ಭಾನುವಾರ, ಏಪ್ರಿಲ್ 18, 2021
25 °C

ಸಂಸತ್ತಿಗೆ ಮೆರವಣಿಗೆ: ಮಾರ್ಗಮಧ್ಯದಲ್ಲೇ ರಾಮದೇವ್, ಬೆಂಬಲಿಗರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್ತಿಗೆ ಮೆರವಣಿಗೆ: ಮಾರ್ಗಮಧ್ಯದಲ್ಲೇ ರಾಮದೇವ್, ಬೆಂಬಲಿಗರ ಬಂಧನ

ನವದೆಹಲಿ (ಐಎಎನ್ಎಸ್/ ಪಿಟಿಐ): ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಪ್ರತಿಭಟಿಸಿ ಸಂಸತ್ತಿಗೆ ಮೆರವಣಿಗೆಯಲ್ಲಿ ಹೊರಟ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಸಹಸ್ರಾರು ಬೆಂಬಲಿಗರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ಬಂಧಿಸಿದ್ದಾರೆ.ಮಧ್ಯಾಹ್ನ 1.15ಕ್ಕೆ ರಾಮದೇವ್ ಕರೆಯ ಮೇರೆಗೆ ಮೆರವಣಿಗೆ ಆರಂಭವಾಗಿತ್ತು. ಕೇಂದ್ರ ದೆಹಲಿಯ ರಣಜಿತ್ ಸಿಂಗ್ ಮೇಲ್ಸೇತುವೆಯಲ್ಲಿ ರಾಮ ದೇವ್ ಅವರನ್ನು ತಡೆ ಹಿಡಿದು ಬಂಧಿಸಲಾಯಿತು.ಸ್ಥಾನಬದ್ಧತೆಗೆ ಒಳಗಾಗಿರುವ ಪ್ರತಿಭಟನಕಾರರನ್ನು ಬಸ್ಸುಗಳ ಮೂಲಕ ರಾಜೇಂದ್ರ ಪ್ರಸಾದ್ ಕ್ರೀಡಾಂಗಣಕ್ಕೆ ಒಯ್ಯಲಾಗಿದ್ದು, ಅವರನ್ನು ಕ್ರೀಡಾಂಗಣದಲ್ಲಿಯೇ ಬಂಧನದಲ್ಲಿ ಇಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಮುನ್ನ ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಸೋಮವಾರ ಇಲ್ಲಿ ಘೋಷಿಸಿದ ಯೋಗ ಗುರು ಬಾಬಾ ರಾಮದೇವ್ ಅವರು ~ಭ್ರಷ್ಟ ಸಂಸತ್ ಸದಸ್ಯರು ನಮ್ಮ ಮಾತುಗಳನ್ನು ಆಲಿಸಬೇಕು. ಅದಕ್ಕಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ತೆರಳಲು ನನಗೆ ಅವಕಾಶ ನೀಡಬೇಕು~ ಎಂದು ಹೇಳಿದರು. ಆದರೆ ಹಾಗೆ ಮಾಡಲು ಅವರಿಗೆ ಅನುಮತಿ ಸಿಗದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಂದಿನ ಹಂತಕ್ಕೆ ಸಜ್ಜಾಗಿ ಎಂದು ರಾಮಲೀಲಾ ಮೈದಾನದಲ್ಲಿ ತಮ್ಮ ಬೆಂಬಲಿಗರಿಗೆ ಕರೆ ನೀಡಿದ ಯೋಗ ಗುರು ~ಶಾಂತಿಯುತವಾಗಿ ಸಂಸತ್ತಿನಡೆಗೆ ಮೆರವಣಿಗೆ ನಡೆಸುತ್ತೇವೆ. ಮುಂದಿನ ಸಲ ಒಬ್ಬನೇ ಒಬ್ಬ ಭ್ರಷ್ಟ ನಾಯಕನೂ ಚುನಾಯಿತನಾಗಲು ನಾವು ಬಯಸುವುದಿಲ್ಲ. ಆದ್ದರಿಂದ ನಮ್ಮನ್ನು ತಡೆಯಬೇಡಿ. ನಮ್ಮ ಮಾತುಗಳನ್ನು ಆಲಿಸಬೇಕು ಎಂದಷ್ಟೇ ನಾವು ಬಯಸುತ್ತಿದ್ದೇವೆ~ ಎಂದು ನುಡಿದರು.~ಅಹಿಂಸೆ ಮತ್ತು ಶಾಂತರಾಗಿರಿ~ ಎಂದು ಬೆಂಬಲಿಗರಿಗೆ ಸೂಚಿಸಿದ ಅವರು, ಇದೇ ಸ್ಥಳದಲ್ಲಿ  2011ರ ಚಳವಳಿಯನ್ನು ನೆನಪಿಸಿದರು. ~ದೆಹಲಿ ಪೊಲೀಸರೂ ಕಳೆದ ಬಾರಿ ಮಾಡಿದಂತೆ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ~ ಎಂದು ರಾಮದೇವ್ ಹೇಳಿದರು.2011ರ ಜೂನ್ ನಲ್ಲಿ ಇದೇ ರಾಮಲೀಲಾ ಮೈದಾನದಲ್ಲಿ ಯೋಗಗುರು ಇಂತಹುದೇ ಪ್ರತಿಭಟನೆ ಸಂಘಟಿಸಿದ್ದರು. ಆದರೆ ದೆಹಲಿ ಪೊಲೀಸರು ನಡೆಸಿದ ನಡುರಾತ್ರಿಯ ಕಾರ್ಯಾಚರಣೆಯಿಂದಾಗಿ ತೀವ್ರ ಗೊಂದಲ ಉಂಟಾಗಿ ಒಬ್ಬ ಮಹಿಳೆ ಮೃತರಾಗಿದ್ದರು. ರಾಮದೇವ್ ಅವರನ್ನು ದೆಹಲಿ ಬಿಟ್ಟು ಹೋಗುವಂತೆ ಬಲಾತ್ಕರಿಸಲಾಗಿತ್ತು.~ರಾಷ್ಟ ವಿರೋಧಿ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಸಮಾಜವಿರೋಧಿ ಶಕ್ತಿಗಳು ಇಲ್ಲಿ ಇರಬಹುದು. ಅವರು ಕಿಡಿಗೇಡಿತನ ಮಾಡಬಹುದು. ಪೊಲೀಸರು ಅಂತಹವರನ್ನು ತತ್ ಕ್ಷಣವೇ ಬಂಧಿಸಬೇಕು~ ಎಂದು ರಾಮದೇವ್ ಹೇಳಿದರು.~ಶೀಘ್ರದಲ್ಲೇ ಆಂದೋಲನದ ಮುಂದಿನ ಹಂತಕ್ಕೆ ಸಿದ್ದರಾಗಲು ಸೂಚನೆ ನೀಡುತ್ತೇನೆ. ಯುವಕರು ಸಂಸತ್ತಿನೆಡೆಗೆ ಸಾಗುವ ಮೆರವಣಿಗೆಯ ನೇತೃತ್ವ ವಹಿಸುವರು~ ಎಂದು ಬೆಂಬಲಿಗರ ಹರ್ಷೋದ್ಘಾರಗಳ ಮಧ್ಯೆ ರಾಮದೇವ್ ಪ್ರಕಟಿಸಿದರು.ಸಂಸತ್ ಭವನದ ಸುತ್ತ ಈದಿನ ಮುಂಜಾನೆಯಿಂದಲೇ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಮಲೀಲಾ ಮೈದಾನದ ಒಳಗೂ ಭಾರಿ ಸಂಖ್ಯೆಯಲ್ಲಿ ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ.ಗಡ್ಕರಿ, ಶರದ್ ಯಾದವ್ ವೇದಿಕೆಗೆ: ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಜೆಡಿ (ಯು) ಮುಖ್ಯಸ್ಥ ಶರದ್ ಯಾದವ್ ಈದಿನ 11.30ರ ವೇಳೆಗೆ ಪ್ರತಿಭಟನಾ ತಾಣಕ್ಕೆ ಬಂದು ಬಾಬಾ ರಾಮದೇವ್ ಅವರ ಜೊತೆಗೆ ವೇದಿಕೆ ಹಂಚಿಕೊಂಡರು.

 

ಕಾಂಗ್ರೆಸ್ಸನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಉಭಯ ನಾಯಕರೂ ~ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲಾಗದ ಯುಪಿಎ ಸರ್ಕಾರವನ್ನು ಕಿತ್ತೊಗೆಯಿರಿ~ ಎಂದು ಜನತೆಗೆ ಕರೆ ನೀಡಿದರು.ಟಿಡಿಪಿ ನಾಯಕ ನಾಮ ನಾಗೇಶ್ವರ ರಾವ್, ಬಿಜೆಪಿ ಸಂಸತ್ ಸದಸ್ಯ ವಿಜಯ ಗೋಯೆಲ್ ಮತ್ತು ಅಕಾಲಿ ದಳ ಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಎನ್ ಡಿಎ ಧುರೀಣರೂ  ಸೋಮವಾರ ರಾಮದೇವ್ ಜೊತೆಗೆ ವೇದಿಕೆಯಲ್ಲಿ ಕುಳಿತು ಆಂದೋಳನಕ್ಕೆ ಬೆಂಬಲ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.