ಸೋಮವಾರ, ಜನವರಿ 20, 2020
21 °C

ಸಂಗೀತದ ಸಾಧನಕೇರಿ ಕಲಕೇರಿ

–ಯೋಗೇಶ್‌ ಮಾರೇನಹಳ್ಳಿ Updated:

ಅಕ್ಷರ ಗಾತ್ರ : | |

ಮ್ಮೆ ಮೇಯಿಸಿ ಜೀವ ಕಂಡುಕೊಳ್ಳಬೇಕಾಗಿದ್ದ ಶಿವಾಜಿ, ರಸ್ತೆ ಬದಿಯ ಟೆಂಟ್‌ನಲ್ಲಿ ಜೀವನ ಕಂಡುಕೊಳ್ಳಬೇಕಾಗಿದ್ದ ರಮೇಶ, ಹನ್ನೊಂದು ವರ್ಷ ತುಂಬುವ ತನಕವೂ ಶಾಲೆಯ ಮುಖವನ್ನೇ ಕಾಣದ ಸಂಗೀತಾ ಎಲ್ಲರೂ ಈಗ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನಿಪುಣರು.

ಇದರ ಜೊತೆಗೆ ಒಳ್ಳೆಯ ಸಾಮಾನ್ಯ ಶಿಕ್ಷಣವೂ ಇವರಿಗೆ ದೊರೆತಿದೆ. ಇದು ಕಲಕೇರಿಯ ಕಾಡಂಚಿನಲ್ಲಿ ಮ್ಯಾಥ್ಯೂ ಮತ್ತು ಅಗಾಥಾ ನಡೆಸುತ್ತಿರುವ ಸಂಗೀತ ಶಾಲೆಯ ಮಹಿಮೆ. ಅನೇಕ ಬದುಕುಗಳ ಶ್ರುತಿ ಸರಿಪಡಿಸಿದ ಖ್ಯಾತಿ ಈ ಶಾಲೆಗಿದೆ. ಧಾರವಾಡದಿಂದ 20 ಕಿ.ಮೀ ದೂರದ ಕಲಕೇರಿ ಎಂಬ ಹಳ್ಳಿಯ ಕಾಡಂಚಿನ ಬೆಟ್ಟದ ಮೇಲೆ ರಚಿತವಾಗಿರುವ ‘ಕಲಕೇರಿ ಸಂಗೀತ ವಿದ್ಯಾಲಯ’ ಅದು.‘ಭಾರತೀಯ ಸಂಗೀತ’ ಪರಿಕಲ್ಪನೆಯ ಮೇಲೆ ವಿದೇಶಿ ದಂಪತಿ ಕಟ್ಟಿರುವ ಶಾಲೆ. ಭಾರತ ದೇಶ ಮತ್ತು ಭಾರತೀಯ ಸಂಗೀತವನ್ನು ಪ್ರೀತಿಸುವ ಕೆನಡಾದ ಮ್ಯಾಥ್ಯೂ ಫೋರ್ಟಿಸ್‌ ಮತ್ತು ಫ್ರಾನ್ಸ್‌ನ ಅಗಾಥಾ ದಂಪತಿಯ ಕನಸಿನ ಆಲಯ ಈ ‘ಕಲಕೇರಿ ಸಂಗೀತ ವಿದ್ಯಾಲಯ’.ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ನೀಡುತ್ತಿರುವ ಈ ಶಾಲೆ ಕಳೆದ 11 ವರ್ಷಗಳಿಂದ ಸದ್ದಿಲ್ಲದೆ ತನ್ನ ಕಾಯಕ ಮಾಡುತ್ತಿದೆ. 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ವಸತಿ ಸಹಿತ ಶಾಲಾ ಶಿಕ್ಷಣ ನೀಡುತ್ತಿದ್ದು, ಇಲ್ಲಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಮೀಪದ ಹುಬ್ಬಳ್ಳಿ–ಧಾರವಾಡ ಕಾಲೇಜುಗಳಿಗೆ ಕಳಿಸುತ್ತಿದೆ. ಎಲ್ಲ ಖರ್ಚನ್ನು ವಿದ್ಯಾಲಯವೇ ನೋಡಿಕೊಳ್ಳುತ್ತಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಬೆಟ್ಟದ ಮೇಲೆ ಬಿದಿರು ಬೊಂಬುಗಳಿಂದ ನಿರ್ಮಿಸಿರುವ ಕಾಟೇಜ್‌ಗಳಲ್ಲಿ ನೆಲೆಸಿದ್ದಾರೆ.

ಬಂಜಾರಾ ಕಾಲೊನಿಯ ವಿದ್ವನ್ಮಣಿ

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ. ಮ್ಯೂಸಿಕ್‌ ಕಲಿಯುತ್ತಿರುವ ಹುಬ್ಬಳ್ಳಿ ಬಂಜಾರ ಕಾಲೊನಿಯ ರಮೇಶ, ಯಾವತ್ತೂ ತಬಲಾ ನುಡಿಸುವ ಕನಸು ಕಂಡವರಲ್ಲ. ತಲೆಯ ಮೇಲೆ ಒಂದು ಸೂರು ಅವರ ಕುಟುಂಬಕ್ಕಿರಲಿಲ್ಲ. ರಸ್ತೆ ಬದಿಯ ಟೆಂಟ್‌ನಲ್ಲೇ ಬದುಕು ಕಂಡಿದ್ದ ರಮೇಶ್‌ಗೆ ಶಾಲೆ ಎನ್ನುವುದು ಕನಸಿನ ಮಾತಾಗಿತ್ತು. ಅವರು ಕಲಕೇರಿ ಸಂಗೀತ ವಿದ್ಯಾಲಯಕ್ಕೆ ಬಂದ ನಂತರ ಅವರ ಬದುಕು ಬದಲಾಯಿತು. ಅನ್ನ ಮತ್ತು ವಿದ್ಯೆಯ ಆಸೆಯಿಂದ ರಮೇಶ್‌ ಇಲ್ಲಿಗೆ ಬಂದರು.

ನಂತರ ಬೆಟ್ಟದ ಮೇಲಿನ ಪ್ರಶಾಂತ ವಾತಾವರಣ ರಮೇಶ್‌ರನ್ನು ತಬಲಾದತ್ತ ಸೆಳೆಯಿತು. ಹತ್ತು ವರ್ಷ ಶ್ರದ್ಧೆಯಿಂದ ತಬಲಾ ಕಲಿತ ರಮೇಶ್‌ ಈಗ ಯುವ ವಿದ್ವನ್ಮಣಿ. ದಿಗ್ಗಜ ಸಂಗೀತಗಾರರಿಗೆ  ಸಾಥ್‌ ಕೊಟ್ಟಿದ್ದಾರೆ. ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ ಮುಂತಾದೆಡೆಗಳಲ್ಲಿ ತಬಲಾ ಜೊತೆ ಸಾಗಿದ್ದಾರೆ.ಪುಟ್ಟ ಬಾಲಕನಾಗಿದ್ದಾಗಿನಿಂದಲೂ ರಮೇಶ್‌ರನ್ನು ವಿದ್ಯಾಲಯದ ನಿರ್ಮಾಪಕ ಮ್ಯಾಥ್ಯೂ, ಮಗನಂತೆ ನೋಡಿಕೊಂಡಿದ್ದಾರೆ.  ಪಂ. ರವಿ ಕೂಡ್ಲಗಿ ಅವರ ಬಳಿ ತಬಲಾ ಶಿಕ್ಷಣ ಮುಂದುವರಿಸಿದ್ದಾರೆ. ರಸ್ತೆ ಬದಿ ವಾಸವಿದ್ದ ಬಂಜಾರ ಕಾಲೊನಿ ಹುಡುಗನ ಬದುಕು ಈಗ ತಬಲಾ ಜೊತೆ ಬೆಸೆದುಕೊಂಡಿದೆ.

ಸಹೋದರಿಯರ ಸರಿಗಮ

ಐದು ಮಂದಿ ಹೆಣ್ಣು ಮಕ್ಕಳು, ಒಬ್ಬ ಮಗ. ತಂದೆ ತೀರಿಕೊಂಡಿದ್ದಾರೆ. ತಾಯಿ ಕಮಲಾ ವಿದ್ಯಾಲಯದಲ್ಲೇ ಅಡುಗೆ ಕೆಲಸದಾಕೆ. ಈ ಆರು ಮಕ್ಕಳಿಗೂ ಕಲಕೇರಿ ವಿದ್ಯಾಲಯವೇ ಪೋಷಕ. ಈ ಮಕ್ಕಳು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಲಂಬಾಣಿ ತಾಂಡದಿಂದ ಬಂದವರು.

ಹಿರಿಯ ಮಗಳು ಸಂಗೀತಾ ಚವ್ಹಾಣ್‌ ಸಿತಾರ್‌ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗಾಗಲೇ ಹಲವು ಕಾರ್ಯಕ್ರಮ ಕೊಟ್ಟಿರುವ ಸಂಗೀತಾ, ಸಿತಾರ್‌ ದಿಗ್ಗಜರಾದ ಉಸ್ತಾದ್‌ ಹಮೀದ್‌ ಖಾನ್‌, ಮೊಹಸಿನ್‌ ಖಾನ್‌ ಅವರಿಂದ ಸೈ ಎನಿಸಿಕೊಂಡಿದ್ದಾರೆ. ಅವರು ಸದ್ಯ ನೂರ್‌ ಜಹಾನ್‌ ಅವರ ಬಳಿ ಸಿತಾರ್‌ ಕಲಿಕೆ ಮುಂದುವರಿಸಿದ್ದಾರೆ.ಸಂಗೀತಾ, ಶಾಲೆಯ ಮುಖ ನೋಡಿದವರೇ ಅಲ್ಲ. ಅವರು ಮೊದಲು ಶಾಲೆ ಕಂಡದ್ದೇ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ. ವಯಸ್ಸಿನ ಆಧಾರದ ಮೇಲೆ ಅವರು ನೇರವಾಗಿ 5ನೇ ತರಗತಿಗೆ ದಾಖಲಾದರು. ಈಗ ಅವರು ಧಾರವಾಡದ ಕೆ.ಇ. ಬೋರ್ಡ್‌ ಪದವಿ ಕಾಲೇಜಿನಲ್ಲಿ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ. ಕರ್ನಾಟಕದ ವಿವಿಯಲ್ಲಿ ಇಂಗ್ಲಿಷ್‌ ಎಂ.ಎ ಮಾಡುವುದು, ಸಿತಾರ್‌ನಲ್ಲಿ ಸಂಶೋಧನೆ ಮಾಡುವುದು ಸಂಗೀತಾ ಅವರ ಮುಂದಿನ ಗುರಿ.

ಸಂಗೀತಾ ತಂಗಿ ಶಾಂತಿ ಚವ್ಹಾಣ ವಿದ್ಯಾಲಯದಲ್ಲೇ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಬಹರೇನ್‌ನ ಮೇರಿ ಅವರ ಬಳಿ ಬಾನ್ಸುರಿ ಕಲಿತುಕೊಳ್ಳುತ್ತಿದ್ದಾರೆ. ಇನ್ನೊಬ್ಬ ತಂಗಿ ಶೋಭಾ 10ನೇ ತರಗತಿಯಲ್ಲಿದ್ದು, ರಾಜು ಅವರ ಬಳಿ ಹಾಡುಗಾರಿಕೆ ಕಲಿಯುತ್ತಿದ್ದಾರೆ. ನಾಲ್ಕನೇ ತಂಗಿ ಶಾರದಾ ಹಾಡುಗಾರಿಕೆ ಮತ್ತು ಹಾರ್ಮೋನಿಯಂನಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಎ.ಎಲ್‌. ದೇಸಾಯಿ ಅವರ ಬಳಿ ಸಂಗೀತ ಶಿಕ್ಷಣ ಮುಂದುವರಿಸಿದ್ದಾರೆ. ಐದನೇ ಸಹೋದರಿ ಲಕ್ಷ್ಮಿ ಚವ್ಹಾಣ ಕೂಡ ಸಿತಾರ್‌ ಕಲಿಯುತ್ತಿದ್ದಾರೆ. ಐದನೇ ತರಗತಿಯಲ್ಲಿರುವ ತಮ್ಮ ಪರಶುರಾಮ ಸುಂದರವಾಗಿ ಹಾಡುತ್ತಾನೆ.

ಕೃಷ್ಣ– ದಯಾನಂದ

ಬೆಳಗಾವಿ ಜಿಲ್ಲೆಯ ಮುತ್ತುಗ ಗ್ರಾಮದ ಕೃಷ್ಣನಿಗೆ ‘ನಾವು ಎಸ್ಸೆಸ್ಸೆಲ್ಸಿವರೆಗೆ ಓದಿಸಬಹುದು. ಆಮೇಲೆ ಕಷ್ಟ, ಓದುವ ಮನಸ್ಸಿದ್ದರೆ ನೀನೇ ದುಡಿದು ಓದಬೇಕು’ ಎಂದು ತಾಯಿ ಹೇಳಿದ್ದ ಮಾತು ಕಿವಿಯಲ್ಲಿ ಸದಾ ಅನುರಣಿಸುತ್ತಿತ್ತು. ಧಾರವಾಡಕ್ಕೆ ಅಜ್ಜಿ ಮನೆಗೆ ಬಂದಾಗ ಕಲಕೇರಿ ಸಂಗೀತ ವಿದ್ಯಾಲಯದ ಸುದ್ದಿ ಕೃಷ್ಣನ ಕಿವಿಗೆ ಬಿತ್ತು.

ಅಲ್ಲಿಂದ ಕೃಷ್ಣನ ಕನಸುಗಳು ಬದಲಾದವು. ನಿತ್ಯ ಶಿಕ್ಷಣದ ಜೊತೆಗೆ ಪ. ಸೋಮನಾಥ ಮರಡೂರು ಅವರ ಬಳಿ ಗಾಯನ ತರಗತಿ ಆರಂಭವಾಯಿತು. 8 ವರ್ಷ ಸತತವಾಗಿ ಸಂಗೀತ ಕಲಿತ ಕೃಷ್ಣ, ಮುಂಬೈ, ದೆಹಲಿ, ಜೈಪುರಗಳಲ್ಲಿ ಕಛೇರಿ ಕೊಟ್ಟಿದ್ದಾರೆ. ಹುಬ್ಬಳ್ಳಿಯ ಸಿದ್ಧರೂಡ ಮಠದಲ್ಲಿ ‘ಅಹಿರ್‌ ಭೈರವ್‌’ ರಾಗ ಹಾಡಿ ಶಿವಯೋಗಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ಕೃಷ್ಣ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ. ಮ್ಯೂಸಿಕ್‌ ಮಾಡುತ್ತಿದ್ದಾರೆ.

ಭೂಪಾಲ್‌ಗೆ ತೆರಳಿ ಒಂದು ವರ್ಷ ಖ್ಯಾತ ವಿದುಷಿ ಸರಸ್ವತಿ ಮಂಡಲ್‌ ಪೋಳ್‌ ಅವರ ಬಳಿ ಸಂಗೀತ ಕಲಿತು ಬಂದಿದ್ದಾರೆ. ಸಂಗೀತದಲ್ಲಿ ಜೂನಿಯರ್‌ ಪರೀಕ್ಷೆ ಮುಗಿಸಿರುವ ಕೃಷ್ಣ, ಕಲಿತ ಕಲಕೇರಿ ಸಂಗೀತ ವಿದ್ಯಾಲಯದಲ್ಲೇ ಸಂಗೀತ ಶಿಕ್ಷಕರಾಗಿದ್ದಾರೆ. ಕೃಷ್ಣನ ಸಹೋದರ ದಯಾನಂದ ಕೂಡ ಕಲಕೇರಿ ಸಂಗೀತ ವಿದ್ಯಾಲಯದ ಪ್ರತಿಭೆ. ಬಿ.ಎ ಮ್ಯೂಸಿಕ್‌ ಮುಗಿಸಿರುವ ದಯಾನಂದ ತಬಲಾದಲ್ಲಿ ಎಂ.ಎ ಮಾಡುತ್ತಿದ್ದಾರೆ.

ಶಿವಾಜಿಯ ಯು–ಟರ್ನ್!

ಧಾರವಾಡ ತಾಲ್ಲೂಕಿನ ಮುದಿಕೊಪ್ಪ ಗ್ರಾಮದಲ್ಲಿ ಎಮ್ಮೆ ಮೇಯಿಸುತ್ತಿದ್ದ ಯುವಕ ಶಿವಾಜಿ ಪೀರಗಾರ, ಇಂದು ತಬಲಾದಲ್ಲೇ ಬದುಕು ಕಂಡುಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೋಲಾರದಲ್ಲಿ ನಡೆದ ಯುವಜನೋತ್ಸವದಲ್ಲಿ ಬಹುಮಾನ ಬಾಚಿಕೊಂಡಿರುವ ಶಿವಾಜಿ, ದೇಶದಾದ್ಯಂತ ಹಲವು ನಗರಗಳಲ್ಲಿ ಖ್ಯಾತ ಕಲಾವಿದರಿಗೆ ಸಾಥ್‌ ಕೊಟ್ಟಿದ್ದಾರೆ.

ಕರ್ನಾಟಕ ಕಾಲೇಜಿನಲ್ಲಿ ಬಿ. ಮ್ಯೂಸಿಕ್‌ ಮಾಡುತ್ತಿರುವ ಅವರು ಚಿಕ್ಕಂದಿನಲ್ಲಿ ಎಮ್ಮೆ ಕಾಯುವುದಕ್ಕಾಗಿ ಊರ ಹೊರಗಿನ ಬಯಲಿಗೆ ಹೋಗುತ್ತಿದ್ದರು. ತಂದೆ ತೀರಿಕೊಂಡಿದ್ದರು. ಮುದಿಕೊಪ್ಪದ ಸರ್ಕಾರಿ ಶಾಲೆಗೆ ದಾಖಲಾಗಿದ್ದರೂ ಹೋಗುತ್ತಿದ್ದುದು ಮಾತ್ರ ಎಮ್ಮೆಯ ಹಿಂದೆ. ಶಿವಾಜಿ 5ನೇ ತರಗತಿಗೆ ಕಲಕೇರಿ ಸಂಗೀತ ವಿದ್ಯಾಲಯದ ಅಂಗಳಕ್ಕೆ ಬಂದರು. ಸಂಗೀತ ಗೊತ್ತಿರಲಿಲ್ಲ. ವಿದ್ಯಾಲಯದ ಪರಿಸರ ಅವರನ್ನು ತಬಲಾದತ್ತ ಸೆಳೆಯಿತು. ಈಗ ವಿದ್ಯಾಲಯದಲ್ಲೇ ಇದ್ದುಕೊಂಡು ಧಾರವಾಡಕ್ಕೆ ಕಾಲೇಜಿಗೆ ಹೋಗುತ್ತಿದ್ದಾರೆ.ಕಾಲೇಜಿಗೆ ಹೋಗುವವರು ಮಾತ್ರವಲ್ಲ, ವಿದ್ಯಾಲಯದಲ್ಲಿ ಶಾಲೆ ಕಲಿಯುತ್ತಿರುವ ಪ್ರತಿಭೆಗಳೂ ಸಂಗೀತ ಲೋಕದ ಹೊಸ ಭರವಸೆಗಳಾಗಿವೆ. ಗದುಗಿಗ ಮಂಜು ವಯೊಲಿನ್‌ ವಾದಕ ಬಿ.ಎಸ್‌. ಮಠ ಅವರ ಬಳಿ ವಯೊಲಿನ್‌ ಅಭ್ಯಾಸ ಮಾಡುತ್ತಿದ್ದು, ಸಂಗೀತ ಜೂನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಧಾರವಾಡ ವೀರಾಪುರ ಸಮೀಪದ ಜ್ಞಾನೇಂದ್ರ ಬಾನ್ಸುರಿ ಕಲಿಕೆಗೆ ಹತ್ತು ವರ್ಷ ತುಂಬಿದೆ. ಅಳ್ನಾವರದ ಲಕ್ಷ್ಮಿ ಡೋರಿ ‘ಜೀವನ್‌ ಪುರಿ’ ರಾಗ ಹಾಡುತ್ತಾ ಕುಳಿತರೆ ಎಲ್ಲವನ್ನು ಮರೆತುಬಿಡುತ್ತಾರೆ.

6ನೇ ತರಗತಿಯ ಸಂಜನಾ ಬೆರಳುಗಳು ತಬಲಾ ಮೇಲೆ ನರ್ತಿಸುತ್ತವೆ. ಹಾವೇರಿಯ ಶರಣಪ್ಪ ಪೂಜಾರಿಯ ವಯೊಲಿನ್‌ ಸಾಧನೆ ನಡೆದಿದೆ. ಕೆಲವರು ವಿದ್ಯಾಲಯದಲ್ಲಿ ಕಲಿತು ಇಲ್ಲೇ ಕೆಲಸಕ್ಕೆ ಸೇರಿದ್ದಾರೆ. ಗದಗ ಜಿಲ್ಲೆಯ ಅತ್ತಿಗಟ್ಟಿ ಲಂಬಾಣಿ ತಾಂಡದ ಶ್ರೀದೇವಿ ಪತ್ರಿಕೋದ್ಯಮ ಪದವೀಧರೆ. ಅವರು ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ವಾರ್ಡನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀದೇವಿ ಸಿತಾರ್‌ ಶಿಕ್ಷಣ ಮುಂದುವರಿಸಿದ್ದಾರೆ. 

ಕ್ರಿಯಾಶೀಲ ಮುಖ್ಯ ಶಿಕ್ಷಕ ಸುಧರ್ಮ

ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರೂ ಕ್ರಿಯಾಶೀಲರಾಗಿದ್ದಾರೆ. 26 ವರ್ಷ ಹರೆಯದ ಸುಧರ್ಮ ಬಸಾಪುರ ವಿದ್ಯಾಲಯದ ಮುಖ್ಯ ಶಿಕ್ಷಕರು. ಎಂ.ಎಸ್ಸಿ., ಬಿ.ಎಡ್‌ ಪದವೀಧರರಾದ ಇವರು ಪ್ರವೃತ್ತಿಯಲ್ಲಿ ಪಕ್ಷಿ ಛಾಯಾಚಿತ್ರಗ್ರಾಹಕರು. ಸಾವಿರಕ್ಕೂ ಹೆಚ್ಚು ಛಾಯಾಚಿತ್ರ ಕ್ಲಿಕ್ಕಿಸಿರುವ ಸುಧರ್ಮ, ಕಲಕೇರಿ ಸಂಗೀತ ವಿದ್ಯಾಲಯದ ವಾತಾವರಣಕ್ಕೆ ಮಾರುಹೋದವರು. ಬೆಂಗಳೂರಿನ ಇನ್ಫೋಸಿಸ್‌ ಕಂಪೆನಿಯಲ್ಲಿ ಕೆಲಸಕ್ಕಿದ್ದ ಅವರು ಕಾರ್ಪೊರೇಟ್‌ ಕೆಲಸವನ್ನು ತ್ಯಜಿಸಿ ಬೆಟ್ಟದ ಮೇಲಿನ ಶಾಲೆಯ ಮುಖ್ಯಸ್ಥರಾಗಿದ್ದಾರೆ.‘ಇಂದಿನ ಮಕ್ಕಳಿಗೆ ಪರ್ಯಾಯ ಶಿಕ್ಷಣದ ಅವಶ್ಯಕತೆ ಇದೆ. ನಾಲ್ಕು ಗೋಡೆಯ ನಡುವೆ ಪರ್ಯಾಯ ಶಿಕ್ಷಣ ನೀಡಲು ಸಾಧ್ಯವಿಲ್ಲ. ಕಾಡಿನ ನಡುವೆ ರಚನೆಯಾಗಿರುವ ಈ ವಿದ್ಯಾಲಯ ಪರ್ಯಾಯ ಶಿಕ್ಷಣದ ಪ್ರಮುಖ ಹೆಜ್ಜೆ’ ಎನ್ನುತ್ತಾರೆ ಸುಧರ್ಮ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿರುವ ಸಂತೋಷ ಕಲಕೇರಿ ಸಂಗೀತ ವಿದ್ಯಾಲಯದ ಮತ್ತೊಬ್ಬ ಯುವ ಶಿಕ್ಷಕ. ಇಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಾರುಹೋದ ಸಂತೋಷ ಇಲ್ಲಿಯೇ ಸಂತೋಷ ಕಂಡುಕೊಂಡಿದ್ದಾರೆ. ಮಕ್ಕಳಿಗೆ ಸಂಸ್ಕೃತ, ಆಗಮ ಮತ್ತು ಯೋಗವನ್ನು ಹೇಳಿಕೊಡುತ್ತಾರೆ. ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವ ಇಂತಹ 13 ಶಿಕ್ಷಕರು ವಿದ್ಯಾಲಯದಲ್ಲಿದ್ದಾರೆ.

ವಿದೇಶಿ ಸ್ವಯಂ ಸೇವಕರು

ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ವಿವಿಧ ದೇಶಗಳಿಂದ ಬಂದ ಇತರ 13 ಶಿಕ್ಷಕರಿದ್ದಾರೆ. ಅವರನ್ನು ಸ್ವಯಂಸೇವಕರು ಎಂದು ಕರೆಯಲಾಗುತ್ತದೆ. ಅವರು ಮಕ್ಕಳಿಗೆ ಇಂಗ್ಲಿಷ್‌ ಮತ್ತು ಕೌಶಲ ಕಲೆಗಳನ್ನು ಕಲಿಸಿಕೊಡುತ್ತಾರೆ. ಈ ಕಾರಣದಿಂದಾಗಿ ಮಕ್ಕಳೆಲ್ಲರೂ ಇಂಗ್ಲಿಷ್‌ ಮಾತನಾಡುತ್ತಾರೆ.

ವಿದೇಶಗಳಿಂದ ಬಂದ ಇವರು ಮೊದಲು ಭಾರತೀಯರಾಗಿ ಬದುಕಬೇಕು. ಇದು ಕಡ್ಡಾಯ ನಿಯಮ. ಅವರೆಲ್ಲರೂ ಚೂಡಿದಾರ್‌ ಅಥವಾ ಸೀರೆ ಧರಿಸಬೇಕು. ಫ್ರಾನ್ಸ್ ನ ಮೇರಿ ಅನ್ನೆ, ಮೆಕ್ಸಿಕೋನಿಂದ ಬಂದ ಲೂಯಿಸ್‌ ಗ್ಯಾಬೊ, ಕೆನಡಾದ ಲಿಯೋನಾರ್ಡ್‌, ಮೇರಿ ಹೆಲೆನ್‌, ಬಿಯಾಂಕಾ, ಬರ್‌ಬರಾ ಸೇರಿ 13 ಮಂದಿ ವಿದೇಶಿ ಶಿಕ್ಷಕರಿದ್ದಾರೆ. ಜೊತೆಗೆ ವಿದ್ಯಾಲಯ ಆವರಣದಲ್ಲಿ ಆಸ್ಪತ್ರೆಯಿದ್ದು, ಕೆನೆಡಾದ ಲೂಯಿಸ್‌ ನರ್ಸ್‌ ಆಗಿದ್ದಾರೆ.

ವಿದ್ಯಾಲಯದ ಬಗ್ಗೆ

ಪ್ರವಾಸಿಗರಾಗಿ ಭಾರತಕ್ಕೆ ಬಂದ ಮ್ಯಾಥ್ಯೂ ಫೋರ್ಟಿಸ್‌ ಹಿಂದೂಸ್ತಾನಿ ಸಂಗೀತಕ್ಕೆ ಮಾರುಹೋಗಿ ಬನಾರಸ್‌ನಲ್ಲಿ ಸಂಗೀತ ಕಲಿಯಲು ಆರಂಭಿಸಿದರು. ಉತ್ಕೃಷ್ಠ ಹಿಂದೂಸ್ತಾನಿ ಸಂಗೀತ ಅರಸುತ್ತಾ ಧಾರವಾಡಕ್ಕೆ ಬಂದರು. ಖ್ಯಾತ ಸಿತಾರ್‌ ವಾದಕ ಉಸ್ತಾದ್‌ ಹಮೀದ್‌ ಖಾನ್‌ ಅವರ ಶಿಷ್ಯರಾಗಿ ಸಂಗೀತ ಕಲಿಕೆ ಮುಂದುವರಿಸಿದರು. ಕರ್ನಾಟಕ ವಿವಿಯಲ್ಲಿ ಬಿ. ಮ್ಯೂಸಿಕ್‌ ಪದವಿ ಪೂರೈಸಿದರು.ಭಾರತೀಯ ಸಂಗೀತ ಇಲ್ಲಿಯ ಬಡ ಮಕ್ಕಳ ಕೈಗೆ ಸಿಗದಿರುವ ಬಗ್ಗೆ ಅವರು ಸದಾ ಚಿಂತಿಸುತ್ತಿದ್ದರು. ಅವರು ಮೊದಲು ಕೊಳಚೆ ಪ್ರದೇಶಗಳ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದ್ದರು. ಮಾಥ್ಯೂ ಧಾರವಾಡಲ್ಲೇ ನೆಲೆಸಿ ಬಡ ಮಕ್ಕಳಿಗೆ ಸಂಗೀತ ಮತ್ತು ನಿತ್ಯ ಶಿಕ್ಷಣ ನೀಡಲು ನಿರ್ಧರಿಸಿದರು.

ಅವರ ಯೋಚನೆಗೆ ಪತ್ನಿ, ಭಾರತ ಪ್ರೇಮಿ ಹಾಗೂ ಬಾನ್ಸುರಿ ವಾದಕಿ (ಹಿಂದೂಸ್ತಾನಿ) ಅಗಾಥಾ ಮೌರಿಸ್‌ ನೆರವಾದರು. ಗುರು ಹಮೀದ್‌ ಖಾನ್‌ ಜೊತೆಯಾದರು. ‘ಹಿಂದೂಸ್ತಾನಿ ಸಂಗೀತ ಮತ್ತು ಸಾಮಾಜಿಕ ಬದಲಾವಣೆ’ ಎಂಬ ವಿಷಯಗಳ ಮೇಲೆ 2002ರಲ್ಲಿ ಕಲಕೇರಿ ಬೆಟ್ಟದ ಮೇಲೆ ‘ಕಲಕೇರಿ ಸಂಗೀತ’ ವಿದ್ಯಾಲಯವನ್ನು ಆರಂಭಿಸಿದರು.‘ಹಿಂದೂಸ್ತಾನಿ ಸಂಗೀತವನ್ನು ಪ್ರೀತಿಸುತ್ತಿದ್ದ ಮಾಥ್ಯೂ ಭಾರತದ ಗ್ರಾಮೀಣ ಮಕ್ಕಳ ಬಗ್ಗೆ ಬಹಳ ಮಾತನಾಡುತ್ತಿದ್ದರು. ಇಂತಹ ಮೌಲ್ಯಯುತ ಸಂಗೀತವನ್ನು ಇಲ್ಲಿಯ ಬಡ ಮಕ್ಕಳೇಕೆ ಕಲಿಯುತ್ತಿಲ್ಲ ಎಂಬ ಪ್ರಶ್ನೆ ಅವರನ್ನು ಸದಾ ಕಾಡುತ್ತಿತ್ತು. ಅವರ ಮನಸ್ಸಿನಲ್ಲಿದ್ದ ಶಾಲೆ ತೆರೆಯುವ ವಿಷಯ ವ್ಯಕ್ತಪಡಿಸಿದಾಗ ನನಗೂ ಇಷ್ಟವಾಯಿತು. ಎಲ್ಲರೂ ಸೇರಿ 15 ಮಕ್ಕಳ ಜೊತೆ ಸರಳವಾಗಿ ಶಾಲೆ ಕಟ್ಟಿದೆವು. ಈಗ ಶಾಲೆ ಎತ್ತರಕ್ಕೆ ಬೆಳೆದಿದೆ.

ಮಕ್ಕಳು ವಿದ್ವಾಂಸರಾಗಿದ್ದಾರೆ’ ಎನ್ನುತ್ತಾರೆ ಉಸ್ತಾದ್‌ ಹಮೀದ್‌ಖಾನ್‌. ಈಗ ಶಾಲೆಗೆ 11 ವರ್ಷ ತುಂಬಿದೆ. ‘ಯಂಗ್‌ ಇಂಟರ್‌ನ್ಯಾಷನಲ್‌ ಆರ್ಟಿಸ್ಟ್ರ ಆಫ್‌ ದಿ ವರ್ಲ್ಡ್‌’ ಶಾಲೆಯನ್ನು ಮುನ್ನಡೆಸುತ್ತಿದೆ. ಮ್ಯಾಥ್ಯೂ ಅಧ್ಯಕ್ಷರು, ಹಮೀದ್‌ ಖಾನ್‌ ಉಪಾಧ್ಯಕ್ಷರಾಗಿದ್ದಾರೆ. ಇಂಗ್ಲೆಂಡ್‌ನ ಆ್ಯಡಂ ವುಡ್‌ವರ್ಡ್‌ ನಿರ್ದೇಶಕರಾಗಿ ಶಾಲೆಯ ಜವಾಬ್ದಾರಿ ನರ್ವಹಿಸುತ್ತಿದ್ದಾರೆ.ಬೆಟ್ಟದ ಪ್ರಾಕೃತಿಕ ಸೌಂದರ್ಯವನ್ನು ಎಳ್ಳಷ್ಟೂ ಹಾಳುಗೆಡವದೆ ಬಿದಿರಿನ ಕಾಟೇಜ್‌ ಕಟ್ಟಲಾಗಿದೆ. ವಿದ್ಯಾಲಯ ದೇಸಿ ಸ್ವರೂಪದಲ್ಲಿದ್ದು, ನೆಲಕ್ಕೆ ಸಗಣಿ ಸಾರಿಸಲಾಗಿದೆ. ಮಕ್ಕಳು ವೃತ್ತಾಕಾರವಾಗಿ, ಚಾಪೆ ಮೇಲೆ ಕುಳಿತು ಪಾಠ ಕಲಿಯುತ್ತಾರೆ. ಎಲ್ಲ ಕಾಟೇಜ್‌ಗಳಿಗೆ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದ್ದು ಸೂರ್ಯಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.

ವಿದ್ಯಾಲಯದಲ್ಲಿ ಎಮ್ಮೆ, ಹಸುಗಳನ್ನು ಸಾಕಲಾಗಿದ್ದು, ಅವು ಹಾಲಿನ ಅವಶ್ಯಕತೆ ಪೂರೈಸುತ್ತವೆ. ಬೆಳಿಗ್ಗೆ 8ರಿಂದ 11ರವರೆಗೆ ಸಂಗೀತ ತರಗತಿ ನಡೆದರೆ 11.30ಕ್ಕೆ ನಿತ್ಯ ತರಗತಿಗಳು ಆರಂಭವಾಗುತ್ತವೆ. ಪ್ರತಿ ತಿಂಗಳ ಕೊನೆ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ಕಲಿತದ್ದನ್ನು ಪ್ರಸ್ತುತಪಡಿಸುತ್ತಾರೆ. ಕಲೇಕರಿ ಸಂಗೀತ ವಿದ್ಯಾಲಯವನ್ನು 0836–2786746 ಸಂಖ್ಯೆಯನ್ನು ಸಂಪರ್ಕಿಸಬಹುದು. 

ಪ್ರತಿಕ್ರಿಯಿಸಿ (+)