ಗುರುವಾರ , ಜೂಲೈ 9, 2020
21 °C

ಸಂಭ್ರಮದ ಗ್ರಾಮೀಣ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮದ ಗ್ರಾಮೀಣ ನಾಟಕೋತ್ಸವ

ಶಿಗ್ಗಾಂವ: ಕರ್ನಾಟಕ ನಾಟಕ ಅಕಾಡೆಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಕಾಪುರ ಪುರಸಭೆ ಮತ್ತು ಬಂಗಾರ ಬಸವೇಶ್ವರ ಯುವಕ ಸಂಘದ ಸಹಯೋಗದಲ್ಲಿ ಬಂಗಾರಬಸವಣ್ಣ ದೇವರ 26ನೇ ರಥೋತ್ಸವ ಅಂಗವಾಗಿ ತಾಲ್ಲೂಕಿನ ಬಂಕಾಪುರದ ಕೊಟ್ಟಿಗೇರಿಯಲ್ಲಿ ಈಚೆಗೆ ಅಂತರ ಜಿಲ್ಲಾ ಗ್ರಾಮೀಣ ನಾಟಕೊತ್ಸವ ‘ಗ್ರಾಮೀಣ ರಂಗಹಬ್ಬ’ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.ಫಕ್ಕೀರೇಶ ಕೊಂಡಾಯಿ ಹುಲಸೋಗಿ ಪ್ರಸ್ತುತ ಪಡಿಸಿದ ‘ಪಾರ್ಥ ಪ್ರತಿಜ್ಞೆ’ ದೊಡ್ಡಾಟ ಜನಮನ ಸೆಳೆಯಿತು. ಮಕ್ಕಳೇ ಹೆಚ್ಚಿನ ಪಾತ್ರವಹಿಸಿ ಯುವ ಪಾತ್ರದಾರರಿಗೆ ಮಾದರಿಯಾದರು. ಯುವ ಕಥೆಗಾರ ಬಸವರಾಜ ಶಿಗ್ಗಾಂವಿಯವರ ದೊಡ್ಡಾಟ ರಂಗಗೀತೆಗೆಗಳಿಗೆ ಜನರು ತಲೆದೂಗಿದರು.ದಾವಣಗೆರೆಯ ಎಲೆಬೆತ್ತೂರಿನ ಬಸವೇಶ್ವರ ಸಾಂಸ್ಕೃತಿಕ ಸಂಘದ ಎನ್.ಎಸ್.ರಾಜು ಮತ್ತು ತಂಡದವರಿಂದ ‘ಮುದುಕನ ಮದುವೆ’  ಹಾಸ್ಯ ನಾಟಕ ಜನರನ್ನು ನಗೆಗಡಲಲ್ಲಿ ತೇಲಿಸಿತು.ಮುಂಡರಗಿಯ ಹವ್ಯಾಸಿ ಕಲಾವೃಂದದ ವೈ.ಎನ್ ಗೌಡರ ತಂಡದವರು ಅಭಿನಯಿಸಿದ ಕವಿ ಕಂದಗಲ್ ಹನುಮಂತರಾಯ ವಿರಚಿತ ಪೌರಾಣಿಕ ರೌದ್ರನಾಟಕ ‘ರಕ್ತರಾತ್ರಿ’ ಮತ್ತೊಮ್ಮೆ ಮಾಹಾಭಾರ ತದ ಸನ್ನಿವೇಶಗಳನ್ನು ಕಣ್ಣಮುಂದೆ ತಂದಿತು.  ಶಕುನಿ, ಅಶ್ವತ್ಥಾಮ ಹಾಗೂ ದ್ರೌಪದಿ ಪಾತ್ರದಾರಿಗಳು ವೇದಿಕೆಯತ್ತ ಬರುತ್ತಿದಂತೆ ಜನ ಎಚ್ಚತ್ತು ಕುಳಿತು ವೀಕ್ಷಿಸುತ್ತಿದ್ದರು.ದಾವಣಗೆರಿಯ ವಿನಾಯಕ ಸಾಂಸ್ಕೃತಿಕ ಸಂಘ ಚಿಗಟೆರಿಯ ಮಂಜುನಾಥ ಮೇಟಿ ತಂಡದವರು ‘ವಹಾತ್ಯಾಗ’ ನಾಟಕ ಪ್ರದರ್ಶಿಸಿದರು.ಶ್ರಿದೇವಿ ಗದಗ ಅವರ ರಂಗ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ತಿಳುವಳ್ಳಿಯ ವಿದ್ಯಾನಿಕೇತನ ತಂಡದವರು ರವೀಂದ್ರನಾಥ ಟ್ಯಾಗೋರ ರಚಿಸಿದ ‘ಪಂಜರದ ಶಾಲೆ’ ಮಕ್ಕಳ ನಾಟಕ ಪ್ರಸ್ತುತಪಡಿಸಿದರು. ಮಕ್ಕಳು 45 ನಿಮಿಷದ ಅವಧಿಯಲ್ಲಿ ಸರ್ಕಾರದ ಅವೈಜ್ಞಾನಿಕ ಶೈಕ್ಷಣಿಕ ಯೋಜನೆಯನ್ನು ಟೀಕಿಸುವ ಜತೆಗೆ ಪರಿಸರ ಪೂರಕ ಶಿಕ್ಷಣದ ಭೋದನೆಯನ್ನು ಎತ್ತಿ ತೋರಿಸಿದರು.‘ವೀರ ರಾಣಿ ಕಿತ್ತೂರು ಚೆನ್ನಮ್ಮ’ ನಾಟಕವನ್ನು ಅಖಿಲ ಕರ್ನಾಟಕ ಶ್ರಿದೇವಿ ಮಹಿಳಾ ರಂಗಭೂಮಿ ಕಲಾವಿದೆಯರು ಪ್ರಸ್ತುತಪಡಿಸಿದರು. ಚೆನ್ನಮ್ಮನ ಪಾತ್ರದಾರಿ ಶ್ರಿದೇವಿ ಗದಗ ಪಾತ್ರಕ್ಕೆ ಜೀವ ಕಳೆ ತುಂಬಿ ಉತ್ತಮವಾಗಿ ಅಭಿನಯಸಿ ಕಿತ್ತೂರು ಸಂಸ್ಥಾನದ ಐತಿಹಾಸಿಕ ಗತವೈಭವ ಮತ್ತು ಚೆನ್ನಮ್ಮನ ಆಡಳಿತದಲ್ಲಿ ಬ್ರಿಟಿಷ್ ಸಾಮ್ರಾಜ ನಡೆಸಿದ ಕುತಂತ್ರದ ಏರಿಳಿತವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.