ಸೋಮವಾರ, ಜನವರಿ 20, 2020
20 °C

ಸಂಭ್ರಮ ಕಸಿದ ಸಂಕ್ರಾಂತಿ

ಪ್ರಜಾವಾಣಿ ವಾರ್ತೆ/ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಕೆಜಿಎಫ್: ಪೊಂಗಲ್ (ಸಂಕ್ರಾಂತಿ) ಹಬ್ಬದ ಮಾರನೇ ದಿನ ನಗರದಲ್ಲಿ ನಡೆಯುವ ಮಾಟ್ಟು ಪೊಂಗಲ್ (ರಾಸುಗಳ ಪೊಂಗಲ್) ಕೆಎನ್‌ಜೆಎಸ್ ಬ್ಲಾಕ್‌ನ ದಿನಗೂಲಿ ನೌಕರ ವೇಲು (40) ಕುಟುಂಬಕ್ಕೆ ಸಡಗರ ತರುವ ಬದಲು ಸಂಕಟ ತಂದಿದೆ. ಸಾವಿನ ಸೂತಕ ಮೂಡಿಸಿದೆ.ಕಾಲೋನಿಯಲ್ಲಿ ನಡೆಯುತ್ತಿದ್ದ ಎತ್ತುಗಳ ಓಟದ ಸ್ಪರ್ಧೆಯನ್ನು ನೋಡಲು ಹೋಗಿದ್ದ ವೇಲು ಎತ್ತುಗಳ ಆರ್ಭಟಕ್ಕೆ ಸಿಕ್ಕಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಟುಂಬದ ಏಕೈಕ ಆಧಾರವಾಗಿದ್ದ ಅವರ ಸಾವಿನಿಂದ ಮೂರು ಮಕ್ಕಳಿರುವ ಕುಟುಂಬ ಅನಾಥವಾಗಿದೆ.ಎತ್ತುಗಳ ಓಟದ ಸ್ಪರ್ಧೆ ಮೊದಲಿನಿಂದಲೂ ಕೆಜಿಎಫ್‌ನಲ್ಲಿ ಜನಪ್ರಿಯ ಕ್ರೀಡೆ. ಮೊದಮೊದಲು ಸಾಧಾರಣವಾಗಿ ನಡೆಯುತ್ತಿದ್ದ ಸ್ಪರ್ಧೆ ನಂತರ ಕಾಲೋನಿಗಳ ನಡುವಿನ ಪ್ರತಿಷ್ಠೆಯಾಗಿ ಪರಿಣಮಿಸಿತು.ರಾಜಕೀಯ ವ್ಯಕ್ತಿಗಳು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಸಹಾಯ ಮಾಡತೊಡಗಿದರು. ಆದರೆ  ಸ್ಪರ್ಧೆಯ ಜನಪ್ರಿಯತೆ ಹೆಚ್ಚಿದಷ್ಟು  ಸುರಕ್ಷತೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.ಕೆಎನ್‌ಜೆಎಸ್ ಬ್ಲಾಕ್ ಮತ್ತು ಎಸ್‌ಟಿ ಬ್ಲಾಕ್‌ನಲ್ಲಿ ಸುರಕ್ಷಿತ ಪ್ರದೇಶವಲ್ಲದ ಸ್ಥಳದಲ್ಲಿ ಜನರು ನಿಂತು ವೀಕ್ಷಣೆ ಮಾಡಿದ್ದರಿಂದ ಹಲವಾರು ಮಂದಿ ಗಾಯಗೊಂಡು ಒಬ್ಬರು ಮೃತರಾಗಲು ಕಾರಣವಾಯಿತು.ಸಂಘಟಕರ ನಿರ್ಲಕ್ಷ್ಯ ಮತ್ತು ಪೊಲೀಸರ ಕರ್ತವ್ಯ ಲೋಪ ಈ ನಿಟ್ಟಿನಲ್ಲಿ ಎದ್ದು ಕಾಣುತ್ತಿದೆ.  ಸ್ಪರ್ಧೆಗಳನ್ನು ನಡೆಸುವ ಆಯೋಜಕರು ಯಾವುದೇ ಪೂರ್ವ ಸಿದ್ಧತೆ ಹಾಗೂ ಅಪಾಯದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಇರುವ ಕಡೆಗೆ ಈ ಅವಘಡ ಬೆರಳು ತೋರಿದೆ ಎಂಬ ಚರ್ಚೆ ನಗರದಲ್ಲಿ ನಡೆಯುತ್ತಿದೆ.ಎರಡೂ ಕಾಲೋನಿಗಳಲ್ಲಿ ರಾಸುಗಳ ಓಟವನ್ನು ಸುರಕ್ಷಿತವಾಗಿ ನೋಡಲು ಸಯನೈಡ್ ದಿಬ್ಬಗಳು ಇವೆ. ಅವುಗಳ ಮೇಲೆ ನಿಂತು ಎತ್ತುಗಳ ಓಟವನ್ನು ಸುರಕ್ಷಿತವಾಗಿ ನೋಡಬಹುದು.  ಎತ್ತುಗಳು ಓಡಲು ಶುರುಮಾಡಿದಾಗ ಶಬ್ದ ಮತ್ತಿತರ ಕಾರಣದಿಂದ ಯರ‌್ರಾಬಿರ‌್ರಿಯಾಗಿ ಓಡಲು ಶುರು ಮಾಡುತ್ತದೆ.ಆದ್ದರಿಂದ ಪ್ರಾರಂಭ ಸ್ಥಳದಿಂದ ಇಂಗ್ಲಿಷ್‌ನ ವಿ ಆಕಾರದಲ್ಲಿ ಕಟಕಟೆ ನಿರ್ಮಿಸಬೇಕು. ಅದರಿಂದಾಗಿ ಎತ್ತುಗಳು ಶಬ್ದ ಮತ್ತು ಜನರ ಕೇಕೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಸಾಧ್ಯವಾಗುತ್ತದೆ ಎಂಬುದು ಹಲವರ ಅಭಿಮತ.ಆದರೆ ಎರಡೂ ಬ್ಲಾಕ್‌ಗಳಲ್ಲಿ ಸುಮಾರು ಹದಿನೈದು ಅಡಿ ಅಗಲದ ಕಟಕಟೆಗಳನ್ನು ಸುಮಾರು ಇನ್ನೂರು ಮೀಟರ್‌ಗಳಷ್ಟು ದೂರ ಸಮಾನಾಂತರವಾಗಿ ನಿರ್ಮಿಸಲಾಗಿತ್ತು. ಅಲ್ಲದೆ ಕಟಕಟೆಗಳನ್ನು ದಾಟಿ ಒಳಬಂದ ಉತ್ಸಾಹಿಗಳು ಓಡಿಬರುತ್ತಿದ್ದ ಎತ್ತುಗಳನ್ನು ಮತ್ತಷ್ಟು ಬೆದರಿಸುವ ಕೆಲಸ ಮಾಡುತ್ತಿದ್ದರು.ಅಂತಹ ಅತ್ಯುತ್ಸಾಹಿಗಳನ್ನು ತಡೆಯಲು ಪೊಲೀಸರಾಗಲಿ, ಸಂಘಟಕರಾಗಲಿ ವ್ಯವಸ್ಥಿತವಾಗಿ ಪ್ರಯತ್ನಪಡದಿರುವುದು ಕಂಡು ಬಂದಿತ್ತು. ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ದುರ್ಘಟನೆ ನಡೆದಿದೆ ಎಂಬುದು ಸ್ಥಳದಲ್ಲಿದ್ದ ಕೆಲವರ ಅಭಿಪ್ರಾಯ.`ಪೊಲೀಸರ ಕೆಲಸ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರ. ಬಂದೋಬಸ್ತ್ ಮಾಡುವುದು ಸಂಘಟಕರ ಜವಾಬ್ದಾರಿ. ಇಂತಹ ಕಾರ್ಯಕ್ರಮ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮುನ್ನೆಚ್ಚರಿಕೆ ಸಲುವಾಗಿ ಪೊಲೀಸರಿಂದ ಯಾರೂ ವರದಿ ಪಡೆಯುತ್ತಿಲ್ಲ~ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ ಆಕ್ಷೇಪದ ನುಡಿ.`ಸಾಮಾನ್ಯವಾಗಿ ಹಳ್ಳಿಕಾರ್ ಎತ್ತುಗಳನ್ನು ಓಟಕ್ಕೆ ಬಳಸುತ್ತಾರೆ. ನೋಡಲು ದಷ್ಟಪುಷ್ಟವಾಗಿರದಿದ್ದರೂ ಬಲಿಷ್ಠವಾಗಿರುತ್ತವೆ. ಅವುಗಳಿಗೆ ಖಾರದ ಪುಡಿ ಅಥವಾ ಕತ್ತಾಳೆ ರಸ ಕುಡಿಸುತ್ತಾರೆ. ಅದರಿಂದ ಗಾಬರಿ, ಸಂಕಟಕ್ಕೆ ಈಡಾಗುವ ಅವು ಎಲ್ಲೆಂದರಲ್ಲಿ ಓಡಲಾರಂಭಿಸುತ್ತವೆ.ಕೆಲವು ಸಂದರ್ಭದಲ್ಲಿ ಮತ್ತು ಬರುವ ಪಾನೀಯಗಳನ್ನು ಸಹ ಎತ್ತುಗಳಿಗೆ ಕುಡಿಸುತ್ತಾರೆ~ ಎಂದು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯರಾಂ ವಿವರಣೆ ನೀಡುತ್ತಾರೆ.ದುರ್ಘಟನೆ ನಡೆದ ಬಳಿಕ ಈಗ ಪೊಲೀಸರು, ವೇಲು ಸಾವಿಗೆ ಕಾರಣನಾದ ಎತ್ತಿನ ಮಾಲೀಕ ಮತ್ತು ಸಂಘಟಕರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಮುನ್ನೆಚ್ಚರಿಕೆ ಪಾಠಗಳು ಮಾತ್ರ ದೂರವೇ ಉಳಿದಿವೆ.

ಪ್ರತಿಕ್ರಿಯಿಸಿ (+)