ಶುಕ್ರವಾರ, ಜೂಲೈ 10, 2020
24 °C

ಸಂತ್ರಸ್ತ ಜಪಾನಿನಲ್ಲಿ ಈಗ ಕೋಳಿ ಜ್ವರದ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತ್ರಸ್ತ ಜಪಾನಿನಲ್ಲಿ ಈಗ ಕೋಳಿ ಜ್ವರದ ಭೀತಿ

ಚೀಬಾ/ಜಪಾನ್ (ಕ್ಯೂಡೊ): ಭೂಕಂಪ, ಸುನಾಮಿಯಿಂದ ತತ್ತರಿಸಿರುವ ಜಪಾನ್‌ನಲ್ಲಿ ಈಗ ಕೋಳಿ ಜ್ವರವೂ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಜಪಾನಿನ ಎರಡನೇ ಅತಿದೊಡ್ಡ ಕೋಳಿ ಮೊಟ್ಟೆ ಉತ್ಪಾದನಾ ನಗರವಾಗಿರುವ ಚೀಬಾದ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿನ ಕೋಳಿಗಳಲ್ಲಿ  ಜ್ವರ ಕಾಣಿಸಿಕೊಂಡಿರುವುದನ್ನು ಜಿಲ್ಲಾಡಳಿತ ದೃಢಪಡಿಸಿದೆ. ಕೋಳಿ ಜ್ವರ ವೈರಸ್‌ನಿಂದ ಶುಕ್ರವಾರ ಮತ್ತು ಶನಿವಾರ ಸಾಕಾಣಿಕೆ ಕೇಂದ್ರಗಳಲ್ಲಿ ನಾಲ್ಕು ಕೋಳಿಗಳು ಸಾವಿಗೀಡಾಗಿದ್ದವು. ಈಗ ವೈರಸ್ ತೀವ್ರವಾಗಿ ಹರಡಿಕೊಂಡಿದ್ದು, ಕೋಳಿ ಜ್ವರ ಕಾಣಿಸಿಕೊಂಡಿರುವ ಸುಮಾರು 35 ಸಾವಿರ ಕೋಳಿಗಳನ್ನು ಕೊಂದು ಹಾಕಲಾಗಿದೆ. ಇದು ಭೂಕಂಪದಷ್ಟೇ ಅನಾಹುತಕಾರಿಯಾಗಿದೆ ಎಂದು ಚೀಬಾ ಗವರ್ನರ್ ಕೆನ್ಸಾಕು ಮೊರಿಟಾ ಹೇಳಿದ್ದಾರೆ.ಅಮೆರಿಕದ ಯುದ್ಧ ವಿಮಾನ ಮತ್ತು ಹಡಗುಗಳಿಗೆ ನುಗ್ಗಿದ  ವಿಕಿರಣ (ವಾಷಿಂಗ್ಟನ್ ವರದಿ): ಜಪಾನಿನ ಫುಕುಶಿಮಾ ಅಣು ಸ್ಥಾವರದಿಂದ ಸೋರಿಕೆಯಾಗಿರುವ  ರೇಡಿಯೊ ವಿಕಿರಣಗಳು ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ದಿದ್ದ ಯುದ್ಧವಿಮಾನ ರೊನಾಲ್ಡ್ ರೀಗಾನ್‌ನನ್ನು ಆವರಿಸಿದ ಹಿನ್ನೆಲೆಯಲ್ಲಿ ಅಮೆರಿಕವು ಸರಕು ಸಾಗಾಣಿಕೆ ಯುದ್ಧ ವಿಮಾನಗಳನ್ನು ಮತ್ತು 7ನೇ ನೌಕಾಸೇನೆಯ ಕೆಲವು ಹಡಗುಗಳನ್ನು ಸ್ಥಳಾಂತರಿಸಿದೆ.ಪರಿಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದ ಕೆಲವು ಹೆಲಿಕಾಪ್ಟರ್‌ಗಳು ಪರಮಾಣು ಸ್ಫೋಟದಿಂದ ಉಂಟಾದ ಮೋಡದಲ್ಲಿ ಸಿಲುಕಿ ನೆಲಕ್ಕುರುಳಿವೆ. ದೂಳಿನಿಂದ ಹಲವು ಹಾನಿಗೊಳಗಾಗಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಕಡಿಮೆ ಪ್ರಮಾಣದಲ್ಲಿ ರೇಡಿಯೊ ವಿಕಿರಣಗಳು ಯುದ್ಧಹಡಗುಗಳನ್ನು ಪ್ರವೇಶಿಸಿದೆ ಎಂದು 7ನೇ ನೌಕಾಸೇನೆ ಘಟಕದ ವಕ್ತಾರರು ತಿಳಿಸಿದ್ದಾರೆ.ತಿಂಗಳ ಹಿಂದಿನಿಂದಲೇ ವಿಕಿರಣ ಸೋರಿಕೆ: ದುರ್ಬಲವಾಗಿದ್ದ ಅಣು ಸ್ಥಾವರಗಳಿಂದ ಹಲವು ವಾರ ಅಥವಾ ತಿಂಗಳುಗಳ ಹಿಂದಿನಿಂದಲೇ ರೇಡಿಯೊ ವಿಕಿರಣಗಳು ಸೋರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ಜಪಾನ್ ಮತ್ತು ಅಮೆರಿಕದ ಪರಮಾಣು ತಜ್ಞರು ತಿಳಿಸಿದ್ದಾರೆ. ಎರಡು ಸ್ಥಾವರಗಳಲ್ಲಿ ರೇಡಿಯೊ ವಿಕಿರಣಗಳು ಹೊರ ಬಂದಿವೆ ಎಂಬುದು ಕಲ್ಪನೆ ಎಂದು ಜಪಾನಿನ ಅಧಿಕಾರಿಗಳ ಹೇಳಿಕೆಯನ್ನು ಅಲ್ಲಗೆಳೆದಿರುವ ತಜ್ಞರು ಅಣುಸ್ಥಾವರದಿಂದ ಸುಮಾರು 60 ಮೈಲು ದೂರದಲ್ಲಿ ಹಾರಾಟ ನಡೆಸಿದ್ದ ಹೆಲಿಕಾಪ್ಟರ್‌ಗಳತ್ತ ಅಲ್ಪ ಪ್ರಮಾಣದ ರೇಡಿಯೊ ವಿಕಿರಣ ಕಣಗಳು ದೊರೆತಿದ್ದವು. ವಿಕಿರಣಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದ್ದು, ಇದು ಬಹಳ ದೂರವರೆಗೆ ವ್ಯಾಪಿಸಿರುವ ಸಾಧ್ಯತೆಗಳಿವೆ ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಕಗ್ಗತ್ತಲೆಯ ಖಂಡ...

ಸುನಾಮಿಯಿಂದ ಕಂಗೆಟ್ಟಿರುವ ಸೂರ್ಯ ಉದಯದ ನಾಡು ಜಪಾನ್ ಈಗ ವಿದ್ಯುತ್ ಇಲ್ಲದೆ ಅಕ್ಷರಶಃ ಕಗ್ಗತ್ತಲೆಯ ಖಂಡದಂತಾಗಿದ್ದು ಸ್ಮಶಾನ ಮೌನ ಆವರಿಸಿದೆ. ಸಮುದ್ರದ ದಡದಲ್ಲಿರುವ ಊರುಗಳು ಕಸದ ತೊಟ್ಟಿಯಂತಾಗಿದ್ದು ಎಲ್ಲೆಡೆ ಕೊಳೆತ ಹೆಣಗಳ ರಾಶಿ, ಕಟ್ಟಡಗಳ ಅವಶೇಷಗಳು ಕಂಡುಬರುತ್ತಿವೆ. ಶುಕ್ರವಾರದ ಸುನಾಮಿ ದುಃಸ್ವಪ್ನದಿಂದ ಚೇತರಿಸಿಕೊಳ್ಳುವ ಮೊದಲೇ ಮರುಕಳಿಸುತ್ತಿರುವ ಭೂ ಕಂಪನಗಳು, ಜ್ವಾಲಾಮುಖಿ ಆಸ್ಫೋಟ ಮತ್ತು ಎಲ್ಲಕ್ಕೂ ಹೆಚ್ಚಾಗಿ ಅಣು ಸ್ಥಾವರ ಸ್ಫೋಟಿಸಿ ವಿಕಿರಣ ಹೊರ ಸೂಸುವಿಕೆ ಭಾರಿ ಆತಂಕ ಹುಟ್ಟುಹಾಕಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.