ಮಂಗಳವಾರ, ಮೇ 24, 2022
27 °C

ಸಂಘಟಿತ ಹೋರಾಟಕ್ಕೆ ಸಜ್ಜಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಜಾಗತೀಕರಣ ನೀತಿಗಳ ಅಪಾಯದ ಬಗ್ಗೆ ಸಂಘಟಿತ ಹೋರಾಟಕ್ಕೆ ಮಹಿಳೆಯರು ಹಾಗೂ ಯುವ ರೈತ ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ಸಜ್ಜುಗೊಳಿಸುವ ಅನಿವಾರ್ಯತೆ ಇದೆ.ಈ ನಿಟ್ಟಿನಲ್ಲಿ ಮುಂದಿನ ಮಾರ್ಚ್ 17 ರಿಂದ 20ರವರೆಗೆ ಅಂತರರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟದ ಮಧ್ಯಂತರ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸುವ ಅಗತ್ಯವಿದೆ ಎಂದು ‘ಲಾವಿಯಾ ಕ್ಯಾಂಪೆಸಿನಾ’ದ ತಾಂತ್ರಿಕ ಕಾರ್ಯದರ್ಶಿ ಇಂಡೋನೇಷಿಯಾದ ಇದ್ರಲೂಯ ಹೇಳಿದರು.ತಾಲ್ಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ ನಡೆದ ದಕ್ಷಿಣ ಏಷ್ಯಾ ರಾಷ್ಟ್ರಗಳ ರೈತ ಮುಖಂಡರ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಇದ್ರಲೂಯ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭೂ ಸ್ವಾಧೀನ ಕೇವಲ ಕೈಗಾರಿಕೆ, ನಿವೇಶನಗಳಿಗಾಗಿಯಷ್ಟೇ ನಡೆಯುತ್ತಿಲ್ಲ.ಬಹುರಾಷ್ಟ್ರೀಯ ಕಂಪೆನಿಗಳು ಕೃಷಿ ಚಟುವಟಿಕೆ ನಡೆಸುವುದಕ್ಕಾಗಿಯೂ ಭೂ ಸ್ವಾಧೀನ ಮಾಡಿಕೊಳ್ಳುತ್ತಿವೆ.ಇದರಿಂದ ಕೃಷಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಿದೆ.ವಿಶ್ವದ ಎಲ್ಲಾ ದೇಶಗಳ ರೈತರೂ ಜಾಗತೀಕರಣದ ಒಪ್ಪಂದಗಳ ನಂತರ ಕಷ್ಟಗಳನ್ನು ಎದುರಿಸುತ್ತಿದ್ದಾರೆ.ಆದರೆ ಲಾಭ ಆಗಿರುವುದು ಕೆಲವೇ ಕಂಪೆನಿಗಳಿಗೆ ಮಾತ್ರ ಎಂದು ಎಚ್ಚರಿಸಿದರು.ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವ ಕುರಿತು ಹೆಚ್ಚು ಮಾತನಾಡುತ್ತಿರುವುದು ಯೂರೋಪ್ ಹಾಗೂ ಅಮೇರಿಕ.ಪ್ರಸ್ತುತ ತಾಪಮಾನ ಏರಿಕೆಗೆ ಕಾರಣವಾಗಿರುವುದು ಈ ದೇಶಗಳ ಬಹುರಾಷ್ಟ್ರೀಯ ಕಂಪೆನಿಗಳಿಂದಲೇ ಎಂಬುದು ವಿಪರ್ಯಾದ ಸಂಗತಿ. ಆದರೆ ಇದರ ದುಷ್ಪರಿಣಾಮಗಳಿಗೆ ಮೊದಲು ಬಲಿಯಾಗುವುದು ಮಾತ್ರ ಬಾಂಗ್ಲಾದೇಶ ಹಾಗೂ ಶ್ರೀಲಂಕ. ಇಡೀ ಜಗತ್ತಿಗೆ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿರುವ ಸಸ್ಯ ಸಂಪತ್ತು ಆಮ್ಲಜನಕ ಸರಬರಾಜು ಮಾಡುತ್ತಿವೆ. ತಾಪಮಾನ ಏರಿಕೆ ಕೇವಲ ಮಳೆ, ಬೆಳೆ ಮೇಲಷ್ಟೇ ಪರಿಣಾಮ ಬೀರುವುದಿಲ್ಲ.ಬೆಲೆ ಏರಿಕೆ ಸೇರಿದಂತೆ ಸಾಮಾಜಿಕ ಬದುಕಿನ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹೇಳಿದರು.ಜಗತ್ತಿನ ಆಹಾರದ ಕೊರತೆ ನೀಗಲು ಬಿ.ಟಿ ತಂತ್ರಜ್ಞಾನದ ಮೂಲಕ ಎರಡನೇ ಹಸಿರುಕ್ರಾಂತಿಯಿಂದ ಮಾತ್ರ ಸಾಧ್ಯ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.ಇದರ ಲಾಭ ಗ್ರಾಹಕರಿಗಾಗಲೀ, ರೈತರಿಗಾಗಲೀ ದೊರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.  ಬಾಂಗ್ಲಾದೇಶದ ರೈತ ಮುಖಂಡ ಬಹುದ್ರೂಂ ಅಲಾಲಂ ಮಾತನಾಡಿ, ಬಾಂಗ್ಲಾದಲ್ಲಿ ಸಾವಯವ ಕೃಷಿ ಸಹಜವಾಗಿಯೇ ನಡೆಯುತ್ತಿದೆ.ನಮ್ಮಲ್ಲಿನ ಸಣ್ಣ ಹಿಡುವಳಿದಾರ ರೈತರು ಇವತ್ತಿಗೂ ಸಹ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಬಳಸುತ್ತಾರೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪರಿಸರ ಸ್ನೇಹಿ ಕೃಷಿ ಹಾಗೂ ವಾತಾವರಣದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಸರ್ಕಾರಗಳ ಗಮನ ಸೆಳೆಯಲು ಮತ್ತು ರೈತರಲ್ಲಿ ಅರಿವು ಮೂಡಿಸುವ ಸಲುವಾಗಿ ಬೃಹತ್ ಮಟ್ಟದ ಸಮಾವೇಶಗಳನ್ನು ನಡೆಸುವ ಅಗತ್ಯವಿದೆ ಎಂದು ಹೇಳಿದರು.ಸಮನ್ವಯ ಸಮಿತಿ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ, ಅಂತರ ರಾಷ್ಟ್ರೀಯ ಕಾರ್ಯದರ್ಶಿ ಚುಕ್ಕಿನಂಜುಂಡಸ್ವಾಮಿ, ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ನೇಪಾಳದ ರೈತ ಮುಖಂಡರಾದ ಬಲರಾಂ, ಶಾಂತಮಾನವಿ, ದೆಹಲಿ ರಾಜ್ಯದ ಯದುವೀರ್‌ಸಿಂಗ್, ಉತ್ತರ ಪ್ರದೇಶದ ವಿಜಯಜವಾದಿಯ ಮುಂತಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.