ಶನಿವಾರ, ಫೆಬ್ರವರಿ 27, 2021
19 °C
ಬಿಜೆಪಿ ಶಾಸಕ ಗೋವಿಂದ ಕಾರಜೋಳ ಲೇವಡಿ

ಸಕ್ಕರೆ ಸಚಿವರಿಗಿಲ್ಲ ಸಾರೋಟಿನ ಯೋಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕ್ಕರೆ ಸಚಿವರಿಗಿಲ್ಲ ಸಾರೋಟಿನ ಯೋಗ!

ಸುವರ್ಣ ವಿಧಾನಸೌಧ: ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಏಳು ಕುದುರೆಗಳ ರಥದಲ್ಲಿ ಮೆರವಣಿಗೆಯಲ್ಲಿ ಹೋಗಬಹುದಾದ ಅವಕಾಶವನ್ನು ತಪ್ಪಿಸಿಕೊಂಡ ಪ್ರಸಂಗಕ್ಕೆ ವಿಧಾನಸಭೆ ಸೋಮವಾರ ಸಾಕ್ಷಿಯಾಯಿತು!‘ಸಚಿವರೇ, ಕಬ್ಬು ಬೆಳೆಗಾರರಿಗೆ ಬರಬೇಕಿರುವ ಬಾಕಿಯನ್ನು ಪಾವತಿಸಲಾಗುವುದು ಎಂದು ಈ ಕ್ಷಣದಲ್ಲೇ ನೀವು ಘೋಷಿಸಿದರೆ ನಿಮ್ಮನ್ನು ನಾನು ಏಳು ಕುದುರೆಗಳಿರುವ ರಥದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯುತ್ತೇನೆ’ ಎಂದು ಬಿಜೆಪಿಯ ಗೋವಿಂದ ಕಾರಜೋಳ ಎರಡೆರಡು ಸಲ ಹೇಳಿದರು. ಆದರೆ ಸಚಿವರು ಮುಗುಳ್ನಗೆಯ ಹೊರತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.‘ಸಚಿವರು ಮೆರವಣಿಗೆಯ ಭಾಗ್ಯ ತಪ್ಪಿಸಿಕೊಂಡರು’ ಎಂದು ವಿರೋಧ ಪಕ್ಷದ ಸದಸ್ಯರಿಬ್ಬರು ವಿಧಾನಸಭೆಯ ಕಲಾಪ ಮುಗಿದ ನಂತರ ತಮ್ಮಲ್ಲೇ ಹೇಳಿಕೊಂಡು ನಸುನಕ್ಕಿದ್ದು ಕಂಡುಬಂತು!ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಕಲಾಪದಲ್ಲಿ ಮಾತನಾಡಿದ ಕಾರಜೋಳ, ‘ಸಕ್ಕರೆ ಕಾರ್ಖಾನೆಗಳ ಗೋದಾಮು ಸ್ವಾಧೀನಕ್ಕೆ ತೆಗೆದುಕೊಂಡಿರುವ ಸರ್ಕಾರ, ಅದರ ಕೀಲಿಯನ್ನು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡು ಅಡ್ಡಾಡಲಿ. ಆದರೆ ರೈತರಿಗೆ ಕೊಡಬೇಕಿರುವ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಿ’ ಎಂದರು.ಕಾರಜೋಳ ಮಾತನಾಡುವ ಸಂದರ್ಭದಲ್ಲಿ, ‘ನೀವು ಆಡಳಿತದಲ್ಲಿ ಇದ್ದಾಗ ಮಾಡಿದ್ದು ಏನು’ ಎಂಬ ಪ್ರಶ್ನೆ ಕಾಂಗ್ರೆಸ್ ಶಾಸಕರ ಕಡೆಯಿಂದ ತೂರಿಬಂತು. ಇದಕ್ಕೆ ಹಾಸ್ಯದ ಧಾಟಿಯಲ್ಲಿ ಉತ್ತರಿಸಿದ ಕಾರಜೋಳ, ‘ನಾವು ಐದು ವರ್ಷ ಗೋಲಿ ಆಡಿದ್ದಕ್ಕೆ ಜನ ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಅಧಿಕಾರಕ್ಕೆ ಬಂದಿರುವ ನೀವು (ಕಾಂಗ್ರೆಸ್ಸಿಗರು) ಚಿನ್ನಿ-ದಾಂಡು ಆಡುತ್ತ ಕಾಲ ಕಳೆಯಬೇಡಿ’ ಎಂದು ಕಾಲೆಳೆದರು.ಒಳ ಒಪ್ಪಂದ: ಸರ್ಕಾರವು ಸಕ್ಕರೆ ಕಾರ್ಖಾನೆಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ರೈತರು ಮಾತನಾಡುತ್ತಿದ್ದಾರೆ. ಸರ್ಕಾರ ಜಪ್ತಿ ಮಾಡಿರುವ ಸಕ್ಕರೆ ಮೇಲೆ ಬ್ಯಾಂಕ್ ಸಾಲ ಇದೆ. ಅದನ್ನು ಮಾರಿ ಬರುವ ಹಣ ಸರ್ಕಾರದ ಖಜಾನೆ ಸೇರಲಿಕ್ಕಿಲ್ಲ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಅನುಮಾನ ವ್ಯಕ್ತಪಡಿಸಿದರು.'ನಿಮ್ಮ ಹಿಂದೆ ನಾನೂ ಜೈಲಿಗೆ...'

ಸರ್ಕಾರದ ಮಾತು ಕೇಳದ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಹಾಕಿ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್.ವಿ.ದೇಶಪಾಂಡೆ ಅವರು ಬಿಜೆಪಿಯ ಉಮೇಶ್ ಕತ್ತಿ ಅವರತ್ತ ತಿರುಗಿ, ‘ನಿಮ್ಮನ್ನು ಜೈಲಿಗೆ ಹಾಕಿ ಎಂದು ನಿಮ್ಮ ನಾಯಕರೇ ಹೇಳುತ್ತಿದ್ದಾರಲ್ಲ’ ಎಂದು ಕಿಚಾಯಿಸಿದರು.

ಇದಕ್ಕೆ ಕತ್ತಿ ಅವರು ಪ್ರತಿಕ್ರಿಯೆ ನೀಡಿ ‘ನಿಮ್ಮಲ್ಲಿನ (ಕಾಂಗ್ರೆಸ್) ನಾಲ್ಕು ಮಂದಿ ಜೈಲಿಗೆ ಹೋದ ನಂತರ ನಾನೂ ಅವರ ಹಿಂದೆ ಹೋಗುತ್ತೇನೆ’ ಎಂದು ಹಾಸ್ಯಚಟಾಕಿ ಹಾರಿಸಿದರು. ಬಳಿಕ ‘ನನ್ನ ಹೆಸರಿನಲ್ಲಿ ಯಾವ ಸಕ್ಕರೆ ಕಾರ್ಖಾನೆಯೂ ಇಲ್ಲ. ನನ್ನ ಮಗನ ಹೆಸರಿನಲ್ಲಿದೆ’ ಎಂದು ಸಮಜಾಯಿಷಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.