ಮಂಗಳವಾರ, ಜನವರಿ 31, 2023
18 °C

ಸಂದರ್ಶನ: ಮಕ್ಕಳಿಗೆ ಜ್ಞಾನ ಸಮುಚ್ಚಯ

ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಸಂದರ್ಶನ: ಮಕ್ಕಳಿಗೆ ಜ್ಞಾನ ಸಮುಚ್ಚಯ

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿಯವರು. ಓದಿದ್ದು  ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಅವರ ವೃತ್ತಿ ವಿವಿಧ ವಸ್ತುಗಳ ಸರಬರಾಜು ವ್ಯಾಪಾರ. ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು. ಇದಕ್ಕೂ ಮೊದಲು ಅವರು ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ನಿರ್ದೇಶಕರು.ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾಗಿದ್ದ ಶಂಕರ ಹಲಗತ್ತಿ ಅವರ ಸ್ಥಾನದಲ್ಲಿ ಅವರನ್ನು ಸರ್ಕಾರ ಇತ್ತೀಚೆಗೆ ನೇಮಕ ಮಾಡಿದೆ. ಮಹೇಶ ಟೆಂಗಿನಕಾಯಿ ನೇಮಕ ರಾಜ್ಯದ ಮಕ್ಕಳ ಸಂಘಟನೆಗಳು ಹಾಗೂ ಸಾಹಿತ್ಯ ವಲಯದಲ್ಲಿ ಅಚ್ಚರಿ ಉಂಟುಮಾಡಿತು. ಮಕ್ಕಳಿಗಾಗಿ ದುಡಿಯದ, ಮಕ್ಕಳ ಸಾಹಿತಿಯೂ ಅಲ್ಲದ ಟೆಂಗಿನಕಾಯಿ  ಅವರ ನೇಮಕಕ್ಕೆ ಪ್ರತಿಭಟನೆ ವ್ಯಕ್ತವಾಯಿತು. ಅಕಾಡೆಮಿಯ ನಾಲ್ವರು ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಅಕಾಡೆಮಿಯೊಂದಕ್ಕೆ ಹೊಸ ಅಧ್ಯಕ್ಷರು ನೇಮಕ ಆದಾಗ ಅದರ ವಿರುದ್ಧ ಪ್ರತಿಭಟಿಸಿ ಸದಸ್ಯರು ರಾಜೀನಾಮೆ ಕೊಡುವ ಬೆಳವಣಿಗೆ ಹೊಸದು ಹಾಗೂ ವಿರಳ.ಅದೇನೇ ಇರಲಿ ಬಾಲ ವಿಕಾಸ ಅಕಾಡೆಮಿಯನ್ನು ಮುನ್ನಡೆಸುವ ಹೊಣೆ  ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಪ್ರಜಾವಾಣಿ ಅವರೊಂದಿಗೆ ನಡೆಸಿದ ಮಾತುಕತೆಯ ವಿವರಗಳು ಇಲ್ಲಿವೆ.* ನೀವು ಪಕ್ಕಾ ರಾಜಕಾರಣಿ. ಬಾಲವಿಕಾಸ ಅಕಾಡೆಮಿಗೆ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಆಯ್ಕೆ ಸೂಕ್ತವೇ ಎನ್ನುವ ಪ್ರಶ್ನೆ ಕೇಳಿ ಬಂದಿದೆ. ನೀವೇನು ಹೇಳುತ್ತೀರಿ?

ರಾಜಕಾರಣಿ, ಅನನುಭವಿ ಎನ್ನುವ ಮಾತುಗಳು ನನ್ನ ನೇಮಕ ಆದಾಗ ಕೇಳಿಬಂದ ಮಾತುಗಳು.  ಈ ಮಾತುಗಳನ್ನೇ ಸವಾಲಾಗಿ ಸ್ವೀಕರಿಸಿದ್ದೇನೆ. ನನ್ನ ನೇಮಕಾತಿ ವಿರುದ್ಧ ಧಾರವಾಡದಲ್ಲಿ ಪ್ರತಿಭಟನೆಗಳು ನಡೆದವು. ಆಗ ಪ್ರತಿಭಟಿಸಿದವರು ಈಗ ಪ್ರೋತ್ಸಾಹಿಸುತ್ತಿದ್ದಾರೆ. ಇಚ್ಛಾಶಕ್ತಿಯಿದ್ದರೆ ಏನನ್ನಾದರೂ ಮಾಡಬಹುದು. ನಾನು ಕೇವಲ ಟಿ.ಎ/ಡಿ.ಎ ಪಡೆಯುವ ಅಧ್ಯಕ್ಷನಾಗಲಾರೆ.* ಅಧ್ಯಕ್ಷರಾಗಿ ಏನು ಮಾಡುತ್ತೀರಿ? ನಿಮ್ಮ ಕಾರ್ಯಸೂಚಿ ಏನು?

ಕಳೆದ ನವೆಂಬರ್ 22ರಂದು ಅಧಿಕಾರ ವಹಿಸಿಕೊಂಡೆ. ನಂತರದ ಒಂದೇ ವಾರದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂತು. ಒಂದು ತಿಂಗಳು ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿರುವೆ. ಮಕ್ಕಳಿಗಾಗಿ ದುಡಿಯುತ್ತಿರುವ ಸಂಘಟನೆಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು, ಸಾಹಿತಿಗಳು, ರಂಗಕರ್ಮಿಗಳನ್ನು ಆಹ್ವಾನಿಸಿ ಅವರ ಜತೆಯಲ್ಲಿ ಸಮಾಲೋಚನೆ  ಮಾಡಿದ್ದೇನೆ. ನಮ್ಮ ಅಕಾಡೆಮಿ ಏನು ಮಾಡಬಹುದೆಂದು ಎಂಬುದನ್ನು ಕುರಿತು ಚರ್ಚಿಸಿದ್ದೇನೆ. ಕೆಲವು ಮಠಾಧೀಶರ ಸಲಹೆಯನ್ನೂ ಕೇಳಿರುವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ.ಇದೇ ತಿಂಗಳಲ್ಲಿ ಚೆನ್ನೈ ಮೂಲದ ಭಾರತೀಯ ಮಕ್ಕಳ ಚಲನಚಿತ್ರ ಸಂಘದ ಆಶ್ರಯದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಲ್ಲದೆ ಅಣ್ಣಿಗೇರಿ, ಕಲಘಟಗಿ ಹಾಗೂ ಕುಂದಗೋಳದಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಯಿತು. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಸೇರಿ ಒಟ್ಟು ಹನ್ನೆರಡು ಮಕ್ಕಳ ಸಿನಿಮಾಗಳನ್ನು ಪ್ರದರ್ಶನ ಮಾಡಿದೆವು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಹಿಡಿದು ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಿನಿಮಾಗಳನ್ನು ನೋಡಿದರು. ಈ ಚಿತ್ರೋತ್ಸವ ಎರಡು ಹಂತಗಳಲ್ಲಿ ನಡೆಯಿತು.ಇದಲ್ಲದೆ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ವಸತಿ ಶಾಲೆ ನಿಲಯ ಪಾಲಕರು ಹಾಗೂ ಮುಖ್ಯಸ್ಥರ ಪಾತ್ರ ಕುರಿತು ಬೆಳಗಾವಿ ವಿಭಾಗ ಮಟ್ಟದ ಒಂದು ದಿನದ ಕಾರ್ಯಗಾರವನ್ನು ಜನವರಿ 13ರಂದು ಧಾರವಾಡದಲ್ಲಿ ನಡೆಸಿದೆವು. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬಾಲಮಂದಿರಗಳ ನಿಲಯ ಪಾಲಕರು ಮತ್ತು ಮುಖ್ಯೋಪಾಧ್ಯಾಯರನ್ನು ಆಹ್ವಾನಿಸಲಾಗಿತ್ತು. ಮೈಸೂರು, ತುಮಕೂರು ಹಾಗೂ ಬಳ್ಳಾರಿ ವಿಭಾಗದಲ್ಲಿ ಕಾರ್ಯಾಗಾರ ವಿಸ್ತರಿಸುವ ಯೋಜನೆಯಿದೆ.* ಮಕ್ಕಳ ಮನೋವಿಕಾಸಕ್ಕೆ ಯಾವ ಕಾರ್ಯಕ್ರಮ ರೂಪಿಸಿದ್ದೀರಿ?

‘ರಾಜ್ಯದ 30 ಜಿಲ್ಲೆಗಳಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ಅಗತ್ಯವಾದ ಮನಸ್ಥಿತಿ ಬೆಳೆಸುವ ತರಬೇತಿಯನ್ನು ಫೆಬ್ರವರಿ ಅಂತ್ಯದೊಳಗೆ ನೀಡುವ ಉದ್ದೇಶವಿದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥೈರ್ಯ ಹೆಚ್ಚುತ್ತದೆ. ಪ್ರತಿ ಜಿಲ್ಲೆಯಿಂದ 500 ವಿದ್ಯಾರ್ಥಿಗಳನ್ನು ತರಬೇತಿಗೆ ಆಯಾ ಜಿಲ್ಲೆಯ ಅನುಷ್ಠಾನ ಸಮಿತಿ ಆಯ್ಕೆ ಮಾಡುತ್ತದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ನೇತೃತ್ವದಲ್ಲಿ ತರಬೇತಿ ನಡೆಯುತ್ತದೆ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಗದರ್ಶಕರಾಗಿರುತ್ತಾರೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ 20 ಸಾವಿರ ರೂ ಅನುದಾನ ಬಿಡುಗಡೆ ಮಾಡುತ್ತೇವೆ. ಪ್ರತಿ ಜಿಲ್ಲೆಯ ಐನೂರು ವಿದ್ಯಾರ್ಥಿಗಳಲ್ಲಿ 250 ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದರಾಗಿರುತ್ತಾರೆ. ಈ ಕಾರ್ಯಕ್ರಮದಿಂದ ಈ ವರ್ಷ 15 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.‘ಮಕ್ಕಳ ಮಿತ್ರಪಡೆ’ ರಚಿಸುವ ಉದ್ದೇಶವಿದೆ. ಮಕ್ಕಳ ವ್ಯಕ್ತಿತ್ವ ವಿಕಾಸಕ್ಕಾಗಿ ಪ್ರತಿ ಶನಿವಾರ ಅಥವಾ ಭಾನುವಾರ ಗುಡಿಗಳು, ಪಂಚಾಯಿತಿ ಕಟ್ಟೆ ಹೀಗೆ ಪ್ರತಿ ಊರಿನ ಪ್ರಮುಖ ಸ್ಥಳದಲ್ಲಿ ಮಕ್ಕಳು ಸೇರಿ ಚರ್ಚಿಸುತ್ತಾರೆ. ಇದರಲ್ಲಿ ಊರ ಹಿರಿಯರೂ ಮಕ್ಕಳೊಂದಿಗೆ ಭಾಗವಹಿಸುತ್ತಾರೆ.  ಈ ವರ್ಷ ಧಾರವಾಡ, ದಾವಣಗೆರೆ, ವಿಜಾಪುರ ಹಾಗೂ ಹಾವೇರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದರ ಸಾಧಕ-ಬಾಧಕಗಳನ್ನು ಗಮನಿಸಿ ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ.

ಈ ವರ್ಷ ಮಕ್ಕಳಿಗಾಗಿ ವಸತಿಸಹಿತ ಬೇಸಿಗೆ ಶಿಬಿರ ಆಯೋಜಿಸುತ್ತೇವೆ. ಐದರಿಂದ ಎಂಟನೆ ತರಗತಿಯ ವಿದ್ಯಾರ್ಥಿಗಳನ್ನು ಸೇರಿಸಿ ವಿಭಿನ್ನ ಶಿಬಿರಗಳನ್ನು ನಡೆಸುವ ಉದ್ದೇಶವಿದೆ.* ಬಾಲವಿಕಾಸ ಅಕಾಡೆಮಿ ಧಾರವಾಡಕ್ಕೆ ಸೀಮಿತವಾಗಿದೆ. ಅಕಾಡೆಮಿ ಕಾರ್ಯ ಚಟುವಟಿಕೆಗಳು ಚಾಮರಾಜನಗರ, ಬೀದರ್ ಜಿಲ್ಲೆಗಳಿಗೆ ತಲುಪುವುದು ಯಾವಾಗ?

ಅಕಾಡೆಮಿ ಧಾರವಾಡಕ್ಕೆ ಸೀಮಿತವಾಗಿಲ್ಲ. ಫೆಬ್ರುವರಿಯಿಂದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಪ್ರತಿ ಜಿಲ್ಲೆಯ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಅಕಾಡೆಮಿಯ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತೇನೆ.  ನಂತರ ಅಕಾಡೆಮಿಯ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವೆ.* ಅಕಾಡೆಮಿಯ ಇತರ ಯೋಜನೆಗಳೇನು?

ಮಕ್ಕಳ ಸಾಹಿತಿಗಳ, ತಜ್ಞರ, ಮಕ್ಕಳಿಗಾಗಿ ದುಡಿಯುವ ಸರ್ಕಾರೇತರ ಸಂಸ್ಥೆಗಳ, ಮಕ್ಕಳ ರಂಗಭೂಮಿಗಾಗಿ ದುಡಿಯವವರ ಮಾಹಿತಿ ಕುರಿತ ಕೈಪಿಡಿ ಪ್ರಕಟಿಸುವ ಯೋಜನೆಯಿದೆ. ಇದು ಜಿಲ್ಲಾವಾರು ಕೈಪಿಡಿಯಾಗಿರುತ್ತದೆ. ಇದರಿಂದ ಎಲ್ಲರ ನಡುವೆ ಸಂಪರ್ಕ ಸುಲಭ ಸಾಧ್ಯವಾಗುತ್ತದೆ.ಐವತ್ತು ಎಕರೆ ಪ್ರದೇಶದಲ್ಲಿ ಮಕ್ಕಳಿಗಾಗಿ ‘ಜ್ಞಾನ ಸಮುಚ್ಚಯ’ ನಿರ್ಮಿಸುವ ಯೋಜನೆ ಇದೆ. ಅದರಲ್ಲಿ ಈಜುಗೊಳ, ಗ್ರಂಥಾಲಯ, ಪ್ರಾಣಿ, ಪಕ್ಷಿಗಳ ಸಂಗ್ರಹಾಲಯ, ಎಲ್ಲ ಆಟಗಳನ್ನು ಆಡಲು ಅನುಕೂಲಕರವಾದ ಪರಿಸರವನ್ನು ಈ ಸಮುಚ್ಛಯ ಒಳಗೊಂಡಿರುತ್ತದೆ.ಮಕ್ಕಳ ಆಸಕ್ತಿ ಗುರುತಿಸಲು ಅನೇಕ ಆಟಿಕೆ ಮತ್ತಿತರ ವಸ್ತುಗಳನ್ನು ಒಂದೆಡೆ ಇಡುತ್ತೇವೆ. ಮಕ್ಕಳ ಆಸಕ್ತಿಗಳನ್ನು ದಾಖಲಿಸಿಕೊಳ್ಳುತ್ತೇವೆ. ಇದರಿಂದ ಮಕ್ಕಳ ಮನೋವಿಕಾಸದ ಸಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಅನುಕೂಲ.

ಪರಿಸರ ರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಪ್ಲಾಸ್ಟಿಕ್ ಬಳಸದ ಹಾಗೆ ತಿಳಿವಳಿಕೆ ನೀಡುತ್ತೇವೆ. ಮರ, ಗಿಡಗಳನ್ನು ನೆಟ್ಟು ಬೆಳೆಸುವ ಕುರಿತು ಮಾಹಿತಿ ನೀಡುತ್ತೇವೆ. ಪರಿಸರ ಕುರಿತು ಸ್ಪರ್ಧೆ ಏರ್ಪಡಿಸುತ್ತೇವೆ.ಮಕ್ಕಳ ಪ್ರತಿಭಾ ವಿಕಾಸಕ್ಕೆ ಸೂಕ್ತ ವೇದಿಕೆಗಳಿಲ್ಲ. ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ಅವಕಾಶ ಕೊಡುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.