ಭಾನುವಾರ, ಏಪ್ರಿಲ್ 18, 2021
25 °C

ಸಂಸ್ಕೃತ ನಾಟಕಗಳ ಅನುವಾದ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅದ್ವೈತ ವಿಚಾರಗಳು ಸಂಕೀರ್ಣವಾದದ್ದು, ಜನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಗುರು ಮುಖೇನ ಕಲಿಯಬಹುದಾದ ಈ ಅಂಶಗಳನ್ನು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಿಳಿಸಿರುವುದು ಲೇಖಕರ ವೈಶಿಷ್ಠ್ಯ’ ಎಂದು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.ಅಭಿನಯ ಭಾರತಿ ಸಂಸ್ಥೆಯು ಆರ್.ವಿ. ದಂತವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಬಿ.ಜಿ.ಶ್ರೀಲಕ್ಷ್ಮೀ ಅವರ ‘ಅದ್ವೈತ ಆಚಾರ್ಯರು’ ಪುಸ್ತಕ ಮತ್ತು ಡಾ. ಎಸ್.ಆರ್. ಲೀಲಾ ನಿರ್ದೇಶನದ ‘ಬಾಲಚರಿತಂ’ ಸಂಸ್ಕೃತ ನಾಟಕ ಸಿ.ಡಿ ಬಿಡುಗಡೆಗೊಳಿಸಿ  ಮಾತನಾಡಿದರು.‘ತಾತ್ವಿಕ ನೆಲೆಯಲ್ಲಿ ಯೋಚಿಸುವವರ ಪಾಲಿಗೆ ಈ ಕೃತಿಯು ದೊಡ್ಡ ಸಂಪತ್ತು.  ಸಾಂದರ್ಭಿಕಪೂರ್ವಕವಾಗಿರುವ ಈ ಕೃತಿ ಅತ್ಯುತ್ತಮವಾಗಿದ್ದು, ಒಂದೊಮ್ಮೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದಿದ್ದರೆ ಈ ಸಾಲಿನ ಅಕಾಡೆಮಿ ಪ್ರಶಸ್ತಿಯನ್ನು ನೀಡುತ್ತಿದೆ’ ಎಂದು ತಿಳಿಸಿದರು.‘ರಾಮಾಯಣವನ್ನು ವಿಷಯವಸ್ತುವನ್ನಾಗಿಸಿಕೊಂಡ ಸಂಸ್ಕೃತ ನಾಟಕಗಳೇ ಹೆಚ್ಚಿದ್ದು ಅವುಗಳಲ್ಲಿ ಸಮಕಾಲೀನ ವಿಚಾರಧಾರೆಗಳು ಸೇರ್ಪಡೆಯಾಗಬೇಕು. ಸಂಸ್ಕೃತದಲ್ಲಿರುವ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಕರಿಸಬೇಕಿದೆ’ ಎಂದರು.

ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, ‘ವೈಜ್ಞಾನಿಕ ವಿಚಾರಗಳ ಆಧಾರದ ಮೇಲೆ ರೂಪುಗೊಂಡ ಏಕೈಕ ಧರ್ಮ ಹಿಂದೂ ಧರ್ಮ. ಈ ಧರ್ಮವು ಅದ್ವೈತ ಸಿದ್ದಾಂತದ ವಿಚಾರಧಾರೆಯನ್ನು ಹೆಚ್ಚು ಆಳವಡಿಸಿಕೊಂಡಿದೆ’ ಎಂದು ಅಭಿಪ್ರಾಯಪಟ್ಟರು. ‘ಆಧುನಿಕ ಯುಗದ ಮನುಷ್ಯ ಸಂಸ್ಕೃತಿ ಆಳವಡಿಸಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲದನ್ನು ಬಹುಬೇಗ  ಮೆಚ್ಚಿಕೊಂಡಿದ್ದಾನೆ. ಪರಿಣಾಮ ಮಾನವೀಯ ಸಂಬಂಧಗಳಿಗೆ ಮೌಲ್ಯವಿಲ್ಲದಂತಾಗಿದೆ’ ಎಂದು ತಿಳಿಸಿದರು.ಶತಾವಧಾನಿ ಆರ್.ಗಣೇಶ್ ಮಾತನಾಡಿ, ‘ಅದ್ವೈತ ಎಂದರೆ ಶಂಕರಾಚಾರ್ಯರು ಎಂದು ಭಾವಿಸುವವರಿಗೆ ಶಂಕರಾಚಾರ್ಯರ ಮೊದಲು ಅದ್ವೈತ ಸಿದ್ದಾಂತವನ್ನು ರೂಪುಗೊಳಿಸಿದ ಹಲವು ಆಚಾರ್ಯರನ್ನು ಪರಿಚಯಿಸುತ್ತದೆ ಎಂದರು.  ಜೈನ್ ಸಮೂಹ ಸಂಸ್ಥೆಯ ಮಾರ್ಗದರ್ಶಿ ಪ್ರೊ.ಕೆ.ಎಸ್. ಶಾಂತಮಣಿ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.