್ಯೆಯಾಗಿಲ್ಲ. ಆದರೆ ಸ್ವಲ್ಪ ದೂರದಲ್ಲಿರುವ ರುದ್ರ ಪ್ರಯಾಗ- ಕೇದಾರನಾಥ ಹೆದ್ದಾರಿ ಸಂಪರ್ಕ ಕಳೆದುಕೊಂಡಿದೆ ಎಂದು ಓಂಕಾರೇಶ್ವರ ದೇವಸ್ಥಾನದ ಅರ್ಚಕ, ದಾವಣಗೆರೆ ಮೂಲದ ಗಂಗಾಧರ ಆಚಾರ್ಯ ತಿಳಿಸಿದರು.ಇದೇ ವೇಳೆ, ದೇವಸ್ಥಾನದಲ್ಲಿ ಸ್ವಚ್ಛತೆಯ ಕೆಲಸ ಮಾಡಲು ಅನುಮತಿ ನೀಡುವಂತೆ `ಬದರಿನಾಥ-ಕೇದಾರನಾಥ ಟೆಂಪಲ್ ಟ್ರಸ್ಟ್' ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ದೇವಸ್ಥಾನದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.