ಶುಕ್ರವಾರ, ಏಪ್ರಿಲ್ 23, 2021
23 °C

ಸಕ್ಕರೆ ಸೀಮೆಯಲ್ಲಿ ಅರಿಶಿಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ ಜಿಲ್ಲೆ ಕಬ್ಬು ಬೆಳೆಗೆ ಹೆಸರುವಾಸಿ. ಈಗ ಜಿಲ್ಲೆಯಲ್ಲಿ ಕಬ್ಬಿನ ಜತೆಯಲ್ಲಿ ಅರಿಶಿಣದ ಪರಿಮಳ ಹರಡುತ್ತಿದೆ. ಕಬ್ಬು, ಮೆಕ್ಕೆಜೋಳ, ಗೋಧಿ, ಸದಕ, ಕಡ್ಲಿ, ಈರುಳ್ಳಿ, ಬೆಳ್ಳುಳ್ಳಿ, ಬಾಳೆ ಮತ್ತು ದ್ರಾಕ್ಷಿ ಬೆಳೆಗಳ ಜತೆಗೆ ಅರಿಶಿಣ ಬೆಳೆಯಲು ರೈತರು ಆರಂಭಿಸಿದ್ದಾರೆ. ಅರಿಶಿಣ ಬೆಳೆದು ಅನೇಕರು ಲಾಭ ಗಳಿಸುತ್ತಿದ್ದಾರೆ.ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮವೊಂದರಲ್ಲಿಯೇ ಪ್ರಸಕ್ತ ವರ್ಷ ಸುಮಾರು 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗಿದೆ. ಅರಿಶಿಣ ಬೇಸಾಯ ಮನೆ ಮಂದಿಯ ಶ್ರಮವನ್ನು ನಿರೀಕ್ಷಿಸುತ್ತದೆ. ಶಿರೋಳ ಕ್ರಾಸ್‌ನಲ್ಲಿ ನಾಲ್ಕು ಎಕರೆಯಲ್ಲಿ ಅರಿಶಿಣ ಬೆಳೆದಿರುವ ಯುವ ರೈತ ಸೋಮನಿಂಗ ಬಸಲಿಂಗಪ್ಪ ಅರಿಕೇರಿ 14ಲಕ್ಷ ರೂ. ಆದಾಯದ ನಿರೀಕ್ಷೆಯಲ್ಲಿದ್ದಾರೆ. ಮೇ  ತಿಂಗಳ ಕೊನೆ ವಾರದಲ್ಲಿ ಅರಿಶಿಣದ ಬಿತ್ತನೆ ಆರಂಭವಾಗುತ್ತದೆ. ನಂತರದ ಎಂಟು ತಿಂಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಎಂಟು ತಿಂಗಳು ಬೆಳೆಯನ್ನು ಜೋಪಾನ ಮಾಡಬೇಕು. ಸಕಾಲದಲ್ಲಿ ನೀರು, ಗೊಬ್ಬರ ಕೊಡುವುದು ಮುಖ್ಯ. ಎಂಟು ತಿಂಗಳ ನಂತರ ಗೆಡ್ಡೆಗಳನ್ನು ಭೂಮಿಯಲ್ಲಿಯೇ ಉಳಿಸಿ ಮೇಲಿನ ತೊಪ್ಪಲನ್ನು ಮಾತ್ರ ಕತ್ತರಿಸುತ್ತಾರೆ. ಒಂದು ತಿಂಗಳ ನಂತರ ಗುದ್ದಲಿಯಿಂದ ಅಗೆದು ತೆಗೆದು ಗೆಡ್ಡೆ ಆರಿಸಿ ಸಂಗ್ರಹಿಸುತ್ತಾರೆ.ಗೆಡ್ಡೆಗಳನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿದ ನಂತರ 21ದಿನಗಳ ಕಾಲ ಬಿಸಿಲಲ್ಲಿ ಒಣಗಿಸಿ ಪಾಲಿಶ್ ನೀಡಿದರೆ ಬಂಗಾರದ ಬಣ್ಣದ ಶುದ್ಧ ಅರಿಶಿಣ ಮಾರಾಟಕ್ಕೆ ಸಿದ್ಧವಾಗುತ್ತದೆ. ಅರಿಶಿಣ ಬೆಳೆಯುವುದು ಕಬ್ಬಿಗಿಂತ ಹೆಚ್ಚು ಶ್ರಮ ಬಯಸುತ್ತದೆ. ಆದರೆ ಕಬ್ಬಿಗಿಂತ ಅರಿಶಿಣಕ್ಕೆ ಹೆಚ್ಚು ಲಾಭ ಸಿಗುತ್ತದೆ. ಎಕರೆಗೆ 15 ಕ್ವಿಂಟಲ್ ಬೀಜ ಬಿತ್ತನೆ ಮಾಡಿದರೆ 30ರಿಂದ 35 ಕ್ವಿಂಟಲ್ ಅರಿಶಿಣದ ಜತೆಗೆ 70ಕ್ವಿಂಟಲ್ ಬಿತ್ತನೆ ಬೀಜ ಸಿಗುತ್ತದೆ. ಈಗ ಮಾರುಕಟ್ಟೆಯಲ್ಲಿ ಅಡಿಶಿಣದ ಬೆಲೆ ಕ್ವಿಂಟಲ್‌ಗೆ 13ರಿಂದ18ಸಾವಿರ ರೂ ಇದೆ. ಪ್ರತಿ ಎಕರೆಗೆ ಖರ್ಚು ಕಳೆದು 3.5ಲಕ್ಷ ರೂ ಲಾಭ ಸಿಗುತ್ತದೆ ಎನ್ನುತ್ತಾರೆ ರೈತ ಸೋಮನಿಂಗಪ್ಪ.ಅರಿಶಿಣಕ್ಕೆ ಗೊರ್ಲಿ ಅಥವಾ ಗೊಣ್ಣೆಹುಳಗಳ ಕಾಟ ಹೆಚ್ಚು. ರಾಸಾಯನಿಕ ಸಿಂಪರಣೆಯಿಂದ ನಿಯಂತ್ರಣಕ್ಕೆ ಬಾರದಿದ್ದಾಗ ಸೋಮಲಿಂಗಪ್ಪ ಸುಟ್ಟ ಇಂಜಿನ್ ಆಯಿಲ್‌ಅನ್ನು ನೀರಿನ ಜತೆಯಲ್ಲಿ ಬೆಳೆಗೆ ಹರಿಸಿ ಹುಳುಗಳನ್ನು ನಿಯಂತ್ರಿಸಿದ್ದಾರೆ.

ಸೋಮಲಿಂಗಪ್ಪ ಅವರ ಮೊಬೈಲ್ ನಂಬರ್- 9945878280.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.