ಶುಕ್ರವಾರ, ಮೇ 7, 2021
26 °C

ಸಂಗ್ರಹ, ಸಂಕ್ಷಿಪ್ತ, ಧ್ವನಿಪೂರ್ಣ

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ಕನ್ನಡದ ವಿಶಿಷ್ಟ ಲೇಖಕಿ ಉಮಾ ರಾವ್ ಬರೆದ ಸುಮಾರು ಮೂವತ್ತು ಕತೆಗಳನ್ನು ಮೂರನೆಯದಾದ (ಅಗಸ್ತ್ಯ, ಕಡಲಹಾದಿ ಅವರ ಇನ್ನೆರಡು ಕಥಾಗುಚ್ಛಗಳು) ಈ ಸಂಗ್ರಹ ಒಳಗೊಂಡಿದೆ. ಸಂಖ್ಯೆಯ ದೃಷ್ಟಿಯಿಂದ ಹೆಚ್ಚು ಅನಿಸಬಹುದಾದರೂ ಉಮಾ ರಾವ್ ಅವರ ಮೊದಲ ಭಾಗದ ಕತೆಗಳು ಕಿರುಗತೆಗಳಾಗಿವೆ.ಒಂದು ಸಂಗತಿಯ ಹೊರ ಮೈ, ಅದರ ತಾರ್ಕಿಕ ಅಂತ್ಯ ಈ ಮೊದಲ ಭಾಗದ ಒಂದೆರಡು ಪುಟಗಳಲ್ಲಿ ಹರಡಿಕೊಂಡಿರುವ ಕತೆಗಳ ಲಕ್ಷಣಗಳಾಗಿವೆ. ಇವುಗಳಲ್ಲಿ `ವಿಗ್~, `ಅಂಗಡಿ ಮನೆ~, `ಹೊಂಗೆ ಮರ~, `ಮೀಸೆ ಹೆಂಗಸು~, `ಬೆತ್ತಲೆ~ ಕತೆಗಳನ್ನು ನೋಡಬಹುದು.ಇವುಗಳಿಗೆ ಹೆಚ್ಚಿನ ಆಯಾಮ, ವಿಸ್ತಾರಗಳಿಲ್ಲ. ಸಂಗ್ರಹ ಹಾಗೂ ಸಂಕ್ಷಿಪ್ತತೆ ಗುಣವಿರುವ ಇವು ಕುತೂಹಲವನ್ನಷ್ಟೇ ಹುಟ್ಟಿಸುವ ಕತೆಗಳಾಗಿವೆ. ಇವುಗಳಲ್ಲಿ `ವಿಗ್~ ಉಮಾ ರಾವ್ ಅವರ ಕಥನ ಕೌಶಲ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.ಇವನ್ನು ಹೊರತುಪಡಿಸಿದರೆ ಎರಡನೇ ಭಾಗದ ಕತೆಗಳು ಉಮಾ ಅವರ ವಿಶಿಷ್ಟ ಶೈಲಿಯನ್ನು, ಕಸುಬುಗಾರಿಕೆಯನ್ನು ತೋರುವಂತಿವೆ. `ಮೂವತ್ತಾರು, ಇಪ್ಪತ್ನಾಲ್ಕು, ಮೂವತ್ತಾರು~ ಎಂಬ ಕತೆಯನ್ನೇ ನೋಡಿ. ಕನ್ನಡಕ್ಕೆ ತುಸು ಬೇರೆ ಎನ್ನಬಹುದಾದ ವಸ್ತುವನ್ನು ಇದು ಒಳಗೊಂಡಿದೆ.ಮದುವೆಯಾಗಿ ಸಂಸಾರ ನಡೆಸುತ್ತಿರುವ ಮಹಿಳೆಯೊಬ್ಬಳಿಗೆ ತನ್ನ ಸ್ತನ ಸಾಕಷ್ಟು ದೊಡ್ಡದಾಗಿಲ್ಲ ಎಂಬ ಕೊರಗು. ಎಲ್ಲ ಇದ್ದೂ ಅದೊಂದು ಕೊರಗಾಗಿ ಅವಳನ್ನು ಕಾಡುತ್ತದೆ. ಚಿಕ್ಕಂದಿನಿಂದಲೂ ಒಳ್ಳೆಯ ಮೈಮಾಟದ ಹುಚ್ಚು ಅವಳಿಗೆ. ಅದನ್ನು ದೊಡ್ಡದಾಗಿಸಲು ಒಳಕ್ಕೆ ಸೇರಿಸುವ `ಇಂಪ್ಲಾಂಟ್~ ಅನ್ನು ಅದರಲ್ಲಿ ನುರಿತ ವೈದ್ಯರ ಸಹಾಯ ಪಡೆದು, ಪಡೆಯಲು ನಿರ್ಧರಿಸುತ್ತಾಳೆ.ವೈದ್ಯರು ಅದನ್ನು ಸಿದ್ಧಪಡಿಸಿ ಕೊಡುತ್ತಾರೆ. ಅದನ್ನು ಬಳಸುವ ಮುನ್ನವೇ ಅದು ಇನ್ನಿತರ ಬೆಲೆಬಾಳುವ ವಸ್ತುಗಳೊಂದಿಗೆ ಅವಳ ಮನೆಯಿಂದ ಕಳುವಾಗುತ್ತದೆ. ಈ ಕತೆ ನಮ್ಮ ಬಹುಪಾಲು ಲೇಖಕಿಯರು ಎತ್ತಿಕೊಳ್ಳದ ವಸ್ತುವನ್ನು ಒಳಗೊಂಡಿದೆ.ಏಕಕಾಲಕ್ಕೆ ಉಮಾ ರಾವ್ ಇಲ್ಲಿ ಹೆಣ್ಣಿನ ಕೀಳರಿಮೆಗೆ ಕಾರಣವಾಗುವ ಸ್ತನ, ಮೈಮಾಟ, ಆಕೆಯ ಸೌಂದರ್ಯ ಪ್ರಜ್ಞೆ, ಸ್ತನವನ್ನು ದೊಡ್ಡದಾಗಿಸುವ ವಸ್ತು ಬೇಕೋ ಬೇಡವೋ ಎನ್ನುವ ಸಂದಿಗ್ಧ, ಸರಿ ತಪ್ಪಿನ ತೊಳಲಾಟವನ್ನು ಹೆಣ್ಣುಮಕ್ಕಳ ಭಾಷೆಯಲ್ಲೇ ಆಧುನಿಕವಾದ ಮಧ್ಯಮ ವರ್ಗದ ಆವರಣದಲ್ಲೇ ಹಿಡಿದಿಡುತ್ತಾರೆ.ನಗರದ ಆಧುನಿಕ ಬದುಕಿನ ಜನರ ತಲ್ಲಣಗಳು ಉಮಾ ಅವರ ಕತೆಗಳ ಮುಖ್ಯ ವಸ್ತು. `ಅಂತರ್ಜಾಲ~ ಎಂಬ ಕತೆ ಕೂಡ ಇದೇ ಆವರಣದ ಬೇರೆ ವಸ್ತುವನ್ನು ಆಧರಿಸಿದ್ದು.ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ವೃದ್ಧರಿಗೆ ಇಂಟರ್‌ನೆಟ್‌ನಲ್ಲಿ ಬೆತ್ತಲೆ ಚಿತ್ರಗಳನ್ನು ನೋಡುವ ಹವ್ಯಾಸ. ಅವರು ತೆರೆದಿಟ್ಟ ಬೆತ್ತಲೆ ಚಿತ್ರಗಳನ್ನು ಅವರ ಸೊಸೆ ನೋಡುತ್ತಾಳೆ. ಸೊಸೆ ನೋಡಿದ್ದು ಗೊತ್ತಾಗಿ ಶಾಕ್ ಆದ ಮಾವ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

 

ಈ ಕತೆಯ ವಿಶೇಷತೆ ಇರುವುದು ಮನುಷ್ಯನ ಸರಿ ತಪ್ಪಿನ ದ್ವಂದ್ವ, ಇಳಿ ವಯಸ್ಸಿನ ಕಾತರ ಹಾಗೂ ಅದನ್ನು ಬೇರೆಯವರು ಅರ್ಥ ಮಾಡಿಕೊಳ್ಳುವಲ್ಲಿ ಇರುವ ಸಂದಿಗ್ಧ ಇವೆಲ್ಲವೂ ಚಿತ್ರವತ್ತಾಗಿ ಮೂಡಿರುವುದರಲ್ಲಿ. ಒಂದು ವಸ್ತುವನ್ನು ಬೇರೆ ಬೇರೆ ಸ್ತರಗಳಲ್ಲಿ ಬೆಳೆಸುವುದು, ಅದು ಸ್ಪಷ್ಟವಾಗಿ ಓದುಗರಿಗೆ ಗೊತ್ತಾಗುವಂತೆ ಹೊಳೆಯಿಸುವುದು ಇಲ್ಲಿನ ಕತೆಗಳ ರೀತಿಯಾಗಿದೆ.ಇದೇ ಬಗೆಯ `ಕಸೂತಿಯಮ್ಮ~, `ಹಾವಾಡಿಗ~, `ಪಯಣಿಗರು~ ಕತೆಗಳೂ ಇಲ್ಲಿವೆ. ಇವೆಲ್ಲ ಸಮಾನ ಯಶಸ್ಸನ್ನು ಪಡೆದ ಕತೆಗಳೇನಲ್ಲ. ಆದರೆ, ಆ ದಾರಿಯಲ್ಲಿರುವ ಕತೆಗಳೆಂದು ಹೇಳಬಹುದು.ಅನಗತ್ಯವಾಗಿ ಲಂಬಿಸದೆ, ಕನ್ನಡದ ಈಚಿನ ಲೇಖಕಿಯರು ಮಾಡುವಂತೆ ಸಾಂಸಾರಿಕ ವಿವರಗಳಿಗೇ ಜೋತು ಬಿದ್ದು, ಗೋಳು ತೋಡಿಕೊಳ್ಳದೆ ಬರೆಯುವ ಲೇಖಕಿ ಉಮಾ ರಾವ್. ಸಂಕ್ಷಿಪ್ತವಾಗಿ ಚಿತ್ರವತ್ತಾಗಿ ಬರೆಯುವ ಅವರ ಕತೆಗಳ ವಸ್ತುಗಳಲ್ಲಿ ಬದುಕಿನ ಅನುಭದ ವಿಸ್ತಾರವಾಗಲಿ, ಆಳವಾಗಲಿ ಕಮ್ಮಿ. ಅವರದು ಪುಟ್ಟ ಬಟ್ಟೆಯಲ್ಲೇ ಸುಂದರ ಕಸೂತಿಯನ್ನು ಹೆಣೆಯುವ ಕಸುಬುಗಾರಿಕೆ. ಅದು ಸರಳವಾಗಿ, ಸ್ಪಷ್ಟವಾಗಿ, ಚಿತ್ರವತ್ತಾಗಿ ಧ್ವನಿಪೂರ್ಣವಾಗಿದೆ ಎಂಬುದು ಸದ್ಯದ ಕಥಾಸಂದರ್ಭದಲ್ಲಿ ಮಹತ್ವದ ಸಂಗತಿ.ಸಿಲೋನ್ ಸುಶೀಲಾ ಹಾವಾಡಿಗ ಮೀಸೆ ಹೆಂಗಸು ಮತ್ತು ಇತರರು

(ಕತೆಗಳು)

ಲೇ: ಉಮಾ ರಾವ್

ಪು:144; ಬೆ: ರೂ. 100

ಪ್ರ: ನುಡಿ ಪುಸ್ತಕ, ನಂ.27, 21ನೇ ಮುಖ್ಯರಸ್ತೆ, ಬಿ.ಡಿ.ಎ. ಕಾಂಪ್ಲೆಕ್ಸ್ ಎದುರು, ಬನಶಂಕರಿ ಎರಡನೇ ಹಂತ, ಬೆಂಗಳೂರು- 560 070

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.